ಮಂಗಳವಾರ, ನವೆಂಬರ್ 19, 2019
27 °C
ಕೊನೆಯ ಪಟ್ಟಿ- ಎಲ್ಲ ಪಕ್ಷಗಳಲ್ಲೂ ಹಿಂದೇಟು

ಬಂಡಾಯದ ಬಾಧೆ

Published:
Updated:

ಬೆಂಗಳೂರು: ಅಭ್ಯರ್ಥಿಗಳ ಎರಡನೆ ಪಟ್ಟಿ ಪ್ರಕಟವಾದ ಬಳಿಕ ಕಾಂಗ್ರೆಸ್‌ನಲ್ಲಿ ಸ್ಫೋಟಗೊಂಡ ಬಂಡಾಯ ಸೋಮವಾರ ಮತ್ತಷ್ಟು ಉಲ್ಬಣಗೊಂಡಿದೆ. ಇದರ ಬೆನ್ನಲ್ಲೇ ಜೆಡಿಎಸ್, ಬಿಜೆಪಿಯಲ್ಲೂ ಬಂಡಾಯದ ಹೊಗೆ ಕಾಣಿಸಿಕೊಂಡಿದೆ. ಇದರಿಂದಾಗಿ ಕೊನೆಯ ಪಟ್ಟಿ ಬಿಡುಗಡೆಗೆ ಎಲ್ಲ ಪಕ್ಷಗಳೂ ಹಿಂದೇಟು ಹಾಕುತ್ತಿವೆ.ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಬೇಕೆಂಬ ಪಟ್ಟನ್ನು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಇನ್ನೂ ಸಡಿಲಿಸಿಲ್ಲ. ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ವಂಚಿತರಾಗಿರುವ ಮಾಜಿ ಸಚಿವ ಎ.ಕೃಷ್ಣಪ್ಪ ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ. ಹೆಬ್ಬಾಳ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪುವ ಆತಂಕದಲ್ಲಿರುವ ಇನ್ನೊಬ್ಬ ಮಾಜಿ ಸಚಿವ ಎಚ್.ಎಂ.ರೇವಣ್ಣ ಕೂಡ ಪಕ್ಷ ತೊರೆಯುವ ಹಾದಿಯಲ್ಲಿದ್ದಾರೆ.ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಎ.ಎಸ್.ರವೀಂದ್ರ ಅವರಿಗೆ ಟಿಕೆಟ್ ನೀಡಬಾರದು ಎಂಬ ಬೇಡಿಕೆಯನ್ನು ಪಕ್ಷದ ನಾಯಕರ ಮುಂದೆ ಅಂಬರೀಷ್ ಇಟ್ಟಿದ್ದರು. ಆದರೆ, ಭಾನುವಾರ ಬಿಡುಗಡೆಯಾದ ಎರಡನೇ ಪಟ್ಟಿಯಲ್ಲಿ ರವೀಂದ್ರ ಅವರಿಗೇ ಟಿಕೆಟ್ ಘೋಷಿಸಲಾಗಿತ್ತು. ತಕ್ಷಣವೇ ಪ್ರತಿಕ್ರಿಯೆ ನೀಡಿದ್ದ ಅಂಬರೀಷ್, ಪಕ್ಷದ ನಿರ್ಧಾರವನ್ನು ವಿರೋಧಿಸಿದ್ದರು. ಶ್ರೀರಂಗಪಟ್ಟಣದ ಅಭ್ಯರ್ಥಿಯನ್ನು ಬದಲಿಸದಿದ್ದರೆ, ತಾವು ಮಂಡ್ಯದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು.

ಪೂರ್ವನಿಗದಿಯಂತೆ ಅವರು ಸೋಮವಾರ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ, ಶ್ರೀರಂಗಪಟ್ಟಣದ ಅಭ್ಯರ್ಥಿಯ ಬದಲಾವಣೆಗೆ ಪಟ್ಟುಹಿಡಿದು ನಾಮಪತ್ರ ಸಲ್ಲಿಸಲಿಲ್ಲ. ದಿನವಿಡೀ ಬೆಂಗಳೂರಿನ ಮನೆಯಲ್ಲೇ ಇದ್ದ ಅವರು ಮಂಡ್ಯ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಕಾಂಗ್ರೆಸ್ ಮುಖಂಡರ ಜೊತೆ ಚರ್ಚಿಸಿದರು.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರವಾಣಿ ಮೂಲಕ ಅಂಬರೀಷ್ ಜೊತೆ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹಾರಕ್ಕೆ ಪ್ರಯತ್ನಿಸಿದರು. ಆದರೆ, ಇಬ್ಬರೂ ನಾಯಕರ ಮಾತಿಗೆ ಅವರು ಸೊಪ್ಪು ಹಾಕಲಿಲ್ಲ. ಎಐಸಿಸಿ ನಿಯೋಜಿಸಿರುವ ಇಬ್ಬರು ವೀಕ್ಷಕರು ಮಧ್ಯಾಹ್ನ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಅಂಬರೀಷ್ ಅವರೊಂದಿಗೆ ಚರ್ಚೆ ನಡೆಸಿದರು. ಆದರೆ, ಮಾತುಕತೆ ಫಲಪ್ರದವಾಗಲಿಲ್ಲ.`ನಿರ್ಧಾರ ಬದಲಿಸುವುದಿಲ್ಲ': ಎಐಸಿಸಿ ಸಂಧಾನಕಾರರ ಜೊತೆ ಮಾತುಕತೆ ನಡೆಸಿ ಹಿಂದಿರುಗಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅಂಬರೀಷ್, `ಶ್ರೀರಂಗಪಟ್ಟಣದಲ್ಲಿ ರವೀಂದ್ರ ಅವರಿಗೆ ಟಿಕೆಟ್ ನೀಡಿದಲ್ಲಿ ಮಂಡ್ಯದಲ್ಲಿ ಸ್ಪರ್ಧಿಸುವುದಿಲ್ಲ ಎಂಬ ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ನಾಲ್ಕು ಚುನಾವಣೆಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಟಿಕೆಟ್ ನೀಡಿರುವುದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ' ಎಂದು ಪುನರುಚ್ಚರಿಸಿದರು. ತಾವು ಕಳೆದ ಸಾರಿ ಶ್ರೀರಂಗಪಟ್ಟಣದಲ್ಲಿ ಸ್ಪರ್ಧಿಸಿದ್ದಾಗ ತಮ್ಮ ಸೋಲಿಗೆ ರವೀಂದ್ರ ಕಾರಣರಾಗಿದ್ದರು ಎಂಬುದು ಅಂಬರೀಷ್ ಮುನಿಸಿಗೆ ಕಾರಣ.

`ನಾನು 500 ರೂಪಾಯಿ ವೇತನ ಪಡೆಯುತ್ತಿದ್ದ ಕಲಾವಿದ. ನನ್ನಂತಹವನಿಗೆ ಪಕ್ಷ ಅತ್ಯುನ್ನತ ಸ್ಥಾನಮಾನಗಳನ್ನು ನೀಡಿದೆ. ಪಕ್ಷಕ್ಕೆ ನಿಷ್ಠನಾಗಿಯೇ ಇರುತ್ತೇನೆ' ಎಂದರು.ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕಿದ್ದ ಎಲ್.ಡಿ.ರವಿ ದಿನವಿಡೀ ಅಂಬರೀಷ್ ನಿವಾಸದಲ್ಲಿ ಬೀಡುಬಿಟ್ಟಿದ್ದರು. ಅವರು ತಮ್ಮ ನಾಯಕನ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಹಿರಿಯೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ನಿರಾಶರಾಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಪಿ.  ಕೋದಂಡರಾಮಯ್ಯ ಕೂಡ ಪಕ್ಷ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.ಎ.ಕೃಷ್ಣಪ್ಪ ಜೆಡಿಎಸ್‌ಗೆ?: ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎ.ಕೃಷ್ಣಪ್ಪ ಅವರು ಸೋಮವಾರ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು. ತಮ್ಮನ್ನು ಕಡೆಗಣಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಬಿ.ಎ.ಬಸವರಾಜು (ಬೈರತಿ) ಅವರಿಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಪಕ್ಷದ ನಾಯಕರಿಂದ ತಮಗೆ ಅನ್ಯಾಯವಾಗಿದೆ ಎಂದು ದೂರಿದರು.ಈ ಮಧ್ಯೆಯೇ ಹಿರಿಯೂರಿನಿಂದ ಬಂದ ಹಲವರು ಕೃಷ್ಣಪ್ಪ ಅವರೊಂದಿಗೆ ಚರ್ಚೆ ನಡೆಸಿ, ಜೆಡಿಎಸ್ ಸೇರುವಂತೆ ಮನವೊಲಿಸುವ ಯತ್ನ ನಡೆಸಿದರು. ಅಲ್ಲಿದ್ದ ಕೆಲವರು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆಯನ್ನೂ ನಡೆಸಿದರು. ಯಾದವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲು ಜೆಡಿಎಸ್ ನಾಯಕರು ಒಪ್ಪಿಕೊಂಡಿದ್ದಾರೆ. ಈ ಆಹ್ವಾನವನ್ನು ಕೃಷ್ಣಪ್ಪ ಕೂಡ ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)