ಬಂಡಿಯಾತ್ರೆಯ ಬಹಿರಂಗ ಪ್ರದರ್ಶನ

ಗುರುವಾರ , ಜೂಲೈ 18, 2019
22 °C

ಬಂಡಿಯಾತ್ರೆಯ ಬಹಿರಂಗ ಪ್ರದರ್ಶನ

Published:
Updated:

ಬೆಂಗಳೂರು: ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ಮತ್ತು ಮುದ್ದೇಬಿಹಾಳ ಕ್ಷೇತ್ರಗಳ ಕಾಂಗ್ರೆಸ್ ಶಾಸಕರ ನಡುವಿನ `ಜಗಳ~ ಸೋಮವಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ದೇವರಹಿಪ್ಪರಗಿ ಶಾಸಕರ `ಬಂಡಿಯಾತ್ರೆ~ಯೇ ಜಗಳದ ಬಹಿರಂಗ ಪ್ರದರ್ಶನಕ್ಕೆ ನಾಂದಿಯಾಯಿತು.ಬರಗಾಲ ಪೀಡಿತ ಪ್ರದೇಶದ ಜನರಿಗೆ ತುರ್ತು ನೆರವು ಒದಗಿಸುವಂತೆ ಒತ್ತಾಯಿಸಿ ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸೋಮವಾರವೇ ಮುದ್ದೇಬಿಹಾಳದಲ್ಲಿ ಬಂಡಿಯಾತ್ರೆ ಮತ್ತು ಉಪವಾಸ ಸತ್ಯಾಗ್ರಹ ನಡೆಸಿದರು.ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸೇಡಂನ ಕಾಂಗ್ರೆಸ್ ಶಾಸಕ ಡಾ.ಶರಣಪ್ರಕಾಶ ಪಾಟೀಲ, `ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸದನದ ಸದಸ್ಯರೊಬ್ಬರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ತಕ್ಷಣವೇ ಎ.ಎಸ್.ಪಾಟೀಲ್ ಅವರನ್ನು ಸಂಪರ್ಕಿಸಿ ಬೇಡಿಕೆಗಳನ್ನು ಈಡೇರಿಸಬೇಕು~ ಎಂದು ಒತ್ತಾಯಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, `ವಿಧಾನಮಂಡಲದ ಅಧಿವೇಶನದ ಕಾರಣಕ್ಕಾಗಿ ಮುದ್ದೇಬಿಹಾಳಕ್ಕೆ ಹೋಗಿ ಶಾಸಕರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಉಪವಾಸ ಸತ್ಯಾಗ್ರಹ ಮಾಡದಂತೆ ನಾನು ಇಲ್ಲಿಂದಲೇ ಮನವಿ ಮಾಡುತ್ತೇನೆ. ಅಧಿಕಾರಿಗಳ ಮೂಲಕ ಅವರನ್ನು ಸಂಪರ್ಕಿಸಿ ಮಾತನಾಡುತ್ತೇನೆ~ ಎಂದರು.ತಕ್ಷಣವೇ ಎದ್ದುನಿಂತ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ, `ಮುದ್ದೇಬಿಹಾಳದ ಶಾಸಕ ನಾನು. ನನ್ನ ಕ್ಷೇತ್ರದಲ್ಲಿ ಬರ ಪರಿಹಾರ ಕಾಮಗಾರಿಗಳು ಚೆನ್ನಾಗಿ ನಡೆಯುತ್ತಿವೆ. ಈ ಸದನದ ಸದಸ್ಯರು ರಾಜಕೀಯ ಉದ್ದೇಶಗಳಿಗಾಗಿ ಧರಣಿ, ಸತ್ಯಾಗ್ರಹ ನಡೆಸುವುದು, ತಂತ್ರಗಾರಿಕೆ ನಡೆಸುವುದನ್ನು ನಿಲ್ಲಿಸದಿದ್ದರೆ ಯಾರಿಗೂ ಶೋಭೆ ತರುವುದಿಲ್ಲ~ ಎಂದು ರೇಗಿದರು.`ಶರಣ ಪ್ರಕಾಶ ಅವರೇ, ನಿಮಗೆ ತಿಳಿಯದ ವಿಷಯಗಳನ್ನು ಪ್ರಸ್ತಾಪಿಸಬೇಡಿ. ಪಕ್ಷದ ವೇದಿಕೆಯಲ್ಲಿ ಬೇಕಿದ್ದರೆ ಮಾತಾಡೋಣ. ಎ.ಎಸ್.ಪಾಟೀಲರು ದೇವರಹಿಪ್ಪರಗಿ ಶಾಸಕರು. ಅಲ್ಲಿ ಧರಣಿ ಮಾಡುವುದನ್ನು ಬಿಟ್ಟು ನನ್ನ ಕ್ಷೇತ್ರದಲ್ಲಿ ಏಕೆ ಧರಣಿ ಮಾಡುತ್ತಿದ್ದಾರೆ. ನಾನೂ ಎರಡು ಬಾರಿ ಶಾಸಕನಾಗಿದ್ದೇನೆ. ಇಲ್ಲಿಗೆ ಮಸಾಲೆ ಅರೆಯಲು ಬಂದಿಲ್ಲ~ ಎಂದು ಸಿಟ್ಟು ಹೊರಹಾಕಿದರು.ಯಾವುದೇ ದುರುದ್ದೇಶ ಇಲ್ಲದೇ ತಾವು ವಿಷಯ ಪ್ರಸ್ತಾಪಿಸಿರುವುದಾಗಿ ನಾಡಗೌಡರನ್ನು ಸಮಾಧಾನಪಡಿಸಲು ಶರಣಪ್ರಕಾಶ ಪ್ರಯತ್ನಿಸಿದರು. ಆದರೂ, ಸಮಾಧಾನಗೊಳ್ಳದ ನಾಡಗೌಡರು ಕಾಂಗ್ರೆಸ್‌ನ ಇತರೆ ಶಾಸಕರ ಬಳಿ ಹೋಗಿ ಪ್ರಕರಣದ ಕುರಿತು ಚರ್ಚಿಸುತ್ತಿದ್ದುದು ಕಂಡುಬಂತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry