ಬಂಡಿಹಳ್ಳಿ ಮುನೇಶ್ವರ ಸ್ವಾಮಿ ಜಾತ್ರೆ

7

ಬಂಡಿಹಳ್ಳಿ ಮುನೇಶ್ವರ ಸ್ವಾಮಿ ಜಾತ್ರೆ

Published:
Updated:

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಬಂಡಿಹಳ್ಳಿ ಗ್ರಾಮದ ಮುನೇಶ್ವರಸ್ವಾಮಿ ಜಾತ್ರೆ ಸೋಮವಾರ, ಮಂಗಳವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಇಪ್ಪತ್ತಾರನೇ ಜಾತ್ರಾ ಮಹೋತ್ಸವದಲ್ಲಿ ಜಿಲ್ಲೆಯ ಜನರ ಜತೆ ಬೆಂಗಳೂರು, ಕೋಲಾರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಬಂದಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಸೋಮವಾರ ನಡೆದ ಹರಕೆ ತೀರುವಳಿ, ಉರುಳುಸೇವೆಯಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ನಡೆದ ಬಾಯಿ ಬೀಗೋತ್ಸವದಲ್ಲೂ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಹರಕೆ ತೀರಿಸಿದರು.ಮಹಿಳೆಯೋರ್ವರ ಮೇಲೆ ಆವಾಹನೆಯಾಗುವ ಮುನೇಶ್ವರ ಸ್ವಾಮಿ ಭಕ್ತರ ಮೇಲೆ ಉರುಳುಸೇವೆ ಮಾಡುವ ಮೂಲಕ ಅವರ ಇಷ್ಟಾರ್ಥ ನೆರವೇರಿಸುತ್ತದೆ ಎಂಬ ಪ್ರತೀತಿ ಈ ದೇವಾಲಯದಲ್ಲಿದೆ.ಮಹಾ ಶಿವಾರಾತ್ರಿ ದಿನ ವಿವಿಧೆಡೆಗಳಿಂದ ಆಗಮಿಸುವ ಭಕ್ತರು ಮೊದಲಿಗೆ ಗ್ರಾಮದ ಪಾರ್ವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುನೇಶ್ವರಸ್ವಾಮಿಗೆ ಹರಕೆ ಹೊತ್ತು ದೇವಾಲಯದ ಮುಂಭಾಗದ ರಸ್ತೆಯಲ್ಲಿ ಸುಡು ಬಿಸಿಲನ್ನು ಲೆಕ್ಕಿಸಿದೆ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲರೂ ಮಲಗುತ್ತಾರೆ.ಮಧ್ಯಾಹ್ನ 12ರ ಸುಮಾರಿಗೆ ಗ್ರಾಮದ ಗೌರಮ್ಮ ಎಂಬ ಮಹಿಳೆ ಮೇಲೆ ಆವಾಹನೆಯಾಗುವ ಮುನೇಶ್ವರಸ್ವಾಮಿ ಎಲ್ಲ ಭಕ್ತರ ಮೇಲೆ ಹಾವು ಸಂಚರಿಸುವ ಮಾದರಿಯಲ್ಲಿ ಸಾಗಿ ಉರುಳು ಸೇವೆ ಮಾಡುತ್ತಾರೆ. ಮುನೇಶ್ವರ ಸ್ವಾಮಿ ಭಕ್ತರ ಮೇಲೆ ಉರುಳುಸೇವೆ ಮಾಡಿದರೆ ತಮ್ಮ ಹರಕೆ ಈಡೇರಿದಂತೆ ಎಂದು ಭಕ್ತರು ನಂಬಿದ್ದಾರೆ.ಇದರ ಜತೆ ಮದ್ಯವ್ಯಸನಿಗಳು ಹಾಗೂ ಇನ್ನಿತರ ದುಶ್ಚಟಗಳಿಗೆ ಬಲಿಯಾದವರನ್ನು ಚಟದಿಂದ ಮುಕ್ತರನ್ನಾಗಿಸುವ ದೇವರೆಂದು ನಂಬಿರುವ ಭಕ್ತರು ದುಶ್ಚಟಗಳಿರುವ ತಮ್ಮ ಕುಟುಂಬದ ಸದಸ್ಯರನ್ನು ಮಹಿಳೆಯರು ಇಲ್ಲಿಗೆ ಕರೆ ತರುತ್ತಾರೆ. ಮುಳ್ಳಿನ ಹಲಗೆ ಮೇಲೆ ನಿಲ್ಲಿಸಿ ಅವರ ಮೇಲೆ ಮುನೇಶ್ವರ ಸ್ವಾಮಿ ಆವಾಹನೆಯಾಗಿರುವ ಮಹಿಳೆ ನಿಂತು ಅವರಿಂದ ಆಣೆ ಪ್ರಮಾಣ ಮಾಡಿಸಿ ದುಶ್ಚಟ ಬಿಡಿಸುತ್ತಾರೆ.

 

ಈ ರೀತಿ ಆಣೆ ಪ್ರಮಾಣ ಮಾಡಿದ ವ್ಯಕ್ತಿ ಪುನಃ ದುಶ್ಚಟಗಳಿಗೆ ಬಲಿಯಾದ ನಿದರ್ಶನಗಳೇ ಇಲ್ಲ ಎಂದು ಗ್ರಾಮಸ್ಥರಾದ ಲಿಂಗರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟರಾಮೇಗೌಡ ತಿಳಿಸಿದರು. ಇದುವರೆವಿಗೂ 400ಕ್ಕೂ ಹೆಚ್ಚು ಪುರುಷರು ದುಶ್ಚಟಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಗಂಗಾಧರೇಶ್ವರ ರಥೋತ್ಸವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry