ಶನಿವಾರ, ಜೂನ್ 12, 2021
23 °C
ಕಾಂಗ್ರೆಸ್‌ ಚುನಾವಣೆ ಗೊಂದಲದ ಗೂಡು– 16 ಮತದಾರರಿಗೆ ಆಕ್ಷೇಪ

ಬಂಡಾಯವೆದ್ದು ಪಕ್ಷ ತೊರೆದವರಿಗೂ ಮತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪಕ್ಷದ ಏಳಿಗೆಗಾಗಿ ದುಡಿವ ಪದಾಧಿಕಾರಿಗಳಿಗೆ ಮತದಾನದ ಅವಕಾಶವಿಲ್ಲ. ಪಕ್ಷದ ಮುಖಂಡರ ವಿರುದ್ಧ ಬಂಡಾಯವೆದ್ದು, ಪಕ್ಷವನ್ನೇ ತೊರೆದವರಿಗೆ ಲೋಕಸಭಾ ಅಭ್ಯರ್ಥಿ­ಯನ್ನು ಆರಿಸುವ ಅವಕಾಶ! ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಕಾಂಗ್ರಸ್‌ ಪಕ್ಷ ನಡೆಸುತ್ತಿರುವ ಚುನಾವಣೆಯ ವಿಶೇಷ ಇದು!ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ವಿರುದ್ಧ ಸಿಡಿದೆದ್ದು, ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶ್ರಫ್‌ ಅವರ ಹೆಸರು ಮತದಾರರ ಪಟ್ಟಿಯಲ್ಲಿದೆ. ಅವರಿಗೆ ಮಾಜಿ ಮೇಯರ್‌ ಎಂಬ ನೆಲೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷರ ನೆಲೆಯಲ್ಲಿ ಅವರು ಸಲ್ಲಿಸಿದ್ದ  ಅರ್ಜಿ, ಅವರು ಕಾಂಗ್ರೆಸ್‌ ಸದಸ್ಯರಾಗಿ ಉಳಿದಿಲ್ಲ ಎಂಬ ಕಾರಣಕ್ಕೆ ತಿರಸ್ಕೃತಗೊಂಡಿದೆ. ಹಾಗಾಗಿ ಅವರ ಹೆಸರು ಮತದಾರರ ಪಟ್ಟಿಯಲ್ಲೂ ಇದ್ದು, ತಿರಸ್ಕೃತಗೊಂಡವರ ಪಟ್ಟಿಯಲ್ಲೂ ಇರುವುದು ಅಚ್ಚರಿಗೆ ಕಾರಣವಾಗಿದೆ. ಮತದಾರರ ಪಟ್ಟಿ ಗೊಂದಲದ ಗೂಡು

ಮತದಾರರ ಪಟ್ಟಿಗೆ 1059 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ  ಚುನಾವಣಾಧಿಕಾರಿಗಳು 617 ಮತದಾರರಿಗೆ ಮಾತ್ರ ಅನುಮೋದನೆ ನೀಡಿ, 442 ಮಂದಿಯ ಹೆಸರುಗಳನ್ನು ಚುನಾವಣಾಧಿಕಾರಿ ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ. ಪಕ್ಷದ ಪ್ರಮುಖರ ಹೆಸರೇ ಅನುಮೋದನೆಗೊಂಡ ಮತದಾರರ ಪಟ್ಟಿಯಲ್ಲಿ ಇಲ್ಲ. ಇದು ಕಾಂಗ್ರೆಸ್‌ ಮುಖಂಡರ ಅಸಮಾಧಾನಕ್ಕೆ ಗುರಿಯಾಗಿದೆ.ಮೂಡಾ ಮಾಜಿ ಅಧ್ಯಕ್ಷ ತೇಜೋಮಯ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕಳ್ಳಿಗೆ ತಾರಾನಾಥ ಶೆಟ್ಟಿ, ಮಾಜಿ ಸಂಸದ ಬಿ.ಇಬ್ರಾಹಿಂ, ಮಾಜಿ ಶಾಸಕ ಎನ್‌.ಎಂ.ಅಡ್ಯಂತಾಯ, ಅಖಿಲ ಭಾರತ ಕಾರ್ಮಿಕ ಸಂಘಟನೆಯ ಮಾಜಿ ಸಂಚಾಲಕ ಉಮೇಶ್ಚಂದ್ರ, ಪಿ.ಬಿ.ದಿವಾಕರ ರೈ, ಬಂಟ್ವಾಳ ಸುದರ್ಶನ ಜೈನ್‌, ಸಂತೋಷ್‌ ಕುಮಾರ್‌ ಶೆಟ್ಟಿ, ವಿಶ್ವಾಸ್‌ ಕುಮಾರ್‌ ದಾಸ್‌ ಅವರ ಹೆಸರಿಗೆ ಇನ್ನೂ ಅನುಮೊದನೆ ದೊರೆತಿಲ್ಲ.ಈ ಬಗ್ಗೆ ಭಾರಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲು ಚುನಾವಣಾಧಿ­ಕಾರಿಗಳು ಒಪ್ಪಿಕೊಂಡಿದ್ದು, ಮಾ.2ಕ್ಕೆ ಅಂತಿಮ ಪಟ್ಟಿ ಪ್ರಕಟಿಸುವುದಾಗಿ ಅವರು ತಿಳಿಸಿದ್ದಾರೆ. ‘ಮೊದಲ ಬಾರಿ ಚುನಾವಣೆ ನಡೆಯುತ್ತಿರುವುದರಿಂದ ಗೊಂದಲಗಳು ಸಹಜ. ಅರ್ಹತೆ ಇದ್ದೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಗಿರದಿದ್ದರೆ ಮರುಪರಿಶೀಲನೆ ನಡೆಸುತ್ತೇವೆ’ ಎಂದು ಚುನಾವಣಾಧಿಕಾರಿ ಪ್ರಣೀನ್‌ ನಾಯರ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಮತದಾರರ ಸಮ್ಮೇಳನ  

‘ರೊಸಾರಿಯೊ ಕಾಲೇಜು ಪ್ರಾಂಗಣದಲ್ಲಿ ಮಾ.9ರಂದು ಬೆಳಿಗ್ಗೆ 9ರಿಂದ 11 ಗಂಟೆವರೆಗೆ ಮತದಾರರ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಎಲ್ಲ ಅಭ್ಯರ್ಥಿಗಳಿಗೆ 10 ನಿಮಿಷ ಮತದಾರರನ್ನು ಉದ್ದೇಶಿಸಿ ಮಾತನಾಡುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಮತದಾನ ನಡೆಸಲಿದ್ದೇವೆ. ಮತ ಎಣಿಕೆ ಕಾರ್ಯ ಮುಗಿದ ಬಳಿಕ ಫಲಿತಾಂಶವನ್ನು ಸ್ಥಳದಲ್ಲೇ ಪ್ರಕಟಿಸಲಾಗುವುದು. ಅಧಿಕೃತ ಅಭ್ಯರ್ಥಿಯ ಹೆಸರನ್ನು ಮಾತ್ರ ಎಐಸಿಸಿಯ ಕೇಂದ್ರೀಯ ಚುನಾವಣಾ ಸಮಿತಿಯೇ ಪ್ರಕಟಿಸಲಿದೆ’ ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿ– 16 ಮಂದಿಗೆ ಆಕ್ಷೇಪ

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ16 ಮಂದಿಗಳಿಗೆ ಮತದಾನದ ಹಕ್ಕು ನೀಡುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬಿಜೆಪಿ ತೊರೆದು, ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್‌ ವಿರುದ್ಧ ಸೆಣಸಿದ್ದ ಮರಿಯಮ್ಮ ಥಾಮಸ್‌, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಪಾಲಿಕೆಯ ಮಾಜಿ ಸದಸ್ಯೆ ಶಕುಂತಳಾ ಕರ್ಕೇರ, ಪಾಲಿಕೆಯ ಮಾಜಿ ಸದಸ್ಯರಾದ  ರಾಮಚಂದ್ರ ಕರ್ಕೇರ,  ಗಿಲ್ಬರ್ಟ್‌ ಪಿಂಟೊ, ಎ.ಸುರೇಶ ಶೆಟ್ಟಿ, ಸುಜಾತಾ ಅಹಲ್ಯ, ಮಹಮ್ಮದ್‌ ನವಾಜ್‌, ಅನಸೂಯ, ಮಾಜಿ ಮೇಯರ್‌ ಅಶ್ರಫ್‌ ಅವರ ಹೆಸರೂ ಈ ಪಟ್ಟಿಯಲ್ಲಿದೆ.

ಕಣದಲ್ಲಿ ಮೂವರು

ಕಾಂಗ್ರೆಸ್‌ ಆಂತರಿಕ ಚುನಾವಣೆಗೆ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಯು.ಕೆ.ಮೋನು ಹಾಗೂ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಅವರು ಕಣದಲ್ಲಿದ್ದಾರೆ. ಅಭ್ಯರ್ಥಿಗಳ ಬಗ್ಗೆ ಆಕ್ಷೇಪಗಳಿದ್ದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆ ಒಳಗೆ ಸಲ್ಲಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.