ಬುಧವಾರ, ನವೆಂಬರ್ 20, 2019
26 °C
ವಿನಯ ಕುಮಾರ್ ಸೊರಕೆ ವಿರುದ್ಧ ವಾಗ್ದಾಳಿ

ಬಂಡೆದ್ದ ವಸಂತ ಸಾಲ್ಯಾನ್-ಜೆಡಿಎಸ್‌ನಿಂದ ಸ್ಪರ್ಧೆ

Published:
Updated:

ಉಡುಪಿ: `ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ ಒಬ್ಬ ಮಹಾನ್ ಸುಳ್ಳುಗಾರ. ಅವರು ಸತ್ಯವನ್ನು ಮಾತನಾಡುವುದೇ ಇಲ್ಲ. 2004ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಅವರೇ ಮುಖ್ಯ ಕಾರಣ' ಎಂದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡು ಕಾಪು ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಸಚಿವ ವಸಂತ್ ವಿ ಸಾಲ್ಯಾನ್ ಹೇಳಿದರು.ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿಗೆ ಬುಧವಾರ ಬಂದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.`ಸೊರಕೆ ನನಗೆ ಅನ್ಯಾಯ ಮಾಡಿದ್ದಾರೆ. ಈ ಬಾರಿ ಸೊರಕೆ ಅವರನ್ನು ಸೋಲಿಸಿ ಗೆಲುವು ಸಾಧಿಸುವುದೇ ನನ್ನ ಗುರಿ. ಕಾರ್ಯಕರ್ತರ ಬೆಂಬಲ ನನಗೆ ಇದೆ. ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ' ಎಂದು ಅವರು ಹೇಳಿದರು.`ಸೊರಕೆಯವರು ಕಾಪು ಕ್ಷೇತ್ರದವರಲ್ಲ. ಈ ಕ್ಷೇತ್ರದ ಗಂಧ ಗಾಳಿಯೂ ಗೊತ್ತಿಲ್ಲದವರಿಗೆ ಪಕ್ಷ ಟಿಕೆಟ್ ನೀಡಿದೆ. 1979ರಿಂದಲೂ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಪಕ್ಷಕ್ಕಾಗಿ ಸತತ ದುಡಿದಿದ್ದೇನೆ. ಆದರೆ ಇದ್ಯಾವುದನ್ನೂ ಹೈಕಮಾಂಡ್ ಗಣನೆಗೆ ತೆಗೆದುಕೊಂಡಿಲ್ಲ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.`ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೆ. ಆದರೆ ಮಧ್ಯರಾತ್ರಿ 12 ಗಂಟೆಗೆ ದೂರವಾಣಿ ಕರೆ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಸ್ವತಂತ್ರವಾಗಿ ಸ್ಪರ್ಧಿಸುವುದಕ್ಕಿಂತ ಪಕ್ಷದ ನೆಲೆಯಲ್ಲಿ ಸ್ಪರ್ಧಿಸಿ ನಿಮಗೆ ಅನುಕೂಲವಾಗುತ್ತದೆ ಎಂದರು. ಆದ್ದರಿಂದ ಜೆಡಿಎಸ್‌ನಿಂದ ಸ್ಪರ್ಧಿಸಲು ತೀರ್ಮಾನಿಸಿದೆ' ಎಂದರು.`ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ನನಗೆ ಕಾರ್ಯಕರ್ತರಿದ್ದಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ಇದೆ' ಎಂದು ಅವರು ಹೇಳಿದರು.ವಸಂತ ಸಾಲ್ಯಾನ್ ಮತ್ತು ಸೊರಕೆ ಇಬ್ಬರೂ ಕಾಪು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.ಸಾಲ್ಯಾನ್ ಠೇವಣಿ ಕಳೆದುಕೊಳ್ಳಲಿದ್ದಾರೆ- ಮೊಯಿಲಿ: ಕಾಂಗ್ರೆಸ್ ಪಕ್ಷ ವಸಂತ್ ಸಾಲ್ಯಾನ್ ಅವರಿಗೆ ಏಳು ಬಾರಿ ಟಿಕೆಟ್ ನೀಡಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಎರಡು ಬಾರಿ ಮಂತ್ರಿಯಾಗಲು ಕಾಂಗ್ರೆಸ್ ಪಕ್ಷ ಕಾರಣ. ಈಗ ಅವರು ಕಾಂಗ್ರೆಸ್ ಬಿಟ್ಟು ಹೋದರೆ ಅವರು ಪಕ್ಷಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಪಕ್ಷವು ಸಾಲ್ಯಾನ್ ಅವರಿಗೆ ಅನ್ಯಾಯ ಮಾಡಿಲ್ಲ ಎಂದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹೇಳಿದರು.ವಿನಯ್ ಕುಮಾರ್ ಸೊರಕೆ ಅವರಿಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ. ಅವರು ಈ ಹಿಂದೆ ಇಲ್ಲಿ ಸಂಸದರಾಗಿ ಕೆಲಸ ಮಾಡಿದ್ದಾರೆ. ಸೊರಕೆ ಉಡುಪಿಯ ಮತದಾರ. ಆದ್ದರಿಂದ ಅವರು ಹೊರಗಿನವರು ಎನ್ನುವುದು ಸರಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಾಲ್ಯಾನ್ ಅವರು ಠೇವಣಿ ಕಳೆದುಕೊಳ್ಳುತ್ತಾರೆ ಎಂದರು.ಜಿಲ್ಲೆಯೊಂದಿಗೆ ಬಾಂಧವ್ಯ ಇದೆ: ಸೊರಕೆ

`ನಾನು ಹೊರಗಿನವನಲ್ಲ. ನನಗೆ ಉಡುಪಿಯಲ್ಲಿ ಸ್ವಂತ ಮನೆ ಇದ್ದು ಇಲ್ಲಿಯ ಮತದಾರನಾಗಿದ್ದೇನೆ. ಈ ಕ್ಷೇತ್ರದಲ್ಲಿ ನಾನು ಏಕಾಂಗಿಯಾಗಿ ನಿಲ್ಲುತ್ತಿಲ್ಲ. ಕಾಂಗ್ರೆಸ್ ಪಕ್ಷದ ಬಲ, ತತ್ವ, ಆದರ್ಶ ಎಲ್ಲವೂ ನನ್ನ ಜೊತೆಗಿದೆ.ಉಡುಪಿ ಜನರು ಈ ಹಿಂದೆ ನನ್ನನ್ನು ಗೆಲ್ಲಿಸಿ ಸಂಸದನಾಗಿ ಕೆಲಸ ಮಾಡಲು ಅವಕಾಶ ನೀಡಿದ್ದರು. ಈ ಬಾರಿಯೂ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಸಾಲ್ಯಾನ್ ಅವರ ಮನೆಗೆ ಹೋಗಿ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ' ಎಂದು ವಿನಯ್ ಕುಮಾರ್ ಸೊರಕೆ ಹೇಳಿದರು.

ಪ್ರತಿಕ್ರಿಯಿಸಿ (+)