ಶುಕ್ರವಾರ, ಮೇ 14, 2021
31 °C

ಬಂಟ್ವಾಳ: ಅಲ್ಲಲ್ಲಿ ರಸ್ತೆ ಕುಸಿತ ಭೀತಿ

ಪ್ರಜಾವಾಣಿ ವಾರ್ತೆ/-ಮೋಹನ್ ಕೆ.ಶ್ರೀಯಾನ್ Updated:

ಅಕ್ಷರ ಗಾತ್ರ : | |

ಬಂಟ್ವಾಳ: ತಾಲ್ಲೂಕಿನ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಅಣೆಕಟ್ಟೆ ನಿರ್ಮಿಸಿ ಬಂಟ್ವಾಳ-ಮೂಡುಬಿದ್ರೆ ರಸ್ತೆ ಮೂಲಕ ಸೋರ್ಣಾಡು-ಕೈಕಂಬ ಮಾರ್ಗವಾಗಿ ಮಂಗಳೂರಿನ ವಿಶೇಷ ಆರ್ಥಿಕ ವಲಯಕ್ಕೆ ಬೃಹತ್ ಪ್ರಮಾಣದಲ್ಲಿ ನೀರು ಪೂರೈಸುವ ನಿಟ್ಟಿನಲ್ಲಿ ನಡೆಸಲಾಗಿರುವ ಪೈಪ್‌ಲೈನ್ ಕಾಮಗಾರಿಯಿಂದಾಗಿ ಅಲ್ಲಲ್ಲಿ ರಸ್ತೆ ಕುಸಿತದ ಭೀತಿ ಎದುರಾಗಿದೆ.ಬಂಟ್ವಾಳ-ಮೂಡುಬಿದಿರೆ ರಸ್ತೆಯ ಸೋರ್ಣಾಡು ಎಂಬಲ್ಲಿ ಪೈಪ್‌ಲೈನ್ ಅಳವಡಿಸುವ ವೇಳೆ ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಇದೀಗ ರಸ್ತೆ ಬದಿ ಕುಸಿದಿದೆ. ಪೈಪ್‌ಲೈನ್ ಅಳವಡಿಕೆ ವೇಳೆ 'ಪ್ರಜಾವಾಣಿ' ಮುನ್ನೆಚ್ಚರಿಕೆಯಾಗಿ ಸಚಿತ್ರ ವರದಿ ಪ್ರಕಟಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೀಗ ತರಾತುರಿಯಲ್ಲಿ ಜೆಸಿಬಿ ಮೂಲಕ ರಸ್ತೆ ಬದಿ ಚರಂಡಿ ನಿರ್ಮಾಣ ಮತ್ತು ತಡೆಗೋಡೆ ಕಾಮಗಾರಿ ನಡೆಸಲು ಸಂಸ್ಥೆ ಗುತ್ತಿಗೆದಾರರು ಮುಂದಾಗಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.ಈಗಾಗಲೇ ಸರಪಾಡಿ ಎಂಬಲ್ಲಿ ನೀರು ಸಂಗ್ರಹಕ್ಕಾಗಿ ಜಾಕ್‌ವೆಲ್ ನಿರ್ಮಿಸಲಾಗಿದ್ದು, ಜಕ್ರಿಬೆಟ್ಟುವಿನಲ್ಲಿ ಹೊಸ ಅಣೆಕಟ್ಟೆ ನಿರ್ಮಾಣಕ್ಕೆ ನದಿ ತೀರದಲ್ಲಿ ಭರದಿಂದ ತಯಾರಿ ನಡೆಯುತ್ತಿರುವುದು ಕಂಡು ಬಂದಿದೆ.ಬಂಟ್ವಾಳ- ಸೋರ್ಣಾಡು-ಮುಲ್ಲಾರಪಟ್ನ ಮಾರ್ಗ ಮೂಲಕ ಗುರುಪುರ-ಕೈಕಂಬ ರಸ್ತೆ ಬದಿ ಒಂದೂವರೆ ಮೀ.ವ್ಯಾಸದ ಸಿಮೆಂಟ್ ಪೈಪ್ ಅಳವಡಿಸಲಾಗಿದೆ. ಇದರಿಂದಾಗಿ ಕೆಲವೆಡೆ ರಸ್ತೆ ವಿಸ್ತರಣೆ ಮತ್ತು ಹೊಸ ಮೋರಿ ಅಳವಡಿಕೆ ಮೂಲಕ ನಾಗರಿಕರಿಗೆ ಪ್ರಯೋಜನ ಆಗಿದ್ದರೂ, ಕೆಲವೆಡೆ ಸೂಕ್ತ ಚರಂಡಿ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳದ ಪರಿಣಾಮ ಮುಗ್ಡಾಲ್‌ಗುಡ್ಡೆ, ಲೊರೆಟ್ಟೊ ಮತ್ತಿತರ ಕಡೆಗಳಲ್ಲಿ ನಿರ್ಮಿಸಿರುವ ತಡೆಗೋಡೆ  ಮಳೆಗಾಲ ಆರಂಭದಲ್ಲೇ ಕುಸಿದಿದೆ.ಲೊರೆಟ್ಟೊ ಎಂಬಲ್ಲಿ ಈಗಾಗಲೇ ಬೃಹತ್ ಗಾತ್ರದ ಟ್ಯಾಂಕ್ ನಿರ್ಮಾಣಗೊಂಡಿದ್ದು, ಅಣೆಕಟ್ಟೆ ಮತ್ತು ಟ್ಯಾಂಕ್ ನಿರ್ಮಾಣ ಬಗ್ಗೆ ಇಲ್ಲಿನ ಜನತೆಗೆ ಮಾತ್ರ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ನೀಡಿಲ್ಲ ಎಂಬ ಆರೋಪವಿದೆ. ಪೈಪ್‌ಲೈನ್ ಕಾಮಗಾರಿ ವೇಳೆ ಲೊರೆಟ್ಟೊ ಮತ್ತು ಸೋರ್ಣಾಡು ಎಂಬಲ್ಲಿ ಖಾಸಗಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮತ್ತು ಅತಿಕ್ರಮಣವಾಗಿದೆ ಎಂದು ಆರೋಪಿಸಿ ಕೆಲವೊಂದು ಮಂದಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಇನ್ನೂ ಕೆಲವರು  ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ  ಮೆಟ್ಟಿಲು ಕೂಡಾ ಏರಿದ್ದರು.

ಒಟ್ಟಿನಲ್ಲಿ ತಾಲ್ಲೂಕಿನಾದ್ಯಂತ ಬೇಸಿಗೆಯಲ್ಲಿ ಕುಡಿಯುವ ನೀರಿನ ಭೀತಿ ಎದುರಿಸುತ್ತಿದ್ದರೂ ತುಂಬೆ ಅಣೆಕಟ್ಟೆ, ಸರಪಾಡಿ ಎಂಆರ್‌ಪಿಎಲ್ ಅಣೆಕಟ್ಟೆ, ಶಂಭೂರು ಎಎಂಆರ್ ಕಿರುಜಲವಿದ್ಯುತ್ ಘಟಕ ಅಣೆಕಟ್ಟೆ ಜೊತೆಗೆ ಜಕ್ರಿಬೆಟ್ಟುವಿನಲ್ಲಿ ಸ್ೆ ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ನಾಗರಿಕರು ದೂರಿದ್ದಾರೆ.ವಿಪರ‌್ಯಾಸವೆಂದರೆ ಈ ಅಣೆಕಟ್ಟೆಗಳ ಒಳಿತು ಮತ್ತು ಕೆಡುಕು ಹಾಗೂ ಕೃಷಿಭೂಮಿ ಕಳೆದುಕೊಂಡಿರುವ ಸಂತ್ರಸ್ತರ ಬಗ್ಗೆ ಮಾತ್ರ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ನೀಡುವ ಗೋಜಿಗೆ ಯಾರೂ ಹೋಗಿಲ್ಲ. ಮಾತ್ರವಲ್ಲದೆ ಇದರ ವಿರುದ್ಧ ಯಾವುದೇ ರಾಜಕಾರಣಿಗಳು ಚಕಾರವೆತ್ತುವುದಿಲ್ಲ ಎಂಬ ಆರೋಪ ಇಲ್ಲಿನ ನಾಗರಿಕರಿಂದ ವ್ಯಕ್ತವಾಗಿದೆ.                  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.