ಬಂತು ಬಲಮುರಿ ಜಾತ್ರೆ

7

ಬಂತು ಬಲಮುರಿ ಜಾತ್ರೆ

Published:
Updated:

ನಾಪೋಕ್ಲು: ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ಜರುಗುವ ತುಲಾ ಸಂಕ್ರಮಣ ಜಾತ್ರೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದರೆ, ಇತ್ತ ಬಲಮುರಿ ಗ್ರಾಮದಲ್ಲೂ ಜಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದೆ.ಭಾಗಮಂಡಲದ ಭಗಂಡೇಶ್ವರ- ತಲಕಾವೇರಿ ದೇವಾಲಯಗಳಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಕೊಡಗು ಜಿಲ್ಲೆಯ ನಾನಾ ಭಾಗಗಳಿಂದ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೇನು ಕಡಿಮೆ ಇಲ್ಲ. ಮಡಿಕೇರಿಯಿಂದ 18 ಕಿ.ಮೀ. ದೂರದಲ್ಲಿರುವ ನಾಪೋಕ್ಲು ಸಮೀಪದ ಬಲಮುರಿಯು ಕಾವೇರಿ ತೀರದಲ್ಲಿರುವ ಪವಿತ್ರ ಯಾತ್ರಾಸ್ಥಳ. ತುಲಾ ಸಂಕ್ರಮಣದ ಸಂದರ್ಭದಲ್ಲಿ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥ ಸ್ನಾನ ಮಾಡಿ ಪುನೀತರಾಗುತ್ತಾರೆ.ತೀರ್ಥೋದ್ಭವದ ಮರುದಿನ ಅ.18 ರಂದು ಬಲಮುರಿ ಜಾತ್ರೆ ನಡೆಯುತ್ತದೆ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ ಬ್ರಹ್ಮಗಿರಿಯ ತಪ್ಪಲಿನಲ್ಲಿ ಉಗಮಿಸುವ ಕಾವೇರಿ ತಾನು ಸಾಗುವ ಹಾದಿಯಲ್ಲಿ ಹಲವು ಪುಣ್ಯಕ್ಷೇತ್ರಗಳನ್ನು ನಿರ್ಮಿಸಿದ್ದಾಳೆ. ಬಲಮುರಿ ಕಾವೇರಿ ತೀರದ ಪುಣ್ಯಕ್ಷೇತ್ರಗಳಲ್ಲೊಂದು. ತಲಕಾವೇರಿಯಲ್ಲಿ ಉಗಮಿಸಿದ ಕಾವೇರಿಯು ವಿವಿಧ ಸ್ಥಳಗಳಲ್ಲಿ ಹರಿದು ಇಲ್ಲಿಗೆ ಬರುವಾಗ ಬಲಭಾಗಕ್ಕೆ ಅರ್ಧ ಚಂದ್ರಾಕಾರವಾಗಿ ದಿಕ್ಕು ಬದಲಿಸಿದಳು. ಅಂತೆಯೇ ಪ್ರಾಚೀನ ಕಾಲದಲ್ಲಿ ವಲಂಪುರಿ ಎಂದು ಕರೆಯುವ ಈ ತಾಣ ಬಳಿಕ ಬಲಮುರಿ ಎಂದು ಪ್ರಖ್ಯಾತಿ ಗಳಿಸಿತು.ಪೌರಾಣಿಕ ಕತೆಯೊಂದರ ಪ್ರಕಾರ ವಲಂಪುರಿ ತಾಣಕ್ಕೆ ಲವಣೇಶ್ವರ ಆರಾಧ್ಯ ದೈವ. ನದಿರೂಪ ತಳೆದು ಹರಿದು ಬರುವುದಾಗಿ ಕಾವೇರಿ ಮಾತೆಯು ತನ್ನ ಪರಮ ಭಕ್ತ ದೇವಕಾಂತ ಮಹಾರಾಜನಿಗೆ ಮಾತುಕೊಟ್ಟಿದ್ದಳು.ಕಾವೇರಿ ನದಿಯಾಗಿ ಹರಿದು ವಲಂಪುರಿಗೆ ಬರುವುದನ್ನು ವೀಕ್ಷಿಸಲು ಭಕ್ತರು ಕಾದಿದ್ದರು. ಕಾವೇರಿಯ ರಭಸಕ್ಕೆ ಭಕ್ತರ ಉಡುಗೆಗಳು ಗಾಳಿಯಲ್ಲಿ ತೇಲುತ್ತಿದ್ದವು. ಆಗ ಮಹಿಳೆಯರು ಸೀರೆಯ ಸೆರಗನ್ನು ಬಲಭಾಗಕ್ಕೆ ತಂದು ಗಂಟು ಹಾಕಿದರು. ಹೀಗಾಗಿ ಇಲ್ಲಿಗೆ ಬಲಮುರಿ ಎಂಬ ಹೆಸರು ಬಂತು ಎಂಬುದು ಪ್ರತೀತಿ.ಜಲರೂಪ ತಳೆದು ಹರಿದ ಕಾವೇರಿ ಇಲ್ಲಿನ ಲವಣೇಶ್ವರ ಲಿಂಗವನ್ನು ಬಳಸಿ ಮುಂದೆ ಹರಿದಳು. ಕಾವೇರಿಯನ್ನು ಹಿಂಬಾಲಿಸಿ ಬಂದ ಅಗಸ್ತ್ಯ ಮಹರ್ಷಿಗಳು ನದಿತೀರದಲ್ಲಿ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿ ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಿದರು.ಅಗಸ್ತ್ಯೇಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ನದಿಯ ಇನ್ನೊಂದು ದಡದಲ್ಲಿ ಶ್ರಿಕಾವೇರಿ ಕಣ್ವಮುನೀಶ್ವರ ದೇವಾಲಯವಿದೆ. ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ ಎಂದು ದೇವಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಚೀಯಂಡ ಗಣಪತಿ ಹೇಳಿದರು. ಬಲಮುರಿ ಜಾತ್ರೆಯಂದು ಭಕ್ತರು ತೀರ್ಥ ಸ್ನಾನ, ಪಿತೃಗಳಿಗೆ ಪಿಂಡ ಪ್ರಧಾನ ಮಾಡುತ್ತಾರೆ. ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗುತ್ತವೆ. ಅನ್ನಸಂತರ್ಪಣೆ ನಡೆಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry