ಮಂಗಳವಾರ, ಜೂಲೈ 7, 2020
28 °C

ಬಂಡಾಯ :ಹೈಕಮಾಂಡ್ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡಾಯ :ಹೈಕಮಾಂಡ್ ಗರಂನವದೆಹಲಿ: ಮುಖ್ಯಮಂತ್ರಿ ವಿರುದ್ಧ ‘ಬಂಡಾಯ’ ಸಾರುವ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಕೆಲವು ಮುಖಂಡರು ಮುಂದಾಗಿರುವ ಕುರಿತು ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನ ಹೊಂದಿದೆ.ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ತಂಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಂಗಳವಾರ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಬಿಜೆಪಿಯೊಳಗಿನ ವಿದ್ಯಮಾನಗಳನ್ನು ವಿವರಿಸಿದರು. ಆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ತಮ್ಮ ಅತೃಪ್ತಿ ಹೊರಹಾಕಿದರೆಂದು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಎಸ್. ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಮತ್ತಿತರ ನಾಯಕರು ತಮ್ಮ ಸ್ಥಾನಮಾನದ ಹೊಣೆಗಾರಿಕೆ ಮರೆತು ಭಿನ್ನಮತೀಯ ಚಟುವಟಿಕೆ ನಡೆಸಿ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಇದು ‘ಭೂ ಹಗರಣ’ ಮತ್ತು ‘ಪ್ರೇರಣಾ ಟ್ರಸ್ಟ್’ ವಿಷಯಗಳನ್ನು ದೊಡ್ಡದು ಮಾಡುತ್ತಿರುವ ವಿರೋಧ ಪಕ್ಷಗಳಿಗೆ ಇನ್ನಷ್ಟು ಶಕ್ತಿ ತುಂಬುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದರು.‘ರಾಜ್ಯದಲ್ಲಿ ನಡೆದಿರುವ ಎಲ್ಲ ಬೆಳವಣಿಗೆಯೂ ನಮ್ಮ ಗಮನಕ್ಕೆ ಬಂದಿದೆ. ನೀವು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸರ್ಕಾರ ಮುನ್ನಡೆಸಿ. ಅಧಿಕಾರದಲ್ಲಿರುವ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸಹಜ. ಇದನ್ನು ಬಗೆಹರಿಸಿಕೊಂಡು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಿರಿ’ ಎಂದು ಯಡಿಯೂರಪ್ಪ ಅವರಿಗೆ ಮುಖಂಡರು ಕಿವಿಮಾತು ಹೇಳಿದರು.ಮಾತುಕತೆ ವೇಳೆ ಅರುಣ್ ಜೇಟ್ಲಿ ಅವರು ಅನಂತ ಕುಮಾರ್ ನಡವಳಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಹೈಕಮಾಂಡ್ ಒಳಗಡೆ ಇರುವ ಗುಂಪುಗಾರಿಕೆ ಕುರಿತು ವಿವರಿಸಿದರು. ಅನಂತ ಕುಮಾರ್- ಈಶ್ವರಪ್ಪ ಬಣದ ಒತ್ತಾಯದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅರವಿಂದ ಲಿಂಬಾವಳಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಈಗ ಅವರ ಜತೆಗೇ ಇವರು ಸೇರಿದ್ದಾರೆಂದು ವರಿಷ್ಠರು ಅತೃಪ್ತಿ ವ್ಯಕ್ತಪಡಿಸಿದರು.‘ಆಡಳಿತ ಪಕ್ಷದ ಪ್ರಭಾವಿ ನಾಯಕರೊಬ್ಬರ ಸಂಬಂಧಿ ಭಾಗಿಯಾಗಿದ್ದಾರೆನ್ನಲಾದ ಹಗರಣವನ್ನು ರಾಜ್ಯಸಭೆಯಲ್ಲಿ ಎತ್ತಲು ನೋಟಿಸ್ ನೀಡಿದ್ದೇನೆ, ನಮ್ಮ ಪಕ್ಷದ ಕೆಲವು ನಾಯಕರೇ ಇದಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಈ ವಿಷಯದ ಪ್ರಸ್ತಾಪ ಬೇಡ ಎಂದು ಒತ್ತಡ ಹಾಕುತ್ತಿದ್ದಾರೆ’ ಎಂದು ಜೇಟ್ಲಿ ಸಿಎಂ ಮುಂದೆ ಅಲವತ್ತುಕೊಂಡರು.‘ನೀವು ಜಮೀನು ಡಿನೋಟಿಫೈ ಮಾಡಿ ಸಂಬಂಧಿಕರ ಹೆಸರಲ್ಲಿ ಖರೀದಿಸಿದ್ದು ಗಂಭೀರ ಪ್ರಕರಣ. ಇದರಲ್ಲಿ ಸ್ವಜನ ಪಕ್ಷಪಾತ ಆಗಿದೆ. ಆಡಳಿತ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರ ಸಂಬಂಧಿ ಭಾಗಿಯಾಗಿರುವ ಇಂತಹದೇ ಪ್ರಕರಣವನ್ನು ರಾಜ್ಯಸಭೆಯಲ್ಲಿ ಕೆದಕಲು ನಾನು ನೋಟಿಸ್ ನೀಡಿದ್ದೇನೆ. ಈ ಹಗರಣ ಬೆಳಕಿಗೆ ಬಂದರೆ ನಿಮ್ಮ ಹಗರಣ ಗೌಣವಾಗುತ್ತದೆ. ಈ ಕಾರಣಕ್ಕೆ ಕೆಲ ನಾಯಕರು ಇದನ್ನು ಎತ್ತಬೇಡಿ ಎಂದು  ಒತ್ತಾಯಿಸುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಯಶವಂತ ಸಿನ್ಹ, ಜಸ್ವಂತ್ ಸಿಂಗ್ ಮೊದಲಾದವರು ನನಗೆ ಬೆಂಬಲ ನೀಡಿದ್ದಾರೆ’ ಎಂದೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಸ್ಪಷ್ಟಪಡಿಸಿದರು.ಯಡಿಯೂರಪ್ಪ ಬೆಳಿಗ್ಗೆ ಸಂಸತ್ ಭವನದಲ್ಲಿ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದರು. ಸಂಜೆ ಗಡ್ಕರಿ ಅವರನ್ನು ಕಂಡು ಬಿಜೆಪಿ ಬಿಕ್ಕಟ್ಟು ಕುರಿತು ಸಮಾಲೋಚಿಸಿದರು.ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್ ಆಹ್ಲುವಾಲಿಯಾ ಅವರನ್ನು ಮಂಗಳವಾರ ಸಂಜೆ ಭೇಟಿ ಮಾಡಿ ರಾಜ್ಯ ಯೋಜನಾ ಗಾತ್ರ ಕುರಿತು ಚರ್ಚಿಸಿದ ಬಳಿಕ ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಬೇಕಿತ್ತು.ಯೋಜನಾ ಆಯೋಗದಿಂದ ನೇರವಾಗಿ ಗಡ್ಕರಿ ಭೇಟಿಗೆ ಹೊರಟರು. ಮುಖ್ಯಮಂತ್ರಿ ಬದಲಿಗೆ ಸಚಿವರಾದ ಡಾ.ವಿ.ಎಸ್. ಆಚಾರ್ಯ, ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಯೋಜನಾ  ಆಯೋಗದ ಉಪಾಧ್ಯಕ್ಷ ರಾಮಚಂದ್ರಗೌಡ ಪತ್ರಿಕಾಗೋಷ್ಠಿ ನಡೆಸಿದರು.ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಕರ್ನಾಟಕ ಭವನದಲ್ಲಿ ತಮ್ಮ ಬೆಂಬಲಿಗ ಸಚಿವರು ಮತ್ತು ಸಂಸದರ ಸಭೆ ನಡೆಸಿದರು. ಈ ಸಭೆಗೆ ಕೆಲವು ಸಂಸದರು ಗೈರು ಹಾಜರಾಗಿದ್ದರು. ಸಂಜೆ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಬೆಂಬಲಿಗ ಸಚಿವರು ಮತ್ತು ಸಂಸದರು ಮತ್ತೆ ಸಭೆ ನಡೆಸಿದರು. ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿರುವ ಅನಂತ ಕುಮಾರ್ ಮತ್ತು ಈಶ್ವರಪ್ಪ ಅವರ ಬಾಯಿ ಮುಚ್ಚಿಸುವ ತಂತ್ರ ಕುರಿತು ಚರ್ಚಿಸಿದರು. ಅನಂತರ ಗಡ್ಕರಿ ಮನೆಗೆ ತೆರಳಿದರು.ಯಡಿಯೂರಪ್ಪ ಬಣಕ್ಕೆ ಹೆಚ್ಚು ಮಾತನಾಡಲು ಅವಕಾಶ ನೀಡದ ಗಡ್ಕರಿ, ‘‘ನನಗೆ ಎಲ್ಲ ಗೊತ್ತಿದೆ. ಎಲ್ಲರೊಟ್ಟಿಗೂ ಮಾತನಾಡಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ಯಡಿಯೂರಪ್ಪ ಸರ್ಕಾರ ಮುನ್ನಡೆಸಲು ಸಮರ್ಥವಾಗಿದ್ದಾರೆ ಎಂದು ಹೇಳಿ ಕಳುಹಿಸಿದರು ಎಂದು  ವಿಶ್ವಸನೀಯ ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.