ಶನಿವಾರ, ನವೆಂಬರ್ 16, 2019
24 °C

ಬಂಡಾಯದ ಭಯದ ಕ್ಷೇತ್ರ ಹೊಸಪೇಟೆ

Published:
Updated:

ಬಳ್ಳಾರಿ: ಚುನಾವಣೆಯ ವೇಳೆ ವಿವಿಧ ಪಕ್ಷಗಳ ಸ್ಪರ್ಧಾಕಾಂಕ್ಷಿಗಳಿಗೆ ಟಿಕೆಟ್ ದೊರೆಯದೆ ನಿರಾಸೆ ಎದುರಾಗಲೆಲ್ಲ, ಬಂಡಾಯದ ಬಾವುಟ ಬೀಸಿರುವುದಕ್ಕೆ ಹೊಸಪೇಟೆ ಕ್ಷೇತ್ರ ಹೆಸರುವಾಸಿಯಾಗಿದೆ. `ಗೆಲುವು ಸುಲಭ ಸಾಧ್ಯ' ಎಂದು ನಂಬಿಕೊಂಡರೂ, ಬಂಡಾಯ ಕಂಟಕವಾದ ಉದಾಹರಣೆಗಳೇ ಅಧಿಕ.

ಈ ಕ್ಷೇತ್ರದಲ್ಲಿ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಆರ್. ನಾಗನಗೌಡ ಸಚಿವ ಸ್ಥಾನ ಅಲಂಕರಿಸಿದ್ದರೆ, ಕ್ಷೇತ್ರ ಪುನರ್ ವಿಂಗಡಣೆಯಿಂದ `ವಿಜಯನಗರ' ಕ್ಷೇತ್ರವಾಗಿ ರೂಪುಗೊಂಡ ಬಳಿಕ ಮೊದಲ ಶಾಸಕ ಆನಂದ್‌ಸಿಂಗ್ ಸಚಿವರಾಗಿರುವುದು ವಿಶೇಷ.ಇಬ್ಬರು ಶಾಸಕರ ನಿಧನದಿಂದಾಗಿ ಎರಡು ಉಪ ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ 14 ಚುನಾವಣೆಗಳಲ್ಲಿ ಕಾಂಗ್ರೆಸ್ 7 ಬಾರಿ ಜಯಿಸಿ ಸಿಂಹಪಾಲನ್ನು ಪಡೆದಿದ್ದರೆ, ಬಂಡಾಯದ ಬಿಸಿಯಿಂದಾಗಿ ಕೆಲವು ಬಾರಿ ಈ ಪಕ್ಷ ಸೋಲನ್ನು ಅನುಭವಿಸಿರುವುದು ಇತಿಹಾಸ.

1957ರಲ್ಲಿ ಕಾಂಗ್ರೆಸ್‌ನಿಂದ ನಾಗನಗೌಡ ಅವರು ತಮ್ಮ ಪ್ರತಿಸ್ಪರ್ಧಿಯಾಗಿದ್ದ  ಪಕ್ಷೇತರ ಅಭ್ಯರ್ಥಿ ಮುರಾರಿ ವೆಂಕಟಸ್ವಾಮಿ ವಿರುದ್ಧ 2151 ಮತಗಳ ಅಂತರದಲ್ಲಿ ಜಯಿಸಿ ಶಾಸಕರಾಗಿ ಆಯ್ಕೆಯಾಗಿದ್ದಲ್ಲದೆ, ಮೈಸೂರು ರಾಜ್ಯದ ಸಚಿವರೂ ಆಗಿದ್ದರು. 1962ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದ ಮಹಿಳಾ ಅಭ್ಯರ್ಥಿ ಮುರಾರಿ ಕಮಲಾ ಶ್ರೀರಾಮುಲು ವಿರುದ್ಧ ಸೋತಿದ್ದರು.1967ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾಗಿದ್ದ ನಾಗನಗೌಡ,  1970ರಲ್ಲಿ ನಿಧನರಾದ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಎನ್‌ಸಿಜೆ ಪಕ್ಷದ ಅಭ್ಯರ್ಥಿ ಬಿ.ಸತ್ಯನಾರಾಯಣ ಸಿಂಗ್ ಶಾಸಕರಾಗಿದ್ದರಲ್ಲದೆ, 1972ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿ, ಸತತವಾಗಿ ಜಯಿಸಿದ ಏಕೈಕ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ.1978ರಲ್ಲಿ ಕಾಂಗ್ರೆಸ್ (ಐ) ಪಕ್ಷದ ಕೆ.ಗೂಡುಸಾಹೇಬ್ ರಾಷ್ಟ್ರೀಯ ಜನತಾ ಪಕ್ಷದ ಜಿ.ಶಂಕರಗೌಡ ವಿರುದ್ಧ 8101 ಮತಗಳ ಅಂತರದಲ್ಲಿ ಜಯಿಸಿದ್ದರೆ, 1983ರಲ್ಲಿ ಕಾಂಗ್ರೆಸ್ ಸೇರಿದ ಶಂಕರಗೌಡ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದರು. ಈ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ಪಕ್ಷದ ಟಿಕೆಟ್ ದೊರೆಯದ್ದರಿಂದ ಸೆಡ್ಡು ಹೊಡೆದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಗುಜ್ಜಲ ಹನುಮಂತಪ್ಪ, 20381 ಮತ ಗಳಿಸಿದ್ದರೆ, ರಾಷ್ಟ್ರೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಶ್ರೀರಾಮ ರಂಗಾಪುರದ ಭೀಮನೇನಿ ಕೊಂಡಯ್ಯ 16611 ಮತ ಗಳಿಸಿ ಗಮನ ಸೆಳೆದಿದ್ದರು. ಜನತಾ ಪಕ್ಷದ ಬಂಡಾಯದ ಲಾಭವನ್ನು ಕಾಂಗ್ರೆಸ್ ಪಡೆದಿದ್ದು ಇಲ್ಲಿ ಗಮನಾರ್ಹ.ಅಂತೆಯೇ ಎರಡೇ ವರ್ಷಗಳ ಅವಧಿಯಲ್ಲಿ 1985ರಲ್ಲಿ ನಡೆದ ಚುನಾವಣೆಯಲ್ಲಿ ಕೊಂಡಯ್ಯ ಅವರು ಕಾಂಗ್ರೆಸ್‌ನ ಶಂಕರಗೌಡ ಅವರ ವಿರುದ್ಧ 18325 ಮತಗಳ ಅಂತರದಲ್ಲಿ ಜಯಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಬಾರಿ ಬಂಡಾಯ ಎದುರಾಗದಿರುವುದು ಜನತಾ ಪಕ್ಷಕ್ಕೆ ವರದಾನವಾಯಿತು.

1989ರಲ್ಲಿ ಜನತಾದಳದ ಟಿಕೆಟ್‌ನೊಂದಿಗೆ ಸ್ಪರ್ಧಿಸಿದ್ದ ಗುಜ್ಜಲ ಹನುಮಂತಪ್ಪ,  ಕಾಂಗ್ರೆಸ್‌ನ ಅಬ್ದುಲ್ ವಹಾಬ್ ವಿರುದ್ಧ 32,020 ಮತಗಳ ಭಾರಿ ಅಂತರದಲ್ಲಿ ಜಯಿಸಿದ್ದರು. ಎರಡೇ ವರ್ಷಗಳ ಅವಧಿಯಲ್ಲಿ ಅಂದರೆ, 1991ರಲ್ಲಿ ಹನುಮಂತಪ್ಪ ಅವರ ನಿಧನದಿಂದ ಎದುರಾದ ಉಪ ಚುನಾವಣೆಯಲ್ಲಿ ಮಾಜಿ ಶಾಸಕ ಸತ್ಯನಾರಾಯಣ ಸಿಂಗ್ ಅವರ ಪುತ್ರ ಬಿ.ರತನ್‌ಸಿಂಗ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಬಿಜೆಪಿ ಸೇರಿಕೊಂಡಿದ್ದ ಶಂಕರಗೌಡ ಅವರ ವಿರುದ್ಧ ಜಯಿಸಿದ್ದರು.1994ರಲ್ಲಿ ಬಿಜೆಪಿಯನ್ನು ಪ್ರಬಲಗೊಳಿಸಿದ್ದ ಶಂಕರಗೌಡ ಕಾಂಗ್ರೆಸ್‌ನ ಅಬ್ದುಲ್ ವಹಾಬ್ ವಿರುದ್ಧ 18261 ಮತಗಳ ಅಂತರದಲ್ಲಿ ಜಯಿಸಿ, ಸತ್ಯನಾರಾಯಣ ಸಿಂಗ್ ಹೊರತುಪಡಿಸಿದರೆ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾದ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ಗುಜ್ಜಲ ಜಯಲಕ್ಷ್ಮಿ ಅವರು ಶಂಕರಗೌಡ ಅವರನ್ನು 11205 ಮತಗಳ ಅಂತರದಲ್ಲಿ ಸೋಲಿಸಿ, ಕ್ಷೇತ್ರದ ಎರಡನೇ ಮಹಿಳಾ ಪ್ರತಿನಿಧಿಯಾಗಿ ಹೊರಹೊಮ್ಮಿದರು.2004ರಲ್ಲಿ ನಡೆದ ಚುನಾವಣೆಯಲ್ಲೂ ಬಂಡಾಯ ಎದುರಿಸಿದ ಕಾಂಗ್ರೆಸ್ ಪಕ್ಷಕ್ಕೆ ಎಚ್.ಆರ್. ಗವಿಯಪ್ಪ ಕಂಟಕವಾದರಲ್ಲದೆ, ಪಕ್ಷೇತರರಾಗಿ ಸ್ಪರ್ಧಿಸಿ ಜಯಿಸಿದರೂ ನಂತರ ಕಾಂಗ್ರೆಸ್ ಸೇರಿ ಭಯ ನಿವಾರಿಸಿದರು. ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ 2008ರಲ್ಲಿ ಮರಿಯಮ್ಮನಹಳ್ಳಿ, ಕಂಪ್ಲಿ ಹೋಬಳಿಗಳನ್ನು ಕಳೆದುಕೊಂಡು ವಿಜಯನಗರ ಕ್ಷೇತ್ರವಾಗಿ ಬದಲಾದ ಈ ಕ್ಷೇತ್ರಕ್ಕೆ ಹೊಸಪೇಟೆ ತಾಲ್ಲೂಕಿನ ಗಾದಿಗನೂರು, ಪಾಪಿನಾಯಕನಹಳ್ಳಿ, ಕಾರಿಗನೂರು ಕ್ಷೇತ್ರಗಳನ್ನು ಸಂಡೂರು ಕ್ಷೇತ್ರದಿಂದ ಬೇರ್ಪಡಿಸಿ ಸೇರಿಸಲಾಯಿತು.ಜಿಲ್ಲೆಯ ಬಳ್ಳಾರಿ ಕ್ಷೇತ್ರ ಹೊರತುಪಡಿಸಿದರೆ, ಸಾಮಾನ್ಯ ಅಭ್ಯರ್ಥಿಗೆ ಮೀಸಲಿರುವ ಮತ್ತೊಂದು ಕ್ಷೇತ್ರವಾಗಿರುವ ವಿಜಯನಗರದ ಕ್ಷೇತ್ರದಲ್ಲಿ 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಬಿ.ಎಸ್. ಆನಂದ್‌ಸಿಂಗ್ ಸುಲಭವಾಗಿ ಗೆಲ್ಲುವುದಕ್ಕೂ ಕಾಂಗ್ರೆಸ್‌ನ ಬಂಡಾಯವೇ ವರದಾನವಾಯಿತು.

ಕಾಂಗ್ರೆಸ್ ಪಕ್ಷ ಎಚ್.ಆರ್. ಗವಿಯಪ್ಪ ಅವರಿಗೆ ಟಿಕೆಟ್ ನೀಡಿದ್ದರಿಂದ ಬಂಡೆದ್ದ ದೀಪಕ್‌ಕುಮಾರ್ ಸಿಂಗ್ ಪಕ್ಷೇತರರಾಗಿ ಸ್ಪರ್ಧಿಸಿದ್ದು ಬಿಜೆಪಿಗೆ ವರವಾಯಿತಲ್ಲದೆ, ಕ್ಷೇತ್ರದ ಮೊದಲ ಶಾಸಕ ಸಚಿವ ಸ್ಥಾನವನ್ನೂ ಪಡೆದರು.ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿರುವ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಪಕ್ಷದಿಂದ ಗವಿಯಪ್ಪ ಮತ್ತು ದೀಪಕ್‌ಕುಮಾರ್ ಸಿಂಗ್ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಮತ್ತೆ ಬಂಡಾಯದ ಬಾವುಟ ಹಾರುವ ಎಲ್ಲ ಸಾಧ್ಯತೆಗಳೂ ಇವೆ. ಶಾಸಕ ಆನಂದ್‌ಸಿಂಗ್ ಬಿಜೆಪಿಯಿಂದಲೂ ದೂರವುಳಿದು ತಟಸ್ಥರಾಗಿದ್ದು, ಪಕ್ಷೇತರರಾಗಿ ಸ್ಪರ್ಧೆಗಿಳಿಯುವ ಸೂಚನೆ ನೀಡಿರುವುದು ಇನ್ನೊಂದು ವಿಶೇಷ.

ಪ್ರತಿಕ್ರಿಯಿಸಿ (+)