ಬುಧವಾರ, ನವೆಂಬರ್ 20, 2019
21 °C

ಬಂಡಾಯ ಶಮನಕ್ಕೆ ಕಾಂಗ್ರೆಸ್ ತಂಡ

Published:
Updated:
ಬಂಡಾಯ ಶಮನಕ್ಕೆ ಕಾಂಗ್ರೆಸ್ ತಂಡ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ಬಳಿಕ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಂಡಾಯ ಶಮನಕ್ಕೆ ಎಐಸಿಸಿ 12 ಮಂದಿ ವೀಕ್ಷಕರ ತಂಡವನ್ನು ನಿಯೋಜಿಸಿದೆ. ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ, ಎಐಸಿಸಿಯ ಎಂಟು ಕಾರ್ಯದರ್ಶಿಗಳು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಒಬ್ಬ ಸದಸ್ಯ ತಂಡದಲ್ಲಿದ್ದಾರೆ.ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಬಂಡಾಯದ ಬಿಸಿ ಅನುಭವಿಸುತ್ತಿದೆ. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷದ ಅಭ್ಯರ್ಥಿಗಳ ವಿರುದ್ಧ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಬಂಡೆದ್ದಿರುವವರು ಪಕ್ಷದ ಹಿರಿಯ ನಾಯಕರ ವಿರುದ್ಧವೇ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ರಾಜ್ಯ ಕಾಂಗ್ರೆಸ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಕೇಂದ್ರದಿಂದ ತಂಡವೊಂದನ್ನು ಕಳುಹಿಸಿರುವ ಎಐಸಿಸಿ, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದೆ. ಬಹುತೇಕ ವೀಕ್ಷಕರು ರಾಜ್ಯಕ್ಕೆ ಆಗಮಿಸಿದ್ದು, ಬಂಡಾಯ ಸಾರಿರುವವರ ಜೊತೆ ಸಂಧಾನಕ್ಕೆ ಇಳಿದಿದ್ದಾರೆ. ನಾಮಪತ್ರ ಹಿಂದಕ್ಕೆ ಪಡೆಯುವಂತೆ ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಮಿಸ್ತ್ರಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಶಕೀಲ್ ಅಹ್ಮದ್ ಅವರಿಗೆ ಇಡೀ ರಾಜ್ಯದಲ್ಲಿ ಬಂಡಾಯ ಶಮನ ಮತ್ತು ಚುನಾವಣಾ ಪ್ರಚಾರದ ಮೇಲೆ ನಿಗಾ ಇಡುವ ಹೊಣೆಗಾರಿಕೆ ಒಪ್ಪಿಸಲಾಗಿದೆ.  ದೀಪಕ್ ಬಾಬಾರಿಯಾ (ಎಐಸಿಸಿ ಕಾರ್ಯದರ್ಶಿ) ಅವರಿಗೆ ಕೆಪಿಸಿಸಿಯ ಮಾಧ್ಯಮ ಮತ್ತು ಪ್ರಸಾರದ ಮೇಲ್ವಿಚಾರಣೆಯ ಜವಾಬ್ದಾರಿ ಒಪ್ಪಿಸಲಾಗಿದೆ.ಎಐಸಿಸಿ ಕಾರ್ಯದರ್ಶಿ ಅಶೋಕ ತನ್ವರ್ ಬೆಂಗಳೂರಿನಲ್ಲಿದ್ದುಕೊಂಡು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಪ್ರವಾಸದ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಮತ್ತೊಬ್ಬ ಕಾರ್ಯದರ್ಶಿ ಮನೀಶ್ ಚಟ್ರಾತ್ ದೆಹಲಿಯಲ್ಲಿ ಎಐಸಿಸಿ ಸಮನ್ವಯ ಕೇಂದ್ರದ ಮೂಲಕ ಕಾರ್ಯನಿರ್ವಹಿಸುತ್ತಾರೆ. ಎಐಸಿಸಿ ಸಮನ್ವಯ ಕೇಂದ್ರದ ದೀಪಕ್ ಅಮೀನ್ ಮತ್ತು ಆಶಿಶ್ ಕುಲಕರ್ಣಿ ಅವರನ್ನು ಬೆಂಗಳೂರು ಸಮನ್ವಯ ಕೇಂದ್ರಕ್ಕೆ ನಿಯೋಜಿಸಲಾಗಿದೆ.

ಯಾರು ಯಾವ ಜಿಲ್ಲೆಗೆ?

* ಸಂಜಯ್ ಬಾಪ್ನ  (ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಶಿವಮೊಗ್ಗ)

*  ಸಂಜಯ ನಿರುಪಮ್ (ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಚಿಕ್ಕೋಡಿ)

* ವಿ.ಹನುಮಂತರಾವ್ (ಗುಲ್ಬರ್ಗ, ಬೀದರ್, ವಿಜಾಪುರ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ)

* ಆಶಾಕುಮಾರಿ (ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿತ್ರದುರ್ಗ ಮತ್ತು ತುಮಕೂರು)

 

* ವಿಜಯಲಕ್ಷ್ಮಿ ಸಾಧೋ (ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ದಕ್ಷಿಣ ಮತ್ತು  ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ)

ಪ್ರತಿಕ್ರಿಯಿಸಿ (+)