ಬಂಡೇ ಮಂಜ: ಹಂತಕರಿಂದ 3ನೇ ಬಾರಿ ಪಾರು

7

ಬಂಡೇ ಮಂಜ: ಹಂತಕರಿಂದ 3ನೇ ಬಾರಿ ಪಾರು

Published:
Updated:
ಬಂಡೇ ಮಂಜ: ಹಂತಕರಿಂದ 3ನೇ ಬಾರಿ ಪಾರು

ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ರಸ್ತೆಯ ಬಯಲು ಉದ್ಭವ ಗಣಪತಿ ದೇವಸ್ಥಾನದ ಬಳಿ ವಾಸವಿರುವ ಬಂಡೇ ಮಂಜ ಹಂತಕರಿಂದ ಮೂರನೇ ಬಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾನೆ.

ಗುರುವಾರ ರಾತ್ರಿ 9ಗಂಟೆಯಲ್ಲಿ ಸೊಂಡೆಕೊಪ್ಪ ರಸ್ತೆಯ ಕೆಪಿಟಿಸಿಎಲ್ ಬಳಿ ಹುಲ್ಲೇಗೌಡನಹಳ್ಳಿಗೆ ಹೋಗುವ ರಸ್ತೆಯಲ್ಲಿ ಟಾಟಾ ಸುಮೊ ಮತ್ತು ಮಾರುತಿ ವ್ಯಾನ್‌ನಲ್ಲಿ 10ರಿಂದ 12ಮಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ, ದೊಡ್ಡಬಳ್ಳಾಪುರ ಪೊಲೀಸರಿಂದ ಮಾಹಿತಿ ತಿಳಿದ ಸರ್ಕಲ್ ಇನ್ಸ್‌ಪೆಕ್ಟರ್ ಯತಿರಾಜು ಡಕಾಯತಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ಅನುಮಾನ ಬಂದು ಸಿಬ್ಬಂದಿಯೊಂದಿಗೆ ಬಂದು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ದುಷ್ಕರ್ಮಿಗಳಿಂದ ಒಂದು ನಾಡ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳು, ಎಂಟು ಲಾಂಗ್‌ಗಳು, ಖಾರದ ಪುಡಿ, ಮೂರು ಮೊಬೈಲ್ ಪೋನ್, ಟಾಟಾಸುಮೊ ಮತ್ತು ಮಾರುತಿ ವ್ಯಾನ್‌ನನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು 20ರಿಂದ 23ವರ್ಷದೊಳಗಿನವರಾಗಿದ್ದು, ಸಿಕಂದರ್, ಮುನಿರಾಜು, ಮಜೀದ್, ಮೈಸೂರು ರಸ್ತೆಯ ಆಂಜಿನಪ್ಪ ಗಾರ್ಡನ್‌ನ ಹಮೀದ್, ಜಾನ್ ಪೀಟರ್, ಸಿಂಗಾಪುರ ಲೇಔಟ್‌ನ ಪ್ರವೀಣ್, ಹಳೇಗುಡ್ಡದ ಹಳ್ಳಿಯ ದಿಲೀಪ್, ಪ್ರಕಾಶ್ ನಗರದ ನವೀನ್‌ಕುಮಾರ್ ಮತ್ತು ಸುರೇಶ್ ಎಂದು ಗುರುತಿಸಲಾಗಿದೆ.

ಘಟನೆ ಬಗ್ಗೆ ವಿವರ ನೀಡಿದ ಎಸ್ಪಿ ಡಾ.ಬಿ.ಎ.ಮಹೇಶ್, ನೆಲಮಂಗಲದ ಬಂಡೇಮಂಜ ಎಂಬಾತನನ್ನು ಕೊಲೆ ಮಾಡಲು ಬೆತ್ತನಗೆರೆ ಮಂಜ ತನ್ನ ಸಹಚರರಾದ ಸಿಕಂದರ್ ಮತ್ತು ಮುನಿರಾಜು ಎಂಬುವವರಿಗೆ ವಾಹನ, ಪಿಸ್ತೂಲ್, ಮಾರಕಾಸ್ತ್ರ ಮತ್ತು ರೂ.20ಸಾವಿರ ಸುಪಾರಿ ನೀಡಿದ್ದ ಎಂದು ವಿಚಾರಣೆ ಬಳಿಕ ತಿಳಿದುಬಂದಿದೆ ಎಂದರು.

ಈ ಹಿಂದೆ ನೆಲಮಂಗಲದಲ್ಲಿ ನಡೆದ ಕೊಲೆಗಳು ಮತ್ತು ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಂಡೇ ಮಂಜನ ಕೊಲೆ ಪ್ರಯತ್ನ ನಡೆದಿದೆ. ಬಂಡೇ ಮಂಜನ ಕೊಲೆ ಪ್ರಯತ್ನ ಇದು ಮೂರನೇ ಬಾರಿ ನಡೆಯುತ್ತಿದೆ ಎಂದರು.

ದೊಡ್ಡಬಳ್ಳಾಪುರ ಠಾಣೆಯ ಪೊಲೀಸರು ಡಕಾಯತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೆಲಮಂಗಲ ಬಳಿಯ ಹುಲ್ಲೇಗೌಡನಹಳ್ಳಿಗೆ ಬಂದಿದ್ದರು. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದುಷ್ಕರ್ಮಿಗಳನ್ನು ಕಂಡು ನೆಲಮಂಗಲ ಪೊಲೀಸರಿಗೆ ತಿಳಿಸಿ ದುಷ್ಕರ್ಮಿಗಳನ್ನು ಬಂಧಿಸಲು  ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry