ಶನಿವಾರ, ಮೇ 28, 2022
24 °C

ಬಂಜಾರಾ ಸಮಾಜದವರು ಸಂಸ್ಕೃತಿಯ ಪೋಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಬಂಜಾರಾ ಸಮಾಜ ಬಾಂಧವರು ಸಂಸ್ಕೃತಿಯ ಪೋಷಕರು. ಆಧುನಿಕತೆಯ ಭರಾಟೆಯಲ್ಲಿಯೂ ಅವರು ತಮ್ಮ ನೈಜ ಸಂಸ್ಕೃತಿಯನ್ನು ಉಳಿಸಿ-ಬೆಳೆಸುತ್ತಿದ್ದಾರೆ~ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.ತಾಲ್ಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ಮಂಗಳವಾರ ದುರ್ಗಾದೇವಿ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.`ಬಂಜಾರಾ ಸಮಾಜದವರು ಶ್ರಮಜೀವಿಗಳು. ಗೋವಾದಂತಹ ನೆರೆ ರಾಜ್ಯಗಳ ನಿರ್ಮಾಣ, ಅಭಿವೃದ್ಧಿಯಲ್ಲಿ ಬಂಜಾರಾ ಸಮುದಾಯ ಪಾತ್ರ ಮುಖ್ಯವಾಗಿದೆ. ಲಂಡನ್ ಹೈಕಮಿಶನರ್‌ರಾಗಿದ್ದ ಎಲ್.ಆರ್ ನಾಯಿಕ, ಕೆ.ಟಿ. ರಾಠೋಡ ಅವರ ಪ್ರಯತ್ನದಿಂದ ಹಾಗೂ ದೇವರಾಜ ಅರಸು ಅವರ ಬೆಂಬಲದಿಂದ ಕರ್ನಾಟದಲ್ಲಿ ಬಂಜಾರಾ ಸಮಾಜ ಪರಿಶಿಷ್ಟ ಜಾತಿ ವರ್ಗದಲ್ಲಿ ಸೇರ್ಪಡೆಯಾಗಿದ್ದು, ಆ ಮಹನೀಯರನ್ನು   ಸದಾ ಸ್ಮರಿಸಬೇಕಿದೆ~ ಎಂದರು.`ರಾಜ್ಯದಲ್ಲಿ ಅತೀ ಹೆಚ್ಚು ತಾಂಡಾ ಹೊಂದಿದ್ದ ಕೀರ್ತಿ ಹಿಂದಿನ ತಿಕೋಟಾ ವಿಧಾನಸಭಾ ಮತಕ್ಷೇತ್ರಕ್ಕೆ ಪ್ರಾಪ್ತವಾಗಿತ್ತು. ಅದರ ಕೆಲ ಭಾಗವು (ತಾಂಡಾಗಳು) ಇಂದು ನಾಗಠಾಣ ಕ್ಷೇತ್ರಕ್ಕೆ ಸೇರಿವೆ. ಜಲನಿರ್ಮಲ ಯೋಜನೆಯಿಂದ ಪ್ರಥಮವಾಗಿ ತಿಕೋಟಾ ಕ್ಷೇತ್ರದಲ್ಲಿ ಸಮಗ್ರ ತಾಂಡಾ ಅಭಿವೃದ್ಧಿ ಯೋಜನೆಯನ್ನು ರೂಪಿಸಿದ ಹೆಮ್ಮೆ ನನಗಿದೆ~ ಎಂದು ಹೇಳಿದರು.ಈ ಭಾಗದ ಜನರಿಗೆ ಸದುಪಯೋಗವಾಗುವ ಕೆರೆ ನೀರು ತುಂಬುವ ಯೋಜನೆಯ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ರೂ.118 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಈ ವರೆಗೆ ರೂ.108 ಕೋಟಿ ಖರ್ಚುಮಾಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. 640 ಆರ್.ಎಲ್.ಗಿಂತಲೂ ಹೆಚ್ಚಿನ ಎತ್ತರ ಪ್ರದೇಶವಾದ ಈ ಭಾಗಕ್ಕೆ ನೀರಾವರಿ ಕಲ್ಪಿಸಲು ಬಬಲೇಶ್ವರ ಏತ ನೀರಾವರಿ ಯೋಜನೆ ರೂಪಿಸಿದ್ದು, ವಿಸ್ತೃತ ಯೋಜನಾ ವರದಿ ತಯಾರಿಕೆ ಅಂತಿಮ ಹಂತದಲ್ಲಿದೆ. ತಿಕೋಟಾ ಹಾಗೂ ಸುತ್ತಲಿನ 24 ಹಳ್ಳಿಗಳಿಗೆ ನದಿಯಿಂದ  ಶುದ್ಧ ಕುಡಿಯುವ ನೀರು ಪೂರೈಸುವ ರೂ.38 ಕೋಟಿ ವೆಚ್ಚದ ಯೋಜನೆ ರೂಪಿಸಿದ್ದು, ಮುಂದಿನ ವಾರ ಮಂಜೂರಾತಿ ದೊರಕಲಿದೆ ಎಂದರು.ಗೋವಾ ಸರ್ಕಾರದ ನೀರಾವರಿ, ಕೃಷಿ ಸಚಿವ ದಯಾನಂದ ಮಾಂಜ್ರೇಕರ ಮಾತನಾಡಿ, `ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಗೋವಾದಲ್ಲಿ ನಡೆದ ಬಂಜಾರಾ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದೆ. ಬಂಜಾರಾ ಜನಾಂಗದ ಆಶೀರ್ವಾದದಿಂದ ನಾನು ಇಂದು ಸಚಿವನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ~ ಎಂದರು. ಜಗನು ಮಹಾರಾಜ ಸಾನಿಧ್ಯ ವಹಿಸಿದ್ದರು. ಗೋವಾ ರಾಜ್ಯ ಯೋಜನಾ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಶಾಸಕ ಮೈಕೆಲ್ ಲೊಬೋ, ಇಚಲಕರಂಜಿ ಶಾಸಕ ಸುರೇಶ ಹಲವಣಕರ, ಕೊಲ್ಹಾಪುರ ಶಾಸಕ ಚಂದ್ರದೀಪ ನರಕೆ, ಹಿರಾಲಾಲ ರಾಠೋಡ, ಕಿಶನ್‌ರಾವ್ ರಾಠೋಡ, ಮೋತಿರಾಮ ರಾಠೋಡ, ಕೆ.ಬಿ. ರಜಪೂತ್, ವಾಸುದೇವ ಪವಾರ, ರತ್ನಪ್ಪ ರಾಠೋಡ, ಆನಂದ ಅಂಗಡಿ, ವಿಜಯ ಚವ್ಹಾಣ, ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಅರ್ಜುನ ರಾಠೋಡ, ಶಂಕರ ಚವ್ಹಾಣ, ಕೆ.ಎಲ್. ನಾಯಕ, ಸೀನು ರಾಠೋಡ ಮತ್ತಿತರರು ಉಪಸ್ಥಿತರಿದ್ದರು. ದೇಶದ ವಿವಿಧ ಜಾನಪದ ಕಲಾತಂಡಗಳಿಂದ ಪ್ರದರ್ಶನ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.