ಬಂಡವಾಳ ಹೂಡಿಕೆ ಸಮಾವೇಶ: ಉದ್ಯಮಿ ಬಫೆಟ್ ಆಹ್ವಾನಿಸಲು ಚಿಂತನೆ:ನಿರಾಣಿ
ಬೆಂಗಳೂರು: ‘ಸರ್ಕಾರವು 2012ರ ಜೂನ್ನಲ್ಲಿ ಆಯೋಜಿಸಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ವಿಶ್ವದ ಮೂರನೇ ಶ್ರೀಮಂತ ಉದ್ಯಮಿ ವಾರೆನ್ ಬಫೆಟ್ ಅವರನ್ನು ಆಹ್ವಾನಿಸಲು ಚಿಂತನೆ ನಡೆದಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ತಿಳಿಸಿದರು.
ವರ್ಲ್ಡ್ ಅಕಾಡೆಮಿ ಆಫ್ ಪ್ರಾಡಕ್ಟಿವಿಟಿ ಸೈನ್ಸ್ ಸಂಸ್ಥೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ದೇಶದಲ್ಲಿ 2015ರಲ್ಲಿ ಸಾಧಿಸಬಹುದಾದ ಗುರಿಗಳು’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಈ ಬಾರಿಯ ಸಮಾವೇಶದಲ್ಲಿ ವಿಶ್ವದ ವಿವಿಧ ಕಾರ್ಪೊರೇಟ್ ಕಂಪನಿಗಳು 10 ಲಕ್ಷ ಕೋಟಿ ರೂಪಾಯಿ ಬಂಡವಾಳವನ್ನು ರಾಜ್ಯದಲ್ಲಿ ಹೂಡಬಹುದು ಎಂದು ನಿರೀಕ್ಷಿಸಲಾಗಿದೆ.
ಇತ್ತೀಚೆಗೆ ಬಫೆಟ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕಳೆದ ಜಾಗತಿಕ ಸಮಾವೇಶದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಸಚಿವರು ಸ್ಮರಿಸಿದರು.
‘ಉದ್ಯಮಿಗಳು ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಉತ್ಪಾದನೆಯನ್ನು ಕಾಯ್ದುಕೊಳ್ಳಬೇಕು ಮತ್ತು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಆಧುನಿಕ ತಂತ್ರಜ್ಞಾನವನ್ನು ಆಳವಡಿಸಿಕೊಳ್ಳುವ ಅವಶ್ಯಕತೆಯಿದೆ’ ಎಂದರು.
‘ದೇಶದಲ್ಲಿ ಎಲ್ಲಾ ವರ್ಗದ ಜನರಿಗೆ ಆರೋಗ್ಯದ ರಕ್ಷಣೆ, ಮಹಿಳೆಯರು ರಾಜಕೀಯ ಮತ್ತು ಸಾಮಾಜಿಕವಾಗಿ ಸಬಲತೆ, ಹಿಂದುಳಿದ ಸಮುದಾಯಗಳ ಪ್ರಗತಿ, ದೇಶದ ಸಂಪನ್ಮೂಲಗಳ ಸದ್ಬಳಕೆ, ಅಧಿಕಾರ ವಿಕೇಂದ್ರಿಕರಣದಂತಹ ಹಲವು ವಿಚಾರಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಶ್ರಮವಹಿಸಬೇಕಿದೆ’ ಎಂದು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಎನ್.ಪ್ರಭುದೇವ್ ಮಾತನಾಡಿ, ‘ದೇಶದಲ್ಲಿ ಒಟ್ಟು 505 ವಿಶ್ವವಿದ್ಯಾಲಯಗಳಿವೆ. ಜ್ಞಾನ ಆಯೋಗದ ಶಿಫಾರಸ್ಸಿನಂತೆ ಇನ್ನೂ 1500 ವಿಶ್ವವಿದ್ಯಾಲಯಗಳ ಸ್ಥಾಪನೆಯಾಗಬೇಕಿದ್ದು, ಯಶಸ್ವಿ ಉದ್ಯಮದಾರರನ್ನಾಗಿ ರೂಪಿಸುವ ವಾಣಿಜ್ಯ ವಿಶ್ವವಿದ್ಯಾಲಯಗಳ ಅಗತ್ಯವಿದೆ’ ಎಂದು ತಿಳಿಸಿದರು.
‘ಇನ್ನು ಕೆಲವೇ ವರ್ಷಗಳಲ್ಲಿ ಬಡತನ ಮತ್ತು ಲಿಂಗ ತಾರತಮ್ಯದಂತಹ ಸಮಸ್ಯೆಗಳ ಸಂಪೂರ್ಣ ನಿರ್ಮೂಲನೆ, ಪ್ರಾಥಮಿಕ ಶಿಕ್ಷಣಕ್ಕೆ ಮಹತ್ವ ಸೇರಿದಂತೆ ಹಲವು ಗುರಿಗಳನ್ನು ಸಾಧಿಸುವ ದಿಕ್ಕಿನಲ್ಲಿ ಸರ್ಕಾರ ಮತ್ತು ನಾಗರಿಕರು ಪರಸ್ಪರ ಚಿಂತನೆ ನಡೆಸುವ ಅಗತ್ಯವಿದೆ’ ಎಂದರು.
ಸಚಿವರಿಗೆ ಸೇರಿದಂತೆ ಉದ್ಯಮಿಗಳಾದ ಡಾ.ಫಿಲಿಪ್ಸ್ ಲೂಯಿಸ್, ಶ್ಯಾಮ್ ಜೈಸಿಂಗ್, ಶ್ರೀನಿವಾಸ ರೆಡ್ಡಿ, ಎಚ್ಎಎಲ್ ನಿರ್ದೇಶಕ ಆರ್.ಶ್ರೀನಿವಾಸ್ ಅವರಿಗೆ ಫೆಲೋ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಕುಲಪತಿ ಡಾ.ಎಚ್.ಮಹೇಶಪ್ಪ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.