ಬಂಡಿಮಠಕ್ಕೆ ಸ್ಥಳಾಂತರಿಸುವಂತೆ ಪ್ರತಿಭಟನೆ

6
ಕಾರ್ಕಳ: ಬಸ್ ನಿಲ್ದಾಣ ಸಮಸ್ಯೆ

ಬಂಡಿಮಠಕ್ಕೆ ಸ್ಥಳಾಂತರಿಸುವಂತೆ ಪ್ರತಿಭಟನೆ

Published:
Updated:

ಕಾರ್ಕಳ: ಬಂಡಿಮಠಕ್ಕೆ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಬುಧವಾರ ಬಂಡಿಮಠ ಬಸ್‌ನಿಲ್ದಾಣದ ಎದುರು ಸಾರ್ವಜಿಕರು ಪ್ರತಿಭಟನಾ ಸಭೆಯನ್ನು ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ  ಮಹಮ್ಮದ್ ಶರೀಫ್ ಮಾತನಾಡಿ, ಬಂಡೀಮಠ ಪಟ್ಟಣದ ವ್ಯಾಪಾರಿ ಹಿತಾಸಕ್ತಿ ಹಾಗೂ ರಾಜಕೀಯ ಹಿತಾಸಕ್ತಿಗಳು ಆಸ್ಪತ್ರೆ, ವಿದ್ಯಾರ್ಥಿಗಳ ಅಗತ್ಯ ಮುಂದಿಟ್ಟು ಬಸ್ ನಿಲ್ದಾಣವನ್ನು ಮರಳಿ ಹಳೆನಿವೇಶನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

       

ಜಿಲ್ಲಾಧಿಕಾರಿ ಬಸ್ ಸಂಚಾರ ಮಾರ್ಗಸೂಚಿ ಬದಲಾಯಿಸಿ ಎರಡೂ ಬಸ್‌ನಿಲ್ದಾಣಗಳನ್ನು ಉಪಯೋಗಿಸುವಂತೆ ಆದೇಶ ಹೊರಡಿಸಿದ್ದು, ವಿವಿಧ ಕಾರಣಗಳನ್ನು ನೀಡಿ ಈ ಬಸ್ ಸಂಚಾರ ಮಾರ್ಗ ಸೂಚಿಯನ್ನು ವೆಂಕಟರಮಣ ದೇವರ ಲಕ್ಷದೀಪೋತ್ಸವದ ಮರುದಿನ ಕಾರ್ಯಗತಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ, ಈವರೆಗೆ ಈ ಆದೇಶ ಕೇವಲ ಆದೇಶವಾಗಿಯೇ ಉಳಿದಿದೆ.ಈ ಮಧ್ಯೆ ಹಳೆ  ಬಸ್‌ನಿಲ್ದಾಣಕ್ಕೆ ಸಂಬಂಧಪಟ್ಟ ಕೆಲವು ವರ್ತಕರು ರಾಜಕೀಯ ಶಕ್ತಿಯನ್ನು ಬಳಸಿ ನ್ಯಾಯಾಲಯದ ಆದೇಶವನ್ನು ಕಾರ್ಯಗತಗೊಳಿಸದಂತೆ ಬಾಹ್ಯ ಕೆಲಸ ಮಾಡುತ್ತಿದ್ದಾರೆ ಎಂದರು.ನ್ಯಾಯಾಲಯದ ಆದೇಶವನ್ನು ಕಾರ್ಯಗತಗೊಳಿಸಲು ಮೀನಮೇಷ ಎಣಿಸುತ್ತಿರುವುದು ವಿಷಾದನೀಯ. ಹೈಕೋರ್ಟ್ ಆದೇಶವನ್ನೇ ಬದಿಗಿಟ್ಟು ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಲು ಹೊರಟಿರುವ ಮಂದಿಗೆ ಕೋರ್ಟ್ ಆದೇಶ ಉಲ್ಲಂಘನೆ ಅಸಾಧ್ಯ ಎಂದು ತಿಳಿದಿದ್ದರೂ ರಾಜಕೀಯ ಬಳಸಿ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ ಮಾತ್ರಕ್ಕೆ ನ್ಯಾಯಾಲಯದ ಆದೇಶವನ್ನು ಕಡೆಗಣಿಸಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶದಂತೆ ತಾವು ಹೊರಡಿಸಿದ ಬಂಡೀಮಠ ಹಾಗೂ ಹಳೆ ಬಸ್‌ನಿಲ್ದಾಣವನ್ನು ಉಪಯೋಗಿಸಿ ಬಸ್‌ಸಂಚಾರ ವ್ಯವಸ್ಥೆಯನ್ನು ಕೂಡಲೇ ಕಾರ್ಯಗತಗೊಳಿಸಬೇಕು ಎಂದರು.ಸುಮಾರು  ರೂ. 1.85 ಕೋಟಿ ವೆಚ್ಚದಲ್ಲಿ ಕಾಂಕ್ರಿಟೀಕರಣ, ಕುಡಿಯುವ ನೀರು, ಶೌಚಾಲಯ, ಹೈಮಾಸ್ಟ್ ದೀಪ ಮುಂತಾದ ಮೂಲ ಸೌಕರ್ಯಗಳು ಇಲ್ಲಿದ್ದರೂ ಕೇವಲ ರಾಜಕೀಯ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯಗತಗೊಳಿಸದಿರುವುದು ಯಾವ ನ್ಯಾಯ? ಸರ್ಕಾರಕ್ಕೆ ಸಾರ್ವಜನಿಕ ತಾಸಕ್ತಿ ಮುಖ್ಯವೋ, ಪಟ್ಟಭದ್ರ ವರ್ತಕರ ಹಿತಾಸಕ್ತಿ ಮುಖ್ಯವೋ ಎಂಬುದು ಜನರಿಗೆ ತಿಳಿಯಬೇಕಾಗಿದೆ ಎಂದರು.ತಮ್ಮ ಆದೇಶ ಕೂಡಲೇ ಪಾಲನೆಯಾಗದಿದ್ದಲ್ಲಿ ಕೋರ್ಟ್ ಆದೇಶವನ್ನು ಪಾಲಿಸಿಲ್ಲವೆಂಬ ಆರೋಪದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ಹೈಕೋರ್ಟಿನ ಮೊರೆಹೋಗುವುದರೊಂದಿಗೆ ಕಾನೂನು ರೀತಿಯ ಪ್ರತಿಭಟನೆಗಳನ್ನು ನಿರಂತರವಾಗಿ ಇನ್ನು ಮುಂದೆಯೂ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.ಸಾಮಾಜಿಕ ಹೋರಾಟಗಾರ ಬಿಪಿನ್‌ಚಂದ್ರಪಾಲ್ ನಕ್ರೆ, ಪುರಸಭಾ ಸದಸ್ಯರಾದ ಅಶ್ಫಕ್ ಅಹ್ಮದ್, ಮಾಜಿ ಸದಸ್ಯ ಆನಂದ ಪಿ ಮತ್ತು ಗೋಪಾಲಕೃಷ್ಣ ನಾಯಕ್ ಮೊದಲಾದವರು ಮಾತನಾಡಿದರು.

ಪುರಸಭಾ ಸದಸ್ಯ ಸೀತಾರಾಮ, ರಾಜೇಶ್ ದೇವಾಡಿಗ ಹಾಗೂ ಭವಾನಿ ಶಂಕರ್, ಗಿರೀಶ್ ದೇವಾಡಿಗ ಮತ್ತಿತರರು ಇದ್ದರು.ಹರ್ಮನ್ ಕ್ಯಾಸ್ಟಲಿನೊ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನಾಕಾರರು ಪ್ರತಿಭಟನೆಯ ಬಳಿಕ ಬಂಡೀಮಠ ಬಸ್ ನಿಲ್ದಾಣದಿಂದ ಮುಖ್ಯರಸ್ತೆ ಮೂಲಕ ಬೃಹತ್ ಮೆರವಣಿಗೆಯೊಂದಿಗೆ ಸಾಗಿ ಪುರಸಭಾ ಅಧ್ಯಕ್ಷರಿಗೆ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸುವ ಬಗ್ಗೆ ಮನವಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry