ಬಂಡೀಪುರ ಬಳಿ ಮತ್ತೆರಡು ರೆಸಾರ್ಟ್!

7

ಬಂಡೀಪುರ ಬಳಿ ಮತ್ತೆರಡು ರೆಸಾರ್ಟ್!

Published:
Updated:
ಬಂಡೀಪುರ ಬಳಿ ಮತ್ತೆರಡು ರೆಸಾರ್ಟ್!

ಬೆಂಗಳೂರು: ವನ್ಯಜೀವಿಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ವಸತಿ ಗೃಹಗಳನ್ನು ಹೊರಭಾಗಕ್ಕೆ ಸ್ಥಳಾಂತರಿಸುವ ಚಿಂತನೆ ಒಂದೆಡೆ ನಡೆದಿದ್ದರೆ, ಮತ್ತೊಂದೆಡೆ ಎರಡು ರೆಸಾರ್ಟ್‌ಗಳು ಉದ್ಯಾನದ ಸುತ್ತಮುತ್ತ ತಲೆ ಎತ್ತಲು ಅಣಿಯಾಗಿವೆ.`ಹುಲಿ ಯೋಜನೆ~ ಜಾರಿಯಲ್ಲಿರುವ ಬಂಡೀಪುರದಲ್ಲಿ ಈಗಾಗಲೇ 9 ರೆಸಾರ್ಟ್‌ಗಳು ತಲೆ ಎತ್ತಿದ್ದು, ಈಗ ಎರಡು ರೆಸಾರ್ಟ್‌ಗಳು ಆರಂಭವಾಗುವ ಮೂಲಕ ವನ್ಯಜೀವಿಗಳ ಸಹಜ ಸಂಚಾರಕ್ಕೆ ಇನ್ನಷ್ಟು ತೊಂದರೆ ಉಂಟಾಗಲಿದೆ ಎಂದು ವನ್ಯಜೀವಿ ತಜ್ಞರು ಆತಂಕದಲ್ಲಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿಯ ಬಂಡೀಪುರ ಹುಲಿ ಯೋಜನೆ ಪ್ರದೇಶದ ಸುತ್ತಮುತ್ತ ಪ್ರವಾಸೋದ್ಯಮದ ಹೆಸರಿನಲ್ಲಿ ವನ್ಯಜೀವಿಗಳು ಅದರಲ್ಲೂ, ಆನೆಗಳು ಸಂಚರಿಸುವ ಮಾರ್ಗದಲ್ಲೇ ಸುಮಾರು 51 ಎಕರೆ ಕಂದಾಯ ಭೂಮಿಯನ್ನು ಸರ್ಕಾರ ಬೆಂಗಳೂರಿನ ಇಬ್ಬರು ಉದ್ಯಮಿಗಳಿಗೆ `ಧಾರೆ~ ಎರೆದಿದೆ!ಎ.ಜಗದೀಶ್‌ರಾಮ್ ಎಂಬುವವರು `ಟ್ರಾಪಿಕಲ್ ವೈಲ್ಡರ್‌ನೆಸ್ ಮತ್ತು ವೆಲ್‌ನೆಸ್ ವಿಲೇಜ್ ಪ್ರೈ. ಲಿಮಿಟೆಡ್~ ಹೆಸರಿನಲ್ಲಿ ರೆಸಾರ್ಟ್ ಸ್ಥಾಪನೆಗಾಗಿ ಬಾಚಳ್ಳಿ ಗ್ರಾಮದಲ್ಲಿ 28.25 ಎಕರೆ ಜಮೀನು ಖರೀದಿಸಿದ್ದಾರೆ. ಈ ಜಮೀನು ಖರೀದಿಗೆ ಜಾಗತಿಕ ಹೂಡಿಕೆದಾರರ ಸಮಾವೇಶದ ಆದೇಶ ಸಂಖ್ಯೆ ಎಲ್‌ಆರ್‌ಎಫ್/ಪಿಆರ್/08/2010-11, ಡಿಸೆಂಬರ್ 10, 2010ರನ್ವಯ ಅನುಮತಿ ನೀಡಲಾಗಿದೆ.ಬೆಂಗಳೂರಿನ ಮತ್ತೊಬ್ಬ ಪ್ರಮುಖ ಉದ್ಯಮಿಯೊಬ್ಬರು ಹಂಗಳ ಹೋಬಳಿ, ಕೆಬ್ಬೇಪುರ ಗ್ರಾಮದಲ್ಲಿ `ಪ್ರಾಕೃತಿಕ ಮತ್ತು ಆಯುರ್ವೇದ ರೆಸಾರ್ಟ್~ನ್ನು ಸ್ಥಾಪಿಸುವುದಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ ಎಎಲ್‌ಎನ್‌ಸಿಆರ್ 116, 24-07-2010ರ ಮೂಲಕ 23.23 ಎಕರೆ ಜಮೀನನ್ನು ಖರೀದಿಸಿದ್ದಾರೆ.`ಈ ಜಮೀನುಗಳು ಬಂಡೀಪುರದಿಂದ ಲೊಕ್ಕೆರೆ, ಹೆಗ್ಗವಾಡಿ ಅರಣ್ಯಗಳ ಮೂಲಕ ತಮಿಳುನಾಡಿನ ಮಧುಮಲೈ ಮತ್ತು ಸತ್ಯಮಂಗಲಂ ವನ್ಯಧಾಮಗಳಿಗೆ ಸಂಪರ್ಕಿಸುವ ಕಾಡನ್ನು ಹೊಂದಿದ್ದು, ವನ್ಯಜೀವಿಗಳಿಗೆ ಅಗತ್ಯವಾದ ವಲಸೆ ಮಾರ್ಗದಲ್ಲಿವೆ. ಆದ್ದರಿಂದ ರೆಸಾರ್ಟ್‌ಗಳಿಗೆ ಭೂಮಿ ನೀಡಿದ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು~ ಎಂದು ಹುಲಿ ಯೋಜನೆಯ ನಿರ್ದೇಶಕ ಬಿ.ಜೆ.ಹೊಸಮಠ ಅವರು ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಕಳೆದ ಮಾರ್ಚ್ 15ರಂದೇ ಪತ್ರ ಬರೆದಿದ್ದರು.`ಬಂಡೀಪುರದ ರಾಷ್ಟ್ರೀಯ ಉದ್ಯಾನದ ಬಳಿಯ ಕಂದಾಯ ಭೂಮಿಯಲ್ಲಿ ಹುಲಿ, ಆನೆ, ಕೆನ್ನಾಯಿ, ಚಿರತೆ, ಕಾಡೆಮ್ಮೆ ಇನ್ನಿತರ ವನ್ಯಪ್ರಾಣಿಗಳು ಕಂಡುಬರುತ್ತವೆ. ಒಂದು ವೇಳೆ ಈ ರೆಸಾರ್ಟ್‌ಗಳು ಸ್ಥಾಪನೆಗೊಂಡರೆ, ಈ ಸ್ಥಳದಲ್ಲಿ ಆನೆಗಳ ವಲಸೆ ಮಾರ್ಗವನ್ನು ಶಾಶ್ವತವಾಗಿ ತುಂಡರಿಸುತ್ತವೆ. ಆನೆ-ಮಾನವ ಸಂಘರ್ಷ ಹಾಗೂ ಮಾನವ ಜೀವಹಾನಿಗಳನ್ನು ತಡೆಗಟ್ಟಬೇಕೆಂಬ ವಿಷಯದಲ್ಲಿ ರಾಜ್ಯ ಸರಕಾರಕ್ಕೆ ನಿಜವಾದ ಕಾಳಜಿಯಿದ್ದಲ್ಲಿ ಇಂಥ ಸ್ಥಳಗಳಲ್ಲಿ ರೆಸಾರ್ಟ್‌ಗಳಿಗೆ ಅನುಮತಿ ನೀಡದಿರುವಂತೆ ಕಂದಾಯ ಇಲಾಖೆಗೆ ಅಂಕುಶ ಹಾಕಬೇಕು~ ಎನ್ನುತ್ತಾರೆ ವೈಲ್ಡ್‌ಲೈಫ್ ಮ್ಯಾಟರ್ಸ್‌ ಸಂಸ್ಥೆಯ ಕಾರ್ಯಕರ್ತ ಗುರುಪ್ರಸಾದ್ ತಿಮ್ಮಾಪುರ.ಕಂದಾಯ ಇಲಾಖೆಗೆ ಸೇರಿದ ಬಂಡೀಪುರ ಸುತ್ತಮುತ್ತಲಿನ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಇಡೀ ಪ್ರದೇಶದಲ್ಲಿ ಮಾನವ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಹಲವಾರು ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

`ವಾಪಸ್ ನೀಡಲು ನೋಟಿಸ್~

`ಜೀವವೈವಿಧ್ಯಕ್ಕೆ ಧಕ್ಕೆ ತರುತ್ತದೆ~ ಎಂಬ ಉದ್ದೇಶದಿಂದ, `ಟ್ರಾಪಿಕಲ್ ವೈಲ್ಡರ್‌ನೆಸ್ ಮತ್ತು ವೆಲ್‌ನೆಸ್ ವಿಲೇಜ್ ಪ್ರೈ. ಲಿಮಿಟೆಡ್~ ರೆಸಾರ್ಟ್‌ಗೆ ನೀಡಲಾದ ಭೂಮಿಯನ್ನು ವಾಪಸ್ ಪಡೆಯಲು ಕಳೆದ ಏಪ್ರಿಲ್ 26ರಂದು ನೋಟಿಸ್ ನೀಡಿದ್ದೇವೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. ಈಗ ಮತ್ತೆ ರಿಜಿಸ್ಟರ್ಡ್ ಅಂಚೆ ಮೂಲಕ ಮತ್ತೊಂದು ನೋಟಿಸ್ ನೀಡಲಿದ್ದೇವೆ. ಅದಕ್ಕೂ ಉತ್ತರ ಬಾರದಿದ್ದಲ್ಲಿ 15 ದಿನಗಳೊಳಗಾಗಿ ಜಮೀನನ್ನು ಸರ್ಕಾರ ಮರು ಸ್ವಾಧೀನಪಡಿಸಿಕೊಳ್ಳಲಿದೆ.

-ಡಾ.ಕೆ.ಅಮರನಾರಾಯಣ,   ಜಿಲ್ಲಾಧಿಕಾರಿ, ಚಾಮರಾಜನಗರ ಜಿಲ್ಲೆ

 

ಈಗಾಗಲೇ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ರೆಸಾರ್ಟ್‌ಗಳು

-  ಟೈಗರ್ ರ‌್ಯಾಂಚ್

- ಟಸ್ಕರ್ ಟ್ರಯಲ್

- ಕಂಟ್ರಿ ಕ್ಲಬ್

- ಸಿಕಾಡ

-  ಡೋಲ್ಸ್ ಡೆನ್

-  ಎಎಜೆಆರ್ ಇನ್

-  ಎನ್.ಸಿ.ರೆಸಾರ್ಟ್

-  ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್

-   ಬಂಡಿಪುರ ಪ್ಲಾಜಾ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry