ಬಂಡಹಳ್ಳಿಯಲ್ಲಿ ಹೊಳೆವ ಹಸಿರು

7

ಬಂಡಹಳ್ಳಿಯಲ್ಲಿ ಹೊಳೆವ ಹಸಿರು

Published:
Updated:

ಬಂಗಾರಪೇಟೆ:  ಈ ಶಾಲೆ ಮುಂಭಾಗದ ಸುಮಾರು 60x30 ಜಾಗದಲ್ಲಿ ಸುಂದರ ಉದ್ಯಾನ ಹಾಗೂ ಕೈತೋಟ ಕಣ್ಮನ ಸೆಳೆಯುತ್ತದೆ. ಬಾಳೆ, ದಾಳಿಂಬೆ, ತೆಂಗು, ಅಡಿಕೆ, ಪಪ್ಪಾಯ, ಸಪೋಟದಂಥ ಗಿಡಮರಗಳು ಸಮೃದ್ಧಿಯಾಗಿ ಬೆಳೆದು ನಿಂತಿವೆ.  ಇವಷ್ಟೇ ಅಲ್ಲ ಮಲ್ಲಿಗೆ, ಕಾಕಡ, ಚಂಡು, ಬಿಂದು, ವೆಲ್ವೆಟ್, ಕನಕಾಂಬರ, ಕಣಗಿಲೆ, ದಾಸವಾಳ, ಗುಲಾಬಿಯಂಥ ಹೂವುಗಳ ಅಂದದ ಜತೆ ನುಗ್ಗೆ, ಹೀರೆ, ಬದನೆ, ಮೆಣಸಿನ ಗಿಡ, ಮೂಲಂಗಿ ಚಪ್ಪರದ ಅವರೆ ಜತೆಗೆ ಅರಿವೆ ಸೊಪ್ಪು, ದಂಟುಸೊಪ್ಪು, ಶುಂಠಿ ಹೀಗೆ ಹಲ ತರಕಾರಿ ಬೆಳೆ ಬೆಳೆಯಲಾಗಿದೆ.ಇದಕ್ಕೆ ಕಾರಣ ಎಸ್.ಜಯರಾಮ ಮೇಷ್ಟ್ರು ಪರಿಶ್ರಮ ಕಾರಣ ಎನ್ನುತ್ತಾರೆ ಗ್ರಾಮದ ಹಲವರು. ಜಯರಾಮ ಮೇಷ್ಟ್ರು ವಿದ್ಯಾರ್ಥಿಗಳಿಗೆ ಚೆನ್ನಾಗಿ ಪಾಠ ಕಲಿಸುತ್ತಾರೆ. ಸೂಕ್ತ ಸಮಯಕ್ಕೆ ಊಟ ಕೊಡುತ್ತಾರೆ. ಶಾಲೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆ.ಬಂಡೆ ಒಡೆಯುವುದನ್ನೇ ಕುಲ ಕಸುಬಾಗಿ ನೆಚ್ಚಿಕೊಂಡಿರುವ ಬೂದಿಕೋಟೆ ಸಮೀಪದ ಶ್ರೀರಂಗಬಂಡಹಳ್ಳಿಯ ನಿವಾಸಿ ಮುನಿಕೃಷ್ಣಪ್ಪ ಹೇಳಿದ್ದನ್ನು ಕೇಳಿಸಿಕೊಳ್ಳುತ್ತಲೇ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರವೇಶಿಸಿದಾಗ ಮುಖ್ಯ ಶಿಕ್ಷಕ ಎಸ್.ಜಯರಾಮ ಅವರು ಹುಲ್ಲುಹಾಸಿನ ಮೇಲೆ ಕುಳಿತ ಮಕ್ಕಳಿಗೆ  ಪಾಠ ಮಾಡುತ್ತಿದ್ದರು.ಶಾಲೆ ಆವರಣದಲ್ಲಿ ಹಾಸಿರುವ ಲಾನ್ ಹೊರತುಪಡಿಸಿ ಉಳಿದ ಎಲ್ಲ ಗಿಡ, ಮರ, ಬಳ್ಳಿ, ಹೂವು ಸಸಿಗಳನ್ನು ನೆಟ್ಟು ಪೋಷಣೆ ಮಾಡಿರುವುದು ಅವರ ಸ್ವಂತ ಖರ್ಚಿನಿಂದಲೇ ಎನ್ನುವುದು ವಿಶೇಷ.ಶಾಲೆ ಆವರಣದ ಅಗಸೆ ಮರಕ್ಕೆ ಸುತ್ತಿಕೊಂಡಿರುವ ವೀಳ್ಯದೆಲೆ ಬಳ್ಳಿಗಳು ಶಾಲೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಕೈ-ತೋಟದಲ್ಲಿ ಹನಿ, ತುಂತುರು ನೀರಾವರಿ ಪದ್ಧತಿ ಅಳವಡಿಸಲಾಗಿದೆ.ಶಾಲಾ ಕಟ್ಟಡದ ಆವರಣದಲ್ಲಿ ಗುಬ್ಬಚ್ಚಿಗಳ ವಾಸಕ್ಕಾಗಿ ನಾಲ್ಕಾರು ಗೂಡುಗಳನ್ನೂ ಕಟ್ಟಲಾಗಿದೆ. ಇಲ್ಲಿಗೆ ಈಗ ಕೆಲ ಪಕ್ಷಿಗಳು ಬರುತ್ತಿವೆ. ನೀರಿನ ಬಳಕೆ, ಶೌಚಾಲಯ ಬಳಕೆ, ಪರಿಸರ ಸಂರಕ್ಷಣೆ ಮಹತ್ವದ ಬಗ್ಗೆ ಗೋಡೆಗಳ ಮೇಲೆ ಬರೆದಿರುವ ಶ್ಲೋಕಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಪ್ರಯತ್ನ ನಡೆದಿದೆ.ಗ್ರಾಮೀಣ ಅಭಿವೃದ್ಧಿ, ಪರಿಸರ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನಡೆದ ಉತ್ತಮ ಪರಿಸರ ಮಿತ್ರ ಶಾಲೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಶಾಲಾ ಕಟ್ಟಡ, ಸುತ್ತುಗೋಡೆ ನಿರ್ಮಿಸಿದ್ದು, ಇವರ ಅವಧಿಯಲ್ಲೇ ಎನ್ನುವುದು ಗಮನಾರ್ಹ. ಎಸ್‌ಡಿಎಂಸಿ ಹಾಗೂ ಶಾಲೆಯ ಉತ್ತಮ ಸಹಕಾರವನ್ನು ಗುರುತಿಸಿದ ಶಿಕ್ಷಣ ಇಲಾಖೆ 2011ರಲ್ಲಿ ಈ ಶಾಲೆಗೆ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ನೀಡಿ ಅಭಿನಂದಿಸಿದೆ. ಶ್ರೀರಂಗಬಂಡಹಳ್ಳಿಯ ಹಾಗೂ ಹುಕ್ಕುಂದ ಕ್ರಾಸ್‌ನ 24 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.ಮಕ್ಕಳಲ್ಲಿ ಪರಿಸರ ಕಾಳಜಿ ಜತೆಗೆ ಆರೋಗ್ಯ, ಸ್ವಚ್ಛತೆ, ನೈರ್ಮಲ್ಯ, ಶ್ರಮದಾನದ ಕಲಿಕೆಗೆ ಪ್ರಾಶಸ್ತ್ಯ ನೀಡಲಾಗಿದೆ. ಹಲ ಬಾರಿ ಉದ್ಯಾನವನದ ಹುಲ್ಲಿನ ಮೇಲೆಯೇ ಕುಳಿತು ಪರಿಸರ, ಗಿಡ, ಬಳ್ಳಿಗಳ ಪರಿಚಯ, ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿದೆ ಎನ್ನುವುದು ಅವರ ನುಡಿ.ಮಧ್ಯಾಹ್ನದ ಬಿಸಿಯೂಟಕ್ಕೆ ಕೈತೋಟದಲ್ಲಿ ಬೆಳೆದ ರುಚಿಕರ ತರಕಾರಿ ಬಳಸುತ್ತಿರುವುದು ವಿಶೇಷ. ಮುಖ್ಯ ಶಿಕ್ಷಕ ಎಸ್.ಜಯರಾಮ್ ಅವರೊಂದಿಗೆ ಟಿ.ಆರ್.ಮಂಜುನಾಥ್ ಅವರು ಶಾಲೆ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದಾರೆ.

ಶೈಕ್ಷಣಿಕ ಅಭಿವೃದ್ಧಿ ಜತೆಗೆ ಜಯರಾಮ ಅವರ ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಮೂಡಿಸಿದ್ದಾರೆ. ಸಮಯ ಪಾಲನೆ, ಶಿಸ್ತು ರೂಢಿಸಿಕೊಂಡಿದ್ದಾರೆ ಎಂಬುದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಯರಾಜ್ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry