ಮಂಗಳವಾರ, ನವೆಂಬರ್ 19, 2019
27 °C
ನಾಮಪತ್ರ ಸಲ್ಲಿಸಲು ಇಂದು ಕೊನೇ ದಿನ

ಬಂಡಾಯ, ಕಾತರ, ನಿರಾಶೆ, ಸಂಭ್ರಮ

Published:
Updated:

ಕೋಲಾರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆ ದಿನ. ವಿವಿಧ ಪಕ್ಷಗಳ ಟಿಕೆಟ್ ಪಡೆದವರಿಗೆ ಸಂಭ್ರಮ. ಟಿಕೆಟ್ ಪಡೆಯದೇ ಇರುವವರಿಗೆ ನಿರಾಶೆ. ಅವರ ಪೈಕಿ ಬಂಡಾಯ ಏಳುವ ಮನಸ್ಸು ಮಾಡಿರುವವರಿಗೆ ಕಾತರದ ದಿನ.ಟಿಕೆಟ್ ಪಡೆಯದ ಮುಖಂಡರ ಬೆಂಬಲಿಗರಿಗೆ ನಿರಾಶೆಯ ದಿನ. ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಬುಧವಾರ ಈ ನಿರಾಶೆ ಮತ್ತು ಬಂಡಾಯವನ್ನೂ ಚುನಾವಣೆ ಇತಿಹಾಸದಲ್ಲಿ ದಾಖಲು ಮಾಡಲಿದೆ.ಮುಳಬಾಗಲು ಕ್ಷೇತ್ರದಲ್ಲಿ ಕಳೆದ ಬಾರಿ 1828 ಮತಗಳ ಅಂತರದಿಂದ ಸೋತ ಜೆಡಿಎಸ್‌ನ ಮುನಿಆಂಜಪ್ಪ ತಮಗೇ ಟಿಕೆಟ್ ನೀಡಬೇಕು ಎಂದುಆಗ್ರಹಿಸಿ ಮಾಜಿ ಸಚಿವ ಆಲಂಗೂರು ಶ್ರೀನಿವಾಸ್ ಅವರ ಸಮಾಧಿಯ ಬಳಿ ಧರಣಿ ನಡೆಸಿದ್ದೇ ಅಲ್ಲದೆ, ಉಪವಾಸ ಸತ್ಯಾಗ್ರಹ ನಡೆಸಿದ ಪರಿಣಾಮ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಯೂ ನಡೆದಿದೆ.ಅವರಿಗೆ ಟಿಕೆಟ್ ಕೊಡಿಸುವ ಸಲುವಾಗಿ ಮುಖಂಡರು ಬೆಂಗಳೂರು ಪ್ರವಾಸ ಕೈಗೊಂಡಿದ್ದು ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.ಮಾಲೂರಿನಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಯತ್ನಿಸುತ್ತಿರುವ ಮಾಜಿ ಶಾಸಕ ಎ.ನಾಗರಾಜ್ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಅವರಿಗೆ `ಟಿಕೆಟ್ ತಪ್ಪಿಸುವ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರ ಪ್ರಯತ್ನ' ಕೈಗೂಡಿದೆ. ಹೀಗಾಗಿ ನಿರಾಶರಾಗಿರುವ ನಾಗರಾಜು ನಾಮಪತ್ರ ಸಲ್ಲಿಕೆ ಅವಧಿ ಮುಗಿದ ಬಳಿಕ ದೆಹಲಿಯಿಂದ ಮಾಲೂರಿಗೆ ಹೊರಟು ಬರಲಿದ್ದಾರೆ ಎನ್ನುತ್ತವೆ ಅವರ ಕುಟುಂಬದ ಮೂಲಗಳು.ಭೂಹಗರಣದಲ್ಲಿ ಸಿಲುಕಿರುವ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟರಿಗೆ ಬಿಜೆಪಿ ಟಿಕೆಟ್ ದೊರಕದ ಹಿನ್ನೆಲೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ ಎಂ.ಸಿ.ವೇಣುಗೋಪಾಲ್ ಅವರಿಗೆ ಟಿಕೆಟ್ ದೊರಕಿದೆ ಎನ್ನಲಾಗಿದೆ.ಕೇಂದ್ರ ಸಚಿವ ಕೆ.ಎಚ್,ಮುನಿಯಪ್ಪನವರ ತೀವ್ರ ಪ್ರಯತ್ನದ ನಡುವೆಯೂ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಅವರ ಮಗಳು ರೂಪಕಲಾ ಅವರನ್ನು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುವ ನಿರ್ಧಾರವನ್ನು ಅವರ ಬೆಂಬಲಿಗರು ಮಂಗಳವಾರ ಪ್ರಕಟಿಸಿದ್ದಾರೆ.

ಭುಗಿಲೆದ್ದ ಅಕ್ರೋಶ

ಮುಳಬಾಗಲು ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದೆ. ಕಾಂಗ್ರೆಸ್ ಕಚೇರಿಯ ಮುಂದೆ ನೆರೆದ ಪಕ್ಷದ ಕಾರ್ಯಕರ್ತರು ಪಕ್ಷದ ರಾಜ್ಯ ಮುಖಂಡರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.ಜಾತಿ ಪತ್ರ ಖಾಯಂ ಆದಲ್ಲಿ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ ಬೇರೆ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ತಮ್ಮ ಮನವಿಯನ್ನು ಪರಿಗಣಿಸದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜಿನಾಮೆ ನೀಡುವುದಾಗಿಯೂ ಘೋಷಿಸಿದರು.ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಉತ್ತನೂರು ಶ್ರೀನಿವಾಸ್, ತಾಲ್ಲೂಕು ಪಂಚಾಯತಿ ಸದಸ್ಯೆ ಲಕ್ಷ್ಮಿದೇವಮ್ಮ. ಮಂಡಲ್ ಮಾಜಿ ಪ್ರಧಾನ್ ಎಂ.ವಿ.ಸುಭಾಷ್‌ಗೌಡ, ಶ್ರೀನಾಥ್, ಡಾ.ವಜಾಯತ್ ಉಲ್ಲಾ ಖಾನ್,ಕ್ಯಾಸೆಟ್‌ಬಾಬು. ಅಬ್ದುಲ್ ಸರ್ದಾರ್, ನೂರ್‌ಪಾಷ, ಸಿ.ರಘುಪತಿ ಭಾಗವಹಿಸಿದ್ದರು.ಈ ಮಧ್ಯೆ ಸೋಮವಾರ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಶಾಸಕ ಅಮರೇಶ್ ತಮ್ಮ ಬೆಂಬಲಿಗರೊಂದಿಗೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.ಕೆಜಿಎಫ್: ರೂಪಕಲಾ `ಬಂಡಾಯ ಅಭ್ಯರ್ಥಿ'

ಬೇತಮಂಗಲ ಮತ್ತು ಕೆಜಿಎಫ್ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಇಚ್ಛೆಗೆ ವಿರುದ್ಧವಾಗಿ ಹೊರಗಿನವರನ್ನು ಕೆಜಿಎಫ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರು ರೂಪಕಲಾ ಅವರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದಾಗಿ ಮಂಗಳವಾರ ಘೋಷಿಸಿದರು.ಎರಡೂ ಬ್ಲಾಕ್ ಕಾಂಗ್ರೆಸ್‌ಗಳ ಶಿಫಾರಸ್ಸು ಕಡೆಗಣಿಸಿ ಕ್ಷೇತ್ರದ ಜನತೆಗೆ ಗೊತ್ತಿಲ್ಲದ ವ್ಯಕ್ತಿಯನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ. ಆಯ್ಕೆಯಾಗಿರುವ ಅಭ್ಯರ್ಥಿಯನ್ನು ಬದಲಾಯಿಸಿ, ರೂಪಕಲಾರವರಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ರೂಪಕಲಾ ಅವರನ್ನು ಕಣಕ್ಕೆ ಇಳಿಸಲಾಗುವುದು ಎಂದು ಪ್ರಕಟಿಸಿದರು.ಕಳೆದ ಐದು ದಶಕಗಳಿಂದ ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿಲ್ಲ. ಬೇರೆ ಕ್ಷೇತ್ರದ ವ್ಯಕ್ತಿಗಳನ್ನು ಸ್ಥಳೀಯ ಕಾರ್ಯಕರ್ತರ ಆಶಯಕ್ಕೆ ವಿರುದ್ಧವಾಗಿ ನಿಲ್ಲಿಸಿದ್ದರಿಂದ ಕಾಂಗ್ರೆಸ್ ಸತತವಾಗಿ ಸೋಲು ಅನುಭವಿಸಬೇಕಾಯಿತು. ಈ ಬಾರಿಯೂ ಅದೇ ತಪ್ಪನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ. ಕೂಡಲೇ ತಪ್ಪು ತಿದ್ದಿಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಬೇಕು ಎಂದು ಆಗ್ರಹಿಸಿದರು.ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೆಂಕಟಕೃಷ್ಣರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣರೆಡ್ಡಿ ಮತ್ತಿತರು ಈ ಮಾತನಾಡಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ತಾ.ಪಂ. ಸದಸ್ಯೆ ಜೈನಾಬಿ, ಶ್ರೀನಿವಾಸ್ ಹಾಜರಿದ್ದರು.ಮಾಲೂರಿನಲ್ಲೂ ಬಂಡಾಯ

ಈ ಬಾರಿ ಚುನಾವಣೆಯಲ್ಲಿ ಸ್ಥಳೀಯರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದ ಕೇಂದ್ರ ಮಂತ್ರಿ ಕೆ.ಹೆಚ್.ಮುನಿಯಪ್ಪ  ತಮ್ಮ ಮಾತು ಮೀರಿ ಹೊರಗಿನವರಿಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಅಸಮಾಧಾನ ಮಾಲೂರಿನಲ್ಲಿ ವ್ಯಕ್ತವಾಗಿದೆ.ಬೆಂಗಳೂರು ಪೂರ್ವ ತಾಲ್ಲೂಕಿನ ಬಿಳಿಶಿವಾಲೆ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಚೆನ್ನಕೇಶವ ಎಂಬುವವರಿಗೆ ಟಿಕೆಟ್ ಕೊಡಿಸಿರುವುದು ಸರಿಯಲ್ಲ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ `ಬಿ' ಫಾರಂ ಪಡೆದಿದ್ದ ಜೆ.ಕೃಷ್ಣಸಿಂಗ್, ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ವಾಪಸು ಬಂದ ಮಾಜಿ ಶಾಸಕ ಎ.ನಾಗರಾಜು, ವಕೀಲ ಸೋಮಶೇಖರ್, ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಸ್.ಎನ್.ರಘುನಾಥ್, ಸದಸ್ಯ ಹೆಚ್.ಕೆ.ಗೋವಿಂದಪ್ಪ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದರು. ಇವರೆಲ್ಲರೂ ಸ್ಥಳೀಯರಾಗಿದ್ದು ಯಾರಿಗೆ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ದುಡಿಯುವುದಾಗಿ ಹೇಳಿದ್ದರೂ ಮುನಿಯಪ್ಪ ಸ್ಥಳೀಯರನ್ನು ಕಡೆಗಣಿಸಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ.ಕೆಪಿಸಿಸಿಯಿಂದ ಸೋಮಶೇಖರ್, ರಘುನಾಥ್ ಮತ್ತು ಎಚ್.ಕೆ.ಗೋವಿಂದಪ್ಪ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ನಂತರದಲ್ಲಿ ಎ.ನಾಗರಾಜು ಹೆಸರು ಕೂಡ ಪಟ್ಟಿಗೆ ಸೇರಿತ್ತು. ಆದರೆ ಅವರಿಗೆ ಟಿಕೆಟ್ ದಕ್ಕಲಿಲ್ಲ. ಎರಡು ಬಾರಿ ಕಾಂಗ್ರೆಸ್ ಪಟ್ಟಿ ಪ್ರಕಟವಾದಾಗಲೂ ನಾಗರಾಜು ಅವರ ಹೆಸರನ್ನು ತಡೆಹಿಡಿಯಲು ಮುನಿಯಪ್ಪ ಅವರೇ ಕಾರಣ ಎಂಬುದು ನಾಗರಾಜು ಬೆಂಬಲಿಗರ ಆರೋಪ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಗರಾಜು ಬೆಂಬಲಿಗರೂ ಬಂಡಾಯ ಏಳುವ ಸಾಧ್ಯತೆಗಳಿವೆ.ಮುಳಬಾಗಲು: ಟಿಕೆಟ್‌ಗಾಗಿ ಧರಣಿ, ಮುನಿಆಂಜಪ್ಪ ಅಸ್ವಸ್ಥ

ಕಳೆದ ವಿಧಾಸಸಭೆ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋಲು ಕಂಡು ಈ ಬಾರಿ ಟಿಕೆಟ್ ದೊರಕಲಿಲ್ಲ ಎಂದು ಆಕಾಂಕ್ಷಿ ಮುನಿಆಂಜಪ್ಪ ತಾಲ್ಲೂಕಿನ ಅಲಂಗೂರು ಗ್ರಾಮದಲ್ಲಿ ಭಾನುವಾರದಿಂದ ನಡೆಸಿದ ಉಪವಾಸ ಸತ್ಯಾಗ್ರಹದ ಪರಿಣಾಮವಾಗಿ ತೀವ್ರವಾಗಿ ಅಸ್ವಸ್ಥರಾದರು.

ಸೋಮವಾರ ಸಂಜೆ  ಅವರನ್ನು ಮುಳಬಾಗಲು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಅವರು ಚೇತರಿಸಿಕೊಂಡರು.ಮುನಿಆಂಜಪ್ಪನವರ ಉಪವಾಸ ಸತ್ಯಾಗ್ರಹದ ಹಿನ್ನಲೆಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಅಲಂಗೂರು ಶಿವಶಂಕರ್, ಮುಖಂಡ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರ ಒತ್ತಾಡದ ಮೇರೆಗೆ ಮುನಿಆಂಜಪ್ಪನವರಿಗೆ ಬಿ ಪಾರಂ ನೀಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದರು ಎಂದು ಬೆಂಗಳೂರಿಗೆ ತೆರಳಿದ್ದ ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)