ಬಂಡಿ ಚಕ್ರ ತಿರುಗಿಸಿದರು!

7

ಬಂಡಿ ಚಕ್ರ ತಿರುಗಿಸಿದರು!

Published:
Updated:

ಬೆಂಗಳೂರು: ಮಲ್ಲೇಶ್ವರದ ಆಟದ ಮೈದಾನದಲ್ಲಿ ಭಾನುವಾರ ಸಾಹಸಿಗರ ಸಾಮ್ರಾಜ್ಯವೇ ನಿರ್ಮಾಣವಾಗಿತ್ತು. ಒಬ್ಬರು ಎರಡೂ ತೋಳುಗಳಲ್ಲಿ ಒಂದೊಂದು ಎತ್ತಿನ ಬಂಡಿಯ ಚಕ್ರ ಹಾಕಿಕೊಂಡು ಸುದರ್ಶನ ಚಕ್ರದಂತೆ ಗರ ಗರ ತಿರುಗಿಸಿದರೆ, ಮತ್ತೊಬ್ಬರು ಹಲ್ಲಿನಿಂದ ನೇಗಿಲನ್ನು ಹೊತ್ತು ನಡೆದರು.

ಇನ್ನೊಬ್ಬರು 55 ಕೆಜಿ ಭಾರದ ಕಲ್ಲಿನ ಗುಂಡನ್ನು ವಾಲಿಬಾಲ್ ಚೆಂಡು ಮಾಡಿಕೊಂಡು ಆಟ ಆಡಿದರು.

ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನ ಹಾಗೂ ಕರ್ನಾಟಕ ಸಾಹಸ ಕಲಾ ಅಕಾಡೆಮಿ ಭಾನುವಾರ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಶೌರ್ಯಪರ್ವ ಮಹೋತ್ಸವದಲ್ಲಿ ಕಂಡುಬಂದ ನೋಟಗಳು ಇವು. ಹಿನ್ನೆಲೆಯಲ್ಲಿ ಸಮರ ವಾದ್ಯವು ತಾರಕ ಸ್ವರದಲ್ಲಿ ಮೊಳಗುತ್ತಿದ್ದಾಗ ದೊಣ್ಣೆಗಳನ್ನು ಹಿಡಿದು ಓಡಿಬಂದ ಪಾಂಡಿಚೇರಿ ಯುವಕರು ಮೈನವಿರೇಳಿಸುವ ವರಸೆಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ನೋಡ, ನೋಡುತ್ತಿದ್ದಂತೆಯೇ 90 ಡಿಗ್ರಿ ಕೋನದಲ್ಲಿ ಕೈಗಳ ಮೇಲೆ ನಿಂತು ನಡೆಯಲು ಆರಂಭಿಸಿದ ಆ ಸಮುದ್ರ ತೀರದ ಊರಿನ ಯುವಕರು, ನಂತರ ಹಾಗೇ ಓಡುತ್ತಾ ಪ್ರೇಕ್ಷರನ್ನು ತುದಿಗಾಲ ಮೇಲೆ ನಿಲ್ಲಿಸಿದರು.

ಯಲಹಂಕದ ಪುಟಾಣಿ ಪೈಲ್ವಾನರು ನಾಡಕುಸ್ತಿ ವೈಭವವನ್ನು ಕಟ್ಟಿಕೊಟ್ಟರು. ಮೈಸೂರಿನ ವಜ್ರಮುಷ್ಟಿ ಕಾಳಗದ ಸೊಬಗು ಮಲ್ಲೇಶ್ವರದಲ್ಲೂ ನೋಡಲು ಸಿಕ್ಕಿತು. ಇಬ್ಬರು ಪೈಲ್ವಾನರು ಜೊತೆಯಾಗಿ ಚಕ್ರ ನಿರ್ಮಿಸಿ ಉರುಳುತ್ತಾ ಸಾಗಿದ್ದು ಮೋಜು ತರಿಸಿತು. ಎಂಜಿನಿಯರಿಂಗ್ ವಿದ್ಯಾರ್ಥಿಯಾದ ಪೈಲ್ವಾನ್ ಆನಂದ್ ಅವರ ಪುತ್ರ ರಾಜು, ವಾಲಿಬಾಲ್ ಚೆಂಡಿನಂತೆ ಗಾಳಿಯಲ್ಲಿ ತೇಲಿಬಿಟ್ಟ ಕಲ್ಲಿನ ಗುಂಡನ್ನು ಅಷ್ಟೇ ಸೊಗಸಾಗಿ ಹಿಡಿದು ಅದರೊಂದಿಗೆ ಆಟ ಆಡಿದರು.

15 ಕೆಜಿ ಭಾರದ ಎರಡು ಕಲ್ಲಿನ ಗುಂಡುಗಳನ್ನು ಒಂದು ಕೈಯಿಂದ ಮತ್ತೊಂದು ಕೈಗೆ ಹತ್ತಾರು ಸಲ ಪಟಪಟನೆ ಕಳುಹಿಸಿ ಬೆರಗುಮೂಡಿಸಿದರು. ರಾಜು ಅವರಿಂದ ಸ್ಫೂರ್ತಿ ಪಡೆದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕಲ್ಲಿನ ಗುಂಡೊಂದನ್ನು ತೂರಿ ಲಬಕ್ಕನೆ ಹಿಡಿದುಕೊಂಡರು. ಅವರ ಬೆಂಬಲಿಗರು ವಿಜಯೋತ್ಸಾಹದಲ್ಲಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯಿಂದ ಬಂದಿದ್ದ ಪೈಲ್ವಾನ್ ಮಿರ್ಜಾ ಹುಸೇನ್, ನೂರು ಕೆಜಿ ಭಾರದ ಕಂಬವನ್ನು ಹಲ್ಲಿನಿಂದ ಎತ್ತಿ ಮಾರುದ್ದ ಆಚೆ ಎಸೆದರು. ಅದಕ್ಕಿಂತ ಹೆಚ್ಚಾಗಿ ಎರಡೂ ಕೈಯಲ್ಲಿ ಒಂದೊಂದು ಎತ್ತಿನ ಬಂಡಿ ಚಕ್ರ ತೂಗು ಹಾಕಿಕೊಂಡು ರಭಸದಿಂದ ತಿರುಗಿಸಿದರು. ಕಾಡು ಕಲ್ಲನ್ನು ಬರಿಗೈಯಿಂದಲೇ ಕುಟ್ಟಿ ತುಂಡರಿಸಿ ಹಾಕಿದರು.

ಮಣಿಪುರ ಮತ್ತು ಕೇರಳದ ಸಮರ ಕಲೆ, ನಾಗಾಲ್ಯಾಂಡ್‌ನ ಬುಡಕಟ್ಟು ಸಾಹಸ ಗಮನ ಸೆಳೆದವು. ಮೌತಾಯ್ ಅಕಾಡೆಮಿಯಿಂದ ಬಂದಿದ್ದ ಪುಟಾಣಿಗಳು ಮಲ್ಲಯುದ್ಧ ಮಾಡಿದರು. ಕನಕಪುರ, ಮೈಸೂರು, ಯಲಹಂಕ ಸೇರಿದಂತೆ ರಾಜ್ಯದ ಹಲವು ತಂಡಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಸಾಹಸದ ನಡುವೆಯೇ ತೂರಿಬಂದ ಮದುವೆ ಗಂಡು-ಹೆಣ್ಣಿನ ಸಂಭ್ರಮ ಬಿಂಬಿಸುವ ಸಂಬಲ್‌ಪುರಿ ನೃತ್ಯ, ಪ್ರದರ್ಶನಕ್ಕೆ ಕಳೆ ಕಟ್ಟಿತು. ಮಣಿಪುರದ ಪ್ರೇಮಕಾವ್ಯ ಕೇಳುಗರಲ್ಲಿ ಕಚಕುಳಿ ಇಟ್ಟಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸದಾನಂದಗೌಡ, `ನಮ್ಮ ಯುವಕರು ಪಾಶ್ಚಾತ್ಯ ನೃತ್ಯದ ಕಡೆಗೆ ಒಲವು ತೋರುವ ಬದಲು ಶೌರ್ಯ-ಸಾಹಸ ಮೆರೆಯುವಂತಹ ಇಂತಹ ಕಲೆ ರೂಢಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

`ಪ್ರತಿಭಾನ್ವಿತರಾದರೂ ಗ್ರಾಮೀಣ ಭಾಗದ ಯುವ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಇಂತಹ ಕಾರ್ಯಕ್ರಮ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ನಡೆದರೆ ಅವರ ಕಲೆ ಬೆಳಕಿಗೆ ಬರಲು ವೇದಿಕೆ ಸಿಕ್ಕಂತಾಗುತ್ತದೆ' ಎಂದು ಹೇಳಿದರು.ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಜಗನ್ನಾಥ್ ಮತ್ತು ಹಾಸನ ರಘು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry