ಭಾನುವಾರ, ಮಾರ್ಚ್ 7, 2021
31 °C

ಬಂದಳು ಶ್ರೀಮತಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂದಳು ಶ್ರೀಮತಿ...

ಜೀ ಕನ್ನಡ ವಾಹಿನಿಯಲ್ಲಿ ‘ಸಿಲ್ಲಿ ಲಲ್ಲಿ’, ‘ಪಾರ್ವತಿ ಪರಮೇಶ್ವರ’ ಧಾರಾವಾಹಿಗಳು ಪೂರ್ಣಗೊಂಡು ಒಂದೂವರೆ ವರ್ಷಗಳೇ ಕಳೆದಿದೆ. ಆನಂತರ ಯಾವುದೇ ಹಾಸ್ಯ ಧಾರಾವಾಹಿಗಳು ಪ್ರಸಾರಗೊಳ್ಳಲಿಲ್ಲ. ಈಗ ಮತ್ತೊಂದು ಹಾಸ್ಯಮಯ ಕಥನವನ್ನು ಸಿದ್ಧಗೊಳಿಸಿದೆ ವಾಹಿನಿ. ಅದು, ‘ಶ್ರೀಮಾನ್ ಶ್ರೀಮತಿ’. ಈ ಧಾರಾವಾಹಿ ಇದೇ ತಿಂಗಳ 23ರಿಂದ, ಪ್ರತಿ ದಿನ ರಾತ್ರಿ 7.30ರಿಂದ 8 ಗಂಟೆಯವರೆಗೆ ಪ್ರಸಾರಗೊಳ್ಳಲಿದೆ.ಪೃಥ್ವಿರಾಜ್ ಕುಲಕರ್ಣಿ ನಿರ್ದೇಶನದ ‘ಶ್ರೀಮಾನ್ ಶ್ರೀಮತಿ’ ಎದುರು ಬದುರು ಮನೆಯಲ್ಲಿ ವಾಸವಾಗಿರುವ ಎರಡು ಕುಟುಂಬಗಳ ನಡುವೆ ನಡೆಯುವ ಹಾಸ್ಯ ಪ್ರಹಸನಗಳನ್ನು ಹೇಳುತ್ತದೆ. ಜೋ.ನಿ. ಹರ್ಷ ನಿರ್ಮಾಣ ಹಾಗೂ ಸಂಕಲನ, ಮಣಿಕಾಂತ ಕದ್ರಿ ಸಂಗೀತ ಈ ಕೌಟುಂಬಿಕ ಹಾಸ್ಯ ಕಥನಕ್ಕಿದೆ. ಎ.ಪಿ. ಅರ್ಜುನ್ ಶೀರ್ಷಿಕೆ ಗೀತೆಗೆ ಸಾಹಿತ್ಯ ಒದಗಿಸಿದ್ದಾರೆ. ಮೂವರು ಹೆಸರಾಂತ ಸಿನಿಮಾ ತಂತ್ರಜ್ಞರು ಒಟ್ಟಿಗೆ ಕೆಲಸ ಮಾಡಿರುವುದು ಧಾರಾವಾಹಿಯ ವಿಶೇಷ.ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಾಹಿನಿಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹುಣಸೂರು, ‘ಹಳ್ಳಿಯಿಂದ ನಗರಕ್ಕೆ ಬಟ್ಟೆ ಮಾರಲು ಬಂದಂಥ ಮುಗ್ಧ ಜೋಡಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಆಧುನಿಕ ದಂಪತಿಗಳ ನಡುವೆ ನಡೆಯುವ ಪ್ರಹಸನ ಇಲ್ಲಿ ಇರಲಿದೆ. ಈ 4 ಪಾತ್ರಗಳ ಜೊತೆ ಆಗಾಗ ಬಂದು ಹೋಗುವಂಥ ಹಲವು ಪಾತ್ರಗಳಿವೆ’ ಎಂದರು.‘ತನ್ನ ಪತ್ನಿ ಮೇಲೆ ತುಂಬಾ ಪ್ರೀತಿಯಿದ್ದರೂ ಎದುರು ಮನೆಯಲ್ಲಿನ ಹೆಣ್ಣಿನ ಮೇಲೆ ಆಕರ್ಷಿತರಾಗುವ ಗಂಡಂದಿರ ಕಥೆಯಿದು. ನೋಡುಗರಿಗೆ ಸಿನಿಮಾ ಅನುಭವ ಸಿಕ್ಕುತ್ತದೆ. ನನ್ನ ಕಿರುತೆರೆಯ ಏಳೆಂಟು ವರ್ಷಗಳ ಅನುಭವವನ್ನು ಈ ಧಾರಾವಾಹಿಯಲ್ಲಿ ಉಪಯೋಗಿಸಿಕೊಂಡಿದ್ದೇನೆ ಎಂದವರು ನಿರ್ದೇಶಕ ಪೃಥ್ವಿರಾಜ್. ಲೋಕೇಶ್ ಬನವಟ್ಟಿ, ಜಯಶೀಲಾ, ಭಾಸ್ಕರ್ ನೀನಾಸಂ ಹಾಗೂ ಅನುಷಾ ಮುಖ್ಯಪಾತ್ರಧಾರಿಗಳು. ‘ಶ್ರೀಮಾನ್ ಶ್ರೀಮತಿ’ಗಾಗಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಗಳ ಸೆಟ್ ಹಾಕಲಾಗಿದೆಯಂತೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.