ಮಂಗಳವಾರ, ನವೆಂಬರ್ 12, 2019
28 °C
ವಿಧಾನಸಭೆ ಚುನಾವಣೆ

ಬಂಟ್ವಾಳ: ಸೂಕ್ಷ್ಮಕ್ಷೇತ್ರ, ಪ್ರತಿಷ್ಠೆಯ ಕಣ

Published:
Updated:

ಬಂಟ್ವಾಳ: ಜಿಲ್ಲೆಯ ಜೀವನದಿ ಎಂದೇ ಗುರುತಿಸಿಕೊಂಡಿರುವ ನೇತ್ರಾವತಿ ಮತ್ತು ಫಲ್ಗುಣಿ ಹೊಳೆಯ ನಡುವಿನ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಹುತೇಕ ಕೃಷಿಕರು ಮತ್ತು ಬಡ ಕೂಲಿ ಕಾರ್ಮಿಕರನ್ನು ಹೊಂದಿರುವ ಕೃಷಿ ಪ್ರಧಾನ ಪ್ರದೇಶ. ಈ ಹಿಂದೆ ಭತ್ತ ಬೆಳೆಯುತ್ತಿದ್ದ ಬಹುತೇಕ ಪ್ರದೇಶಗಳಲ್ಲಿ ಇದೀಗ ತೆಂಗು, ಕಂಗು, ಬಾಳೆ ಕಂಗೊಳಿಸುತ್ತಿದೆ. ಈ ನಡುವೆ ಕಾಳು ಮೆಣಸು, ವೀಳ್ಯದೆಲೆ, ತರಕಾರಿ ಜೊತೆಗೆ ಗೇರು, ರಬ್ಬರ್ ಮತ್ತಿತರ ವಾಣಿಜ್ಯ ಬೆಳೆಯೂ ಇಲ್ಲಿದೆ.2011ರ ಸಮೀಕ್ಷೆ ಪ್ರಕಾರ, ತಾಲ್ಲೂಕಿನ ಒಟ್ಟು ಜನಸಂಖ್ಯೆ 3,95,435. ಒಟ್ಟು 84 ಗ್ರಾಮಗಳನ್ನು ಹೊಂದಿದ್ದು, 47 ಗ್ರಾಮ ಪಂಚಾಯಿತಿಗಳಿವೆ. ಒಟ್ಟು 1,92,884 ಮತದಾರರನ್ನು ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 97,221 ಮಂದಿ ಪುರುಷರು ಮತ್ತು 95,663 ಮಂದಿ ಮಹಿಳಾ ಮತದಾರರು ಇದ್ದಾರೆ. ಒಟ್ಟು 235 ಮತಗಟ್ಟೆಗಳ ಪೈಕಿ 110 ಸಾಮಾನ್ಯ, 100 ಸೂಕ್ಷ್ಮ, 25 ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ.ಪ್ರತಿಷ್ಠಿತ ಕ್ಷೇತ್ರ:

ಬಂಟ್ವಾಳ ತಾಲ್ಲೂಕು ಕೃಷಿಪ್ರಧಾನ ಪ್ರದೇಶವಾಗಿದ್ದರೂ ಕೂಡಾ ಬಂಟ್ವಾಳ ಪೇಟೆ ಸ್ವರ್ಣೋದ್ಯಮದ ಮೂಲಕ `ಚಿನ್ನದ ನಗರಿ' ಎಂದೇ ಗುರುತಿಸಲ್ಪಟ್ಟಿದ್ದು, ಪಾಣೆಮಂಗಳೂರು `ವರ್ತಕರ ಪೇಟೆ'ಯಾಗಿ ಈ ಹಿಂದೆಯೇ ಕರೆಯಲ್ಪಟ್ಟಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಅಂದು ಬ್ರಿಟಿಷರು ನಿರ್ಮಿಸಿದ್ದ ಪಾಣೆಮಂಗಳೂರು ಹಳೆಸೇತುವೆ ಈಗಲೂ ಉಪಯೋಗದಲ್ಲಿದೆ. ಮದ್ಯದ ದೊರೆ ವಿಜಯ ಮಲ್ಯರ ಹುಟ್ಟೂರು, ಪಂಜೆ ಮಂಗೇಶರಾಯರಂತಹ ಸಾಹಿತಿಗಳು, ಮೊಳಹಳ್ಳಿ ಶಿವರಾಯರಂತಹ ಸಹಕಾರಿ ಧುರೀಣರು, ಡಾ.ಅಮ್ಮೆಂಬಳ ಬಾಳಪ್ಪರಂತಹ ಸ್ವಾತಂತ್ರ್ಯ ಹೋರಾಟಗಾರರು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಅನಂತಕೃಷ್ಣ ಮತ್ತಿತರ ಗಣ್ಯರು ಹುಟ್ಟಿ ಬೆಳೆದ ಊರು ಬಂಟ್ವಾಳ. ರಾಜಕೀಯವಾಗಿ ಕೂಡಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಹುಟ್ಟೂರು ಬಂಟ್ವಾಳ.ನರಹರಿ ಪರ್ವತ, ಕಾರಿಂಜ ಕ್ಷೇತ್ರ, ನಂದಾವರ ಕ್ಷೇತ್ರ, ಅಜಿಲಮೊಗರು ಜುಮ್ಮೋ ಮಸೀದಿ, ಫರಂಗಿಪೇಟೆ ಕಲಾತ್ಮಕ ಚರ್ಚ್ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಸಾಮರಸ್ಯದ ಬೆಸುಗೆ ಇದ್ದರೂ ಕೂಡಾ ಕೆಲವೊಮ್ಮೆ `ರಾಜಕೀಯ' ಪ್ರೇರಿತ ಎಂಬಂತೆ ಕೋಮು ಗಲಭೆ ನಡೆಯುವ ಮೂಲಕ ಬಂಟ್ವಾಳದ ಚಿತ್ರಣಕ್ಕೆ ಕಪ್ಪು ಚುಕ್ಕೆ ಮೆತ್ತಿಸಿಕೊಂಡ ಪ್ರಸಂಗವೂ ನಡೆದಿದೆ.ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದವರಿಗೆ `ಮಂತ್ರಿಗಿರಿ' ಖಚಿತ ಎಂಬುದು ಹಲವು ಬಾರಿ ಸಾಬೀತಾಗಿದೆ. ಬಂಟರು, ಬಿಲ್ಲವರು, ಮುಸ್ಲಿಮರು, ಕ್ರೈಸ್ತರು, ಕುಲಾಲರು, ಗಾಣಿಗರು, ಗೌಡರು, ವಿಶ್ವಕರ್ಮರು, ಬ್ರಾಹ್ಮಣರು ಗರಿಷ್ಠ ಸಂಖ್ಯೆ ಹೊಂದಿದ್ದರೂ ಬಹುತೇಕ ಸಂದರ್ಭಗಳಲ್ಲಿ `ಬಂಟರಿಗೆ ಮಣೆ' ಹಾಕುತ್ತಿರುವುದು ಇಲ್ಲಿನ ವಿಶೇಷತೆ. 12 ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-9, ಬಿಜೆಪಿ-2 ಮತ್ತು ಸಿಪಿಐ-1 ಬಾರಿ ಗೆಲುವು ದಾಖಲಿಸಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಿಪಿಐ ಹಾಗೂ ಮಹಿಳಾ ಶಾಸಕಿಗೂ ಜೈ ಎಂದಿರುವ ಹಿನ್ನೆಲೆ ಹೊಂದಿದೆ.ಕಣ್ಮರೆಯಾದ ವಿಟ್ಲ ಕ್ಷೇತ್ರ

ಬಂಟ್ವಾಳ ತಾಲ್ಲೂಕಿನಲ್ಲಿದ್ದರೂ 1978ರಿಂದ 2004ರತನಕ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದ ವಿಟ್ಲ ವಿಧಾನಸಭಾ ಕ್ಷೇತ್ರವು ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಬಂಟ್ವಾಳ, ಪುತ್ತೂರು, ಮಂಗಳೂರು ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ.ಒಟ್ಟು ಏಳು ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ನಾಲ್ಕು ಬಾರಿ ಗೆಲುವು ಕಂಡಿದ್ದು, ಕಾಂಗ್ರೆಸ್‌ಗೆ ಎರಡು ಬಾರಿ ಗೆಲ್ಲಲು ಅವಕಾಶ ಸಿಕ್ಕಿದೆ. ಒಂದು ಬಾರಿ ಇಲ್ಲಿಯೂ ಸಿಪಿಐ ಗೆಲುವು ಸಾಧಿಸಿದೆ.1972ರಲ್ಲಿ ಬಂಟ್ವಾಳದಲ್ಲಿ ಗೆಲುವು ಸಾಧಿಸಿದ್ದ ಸಿಪಿಐನ ಬಿ.ವಿ.ಕಕ್ಕಿಲ್ಲಾಯ 1978ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. 1985ರಲ್ಲಿ ಕಾಂಗ್ರೆಸ್‌ನ ಬಿ.ಎ.ಉಮರಬ್ಬ ಮತ್ತ್ತು 1999ರಲ್ಲಿ ಕಾಂಗ್ರೆಸ್‌ನ ಕೆ.ಎಂ.ಇಬ್ರಾಹಿಂ ಗೆಲುವು ಸಾಧಿಸಿದ್ದರು.ಉಳಿದಂತೆ 1983, 1989,1994ರಲ್ಲಿ ಬಿಜೆಪಿಯ ಎ.ರುಕ್ಮಯ ಪೂಜಾರಿ ಗೆದ್ದು, 1989ರಲ್ಲಿ ರಾಜ್ಯದಲ್ಲಿ ಬಿಜೆಪಿ ಗೆದ್ದ ಒಟ್ಟು ನಾಲ್ಕು ಸ್ಥಾನಗಳಲ್ಲಿ ವಿಟ್ಲವೂ ಒಂದು.1999ರಲ್ಲಿ ಕಾಂಗ್ರೆಸ್‌ನ ಕೆ.ಎಂ.ಇಬ್ರಾಹಿಂ ಎದುರು ಸೋಲು ಕಂಡ ಎ.ರುಕ್ಮಯ ಪೂಜಾರಿ ಬಳಿಕ ಟಿಕೆಟ್ ವಂಚಿತರಾದರು. ಆ ಬಳಿಕ ರಂಗ ಪ್ರವೇಶಿಸಿದ ಹಾಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಅವರು 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎಂ.ಇಬ್ರಾಹಿಂ ಅವರನ್ನು ಸೋಲಿಸಿದರು. ಮುಂದಿನ ಚುನಾವಣೆಗೆ ಸಜ್ಜಾಗುತ್ತಿದ್ದಂತೆಯೇ ವಿಟ್ಲ ಕ್ಷೇತ್ರವೇ ಕಣ್ಮರೆಯಾಯಿತು.ವಿಶೇಷತೆಯ ಕ್ಷೇತ್ರ

ಕಾಂಗ್ರೆಸ್‌ನ ಬಿ.ರಮಾನಾಥ ರೈ ಅವರು ಒಟ್ಟು ಆರು ಬಾರಿ ಸ್ಪರ್ಧಿಸಿ, ಐದು ಬಾರಿ ಗೆಲುವು ಸಾಧಿಸುವ ಮೂಲಕ ಬಂದರು, ಮೀನುಗಾರಿಕೆ, ಜಿಲ್ಲಾ ಉಸ್ತುವಾರಿ, ಅಬಕಾರಿ, ಸಹಾಯಕ ಗೃಹ ಸಚಿವ ಪಟ್ಟ ಅಲಂಕರಿಸಿದ್ದಾರೆ. ಇನ್ನೊಂದೆಡೆ ಬಿಜೆಪಿಯಿಂದ ಪ್ರಥಮ ಬಾರಿಗೆ ಗೆದ್ದ ಬಿ.ನಾಗರಾಜ ಶೆಟ್ಟಿ ಅವರು ಕೂಡಾ ಪ್ರಥಮ ಅವಧಿಯಲ್ಲೇ ಬಂದರು, ಮೀನುಗಾರಿಕೆ, ಮುಜರಾಯಿ, ಜಿಲ್ಲಾ ಉಸ್ತುವಾರಿ ಸಚಿವರಾಗುವ ಮೂಲಕ ಗಮನ ಸೆಳೆದಿದ್ದರು.ಇದೀಗ ಕಾಂಗ್ರೆಸ್‌ನಿಂದ ಬಿ.ರಮಾನಾಥ ರೈ ಅವರು ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ಏಳನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿಯಿಂದ ಉಳಿಪಾಡಿಗುತ್ತು ಒಡ್ಡೂರು ಫಾರ್ಮ್‌ನ ಮಾಲೀಕ, ಬಿಎಸ್ಸಿ ಪದವೀಧರ, ಪ್ರಗತಿಪರ ಕೃಷಿಕ ಆರ್‌ಎಸ್‌ಎಸ್ ಹಿನ್ನೆಲೆ ಹೊಂದಿರುವ ಹಾಕಿ, ಬಾಸ್ಕೆಟ್‌ಬಾಲ್, ಅಥ್ಲೆಟಿಕ್ ಕ್ರೀಡಾಪಟು ರಾಜೇಶ್ ನಾಯ್ಕ ನಾಮಪತ್ರ ಸಲ್ಲಿಸಿದ್ದಾರೆ.ಇನ್ನೊಂದೆಡೆ ಇತ್ತೀಚೆಗಷ್ಟೇ ಬಂಟ್ವಾಳ ಪುರಸಭೆಗೆ ಪ್ರಥಮ ಬಾರಿಗೆ ಮೂವರು ಸದಸ್ಯರನ್ನು ಕಳುಹಿಸುವಲ್ಲಿ ಯಶಸ್ವಿಯಾಗಿರುವ ಎಸ್‌ಡಿಪಿಐನಿಂದ ಪುತ್ತೂರಿನ ಯುವ ವಕೀಲ ಅಬ್ದುಲ್ ಮಜೀದ್ ಖಾನ್ ಮತ್ತು ಕೆಜೆಪಿಯಿಂದ ಕೈಲಾರ್ ಇಬ್ರಾಹಿಂ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಪೂರ್ಲಿಪಾಡಿ ಕೃಷ್ಣಪ್ಪ ಪೂಜಾರಿ ಟಿಕೆಟ್ ಪಡೆದಿದ್ದಾರೆ. ಉದ್ಯಮಿ ಸೌಂದರ್ಯ ರಮೇಶ್ ಸ್ಪರ್ಧೆಯಿಂದ ಹಿಂದೆ ಸರಿದರು.

ಪ್ರತಿಕ್ರಿಯಿಸಿ (+)