ಬಂಡವಾಳಶಾಹಿ ಹಿಡಿತದಲ್ಲಿ ರಾಜಕಾರಣ

7

ಬಂಡವಾಳಶಾಹಿ ಹಿಡಿತದಲ್ಲಿ ರಾಜಕಾರಣ

Published:
Updated:
ಬಂಡವಾಳಶಾಹಿ ಹಿಡಿತದಲ್ಲಿ ರಾಜಕಾರಣ

ಸಾಗರ (ಶಿವಮೊಗ್ಗ ಜಿಲ್ಲೆ): ಭಾರತದಲ್ಲಿ ಬಂಡವಾಳಶಾಹಿಗಳ ಹಿಡಿತದಲ್ಲಿ ರಾಜಕಾರಣ ನಲುಗುತ್ತಿರುವ ಕಾರಣ ಆದಿವಾಸಿಗಳ ಹಾಗೂ ಸಮಾಜದ ದಮನಿತ ವರ್ಗದವರ ಮೇಲಿನ ಶೋಷಣೆ ದಿನೇದಿನೇ ಹೆಚ್ಚುತ್ತಿದೆ ಎಂದು ಜಾರ್ಖಂಡ್‌ನ ಜನಪರ ಹೋರಾಟಗಾರರಾದ ವಿದ್ಯಾರ್ಥಿ ಚಟರ್ಜಿ ಹೇಳಿದರು.ಇಲ್ಲಿಗೆ ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ~ಬಂಡವಾಳ~ವೇ ರಾಜಕಾರಣವನ್ನು ಆಳುತ್ತಿರುವುದರಿಂದ ಅಭಿವೃದ್ಧಿ ಹೆಸರಿನಲ್ಲಿ ಆದಿವಾಸಿಗಳನ್ನು, ರೈತರನ್ನು ಅವರ ಭೂಮಿಯಿಂದ ಒಕ್ಕಲೆಬ್ಬಿಸುವ ಕಾರ್ಯ ಪ್ರಭುತ್ವದಿಂದ ಅವ್ಯಾಹತವಾಗಿ ನಡೆಯುತ್ತಿದೆ ಎಂದರು.ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿಯೇ ಜಾರ್ಖಂಡ್, ಛತ್ತೀಸ್‌ಗಡನಂತಹ ರಾಜ್ಯಗಳನ್ನು ಸೃಷ್ಟಿಸಲಾಯಿತು. ಆದರೆ, ಈಗ ಈ ರಾಜ್ಯಗಳಲ್ಲಿ ಪ್ರಭುತ್ವ ನಾನಾ ರೀತಿಯ ತಂತ್ರಗಳನ್ನು ಬಳಸಿ ಆದಿವಾಸಿಗಳನ್ನು ದಮನ ಮಾಡಲಾಗುತ್ತಿದೆ. ನೈಸರ್ಗಿಕ ಸಂಪನ್ಮೂಲ ಆದಿವಾಸಿಗಳ ಬದುಕಿಗೆ ಮೂಲ ಸೆಲೆ ಆಗಿದ್ದರೆ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಅದು ಕೂಡ ~ಬಂಡವಾಳ~ ಅನಿಸಿಕೊಂಡಿರುವುದರಿಂದ ಈ ದಮನ ಪ್ರಕ್ರಿಯೆ ಕಾನೂನಿನ ಹೆಸರಿನಲ್ಲಿಯೇ ನಡೆಯುತ್ತಿದೆ ಎಂದು ವ್ಯಾಖ್ಯಾನಿಸಿದರು.ಆದಿವಾಸಿಗಳ ಕೃಷಿ ಭೂಮಿಯನ್ನು ಕಿತ್ತುಕೊಂಡು ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ ಇವೇ ಮೊದಲಾದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಸರ್ಕಾರ ಮುಂದಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಂಖ್ಯೆಯ ಆಧಾರದ ಮೇಲೆ ನಿರ್ಧಾರವಾಗುವುದರಿಂದ ಕಡಿಮೆ ಸಂಖ್ಯೆಯಲ್ಲಿ ಇರುವ ಆದಿವಾಸಿಗಳ ನ್ಯಾಯಯುತ ಕೂಗಿಗೆ ಬೆಲೆ ದೊರಕುತ್ತಿಲ್ಲ ಎಂದು ವಿಶ್ಲೇಷಿಸಿದರು.ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುವ ಭಾರತದ ಇಂದಿನ ಆರ್ಥಿಕ ವ್ಯವಸ್ಥೆಯ ಬಗ್ಗೆಯೇ ಗಂಭೀರ ಚಿಂತನೆ ನಡೆಯಬೇಕಿದೆ. ಆದಿವಾಸಿಗಳು ಸೇರಿದಂತೆ ಸಮಾಜದ ತಳಸ್ತರದಲ್ಲಿರುವವರ ಶೋಷಣೆಯ ವಿರುದ್ಧ ಬದ್ಧತೆಯಿಂದ ಹೋರಾಟವನ್ನು ಸಂಘಟಿಸುವ ಅಗತ್ಯವಿದೆ. ಕೇವಲ ಹೋರಾಟಕ್ಕಾಗಿ ಹೋರಾಟ ಎನ್ನುವಂತಾದರೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.ಇದೇ ಸಂದರ್ಭದಲ್ಲಿ  ವಿದ್ಯಾರ್ಥಿ ಚಟರ್ಜಿ ನಿರ್ಮಿಸಿರುವ ಜಾರ್ಖಂಡ್‌ನ ಆದಿವಾಸಿಗಳ ಸಮಸ್ಯೆ ಕುರಿತ ಸಾಕ್ಷ್ಯಚಿತ್ರ ~ಜಾನ್ ದೇಂಗೆ, ಜಮೀನ್ ನಹೀ~ ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ ಹೆಗ್ಗೋಡಿನ ~ಜನಮನದಾಟ~ ತಂಡದವರು ಎಂ. ಗಣೇಶ್ ನಿರ್ದೇಶನದಲ್ಲಿ  `ಬದುಕು-ಬಯಲು~ ನಾಟಕ ಪ್ರದರ್ಶಿಸಿದರು. ಸಂಜೆ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ಬಳಗದಿಂದ `ಉತ್ತರ ರಾಮಚರಿತೆ~ (ಮೂಲ: ಭವಭೂತಿ. ಅನುವಾದ: ಬನ್ನಂಜೆ ಗೋವಿಂದಾಚಾರ್ಯ. ನಿರ್ದೇಶನ: ಬಿ.ಆರ್. ವೆಂಕಟರಮಣ ಐತಾಳ) ನಾಟಕ ಪ್ರದರ್ಶನಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry