ಶನಿವಾರ, ಮೇ 15, 2021
22 °C

ಬಂದಳ್ಳಿ ಬ್ಯಾರೇಜ್ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಕೇಂದ್ರ ಸರ್ಕಾರದ ತ್ವರಿತ ನೀರಾವರಿ ಉಪಯೋಗ ಯೋಜನೆಯಡಿ ತಾಲ್ಲೂಕಿನ ಬಂದಳ್ಳಿಯಲ್ಲಿ ನಿರ್ಮಿಸಿರುವ ಬ್ಯಾರೇಜ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಭಾನುವಾರ ಉದ್ಘಾಟಿಸಿದರು.ಬಳಿಕ ನಡೆದ ಸಮಾರಂಭದಲ್ಲಿ, ರೈತರಿಗೆ ಅನುಕೂಲ ಕಲ್ಪಿಸಿಕೊಡಲು ಎಲ್ಲ ರೀತಿಯ ನೆರವು ನೀಡಲಾಗುವುದು. ಈ ಬ್ಯಾರೇಜ್ ಅನ್ನು ರೂ. 1.15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸುಮಾರು 80 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ ಎಂದರು.ರೈತರು ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದು, ಹೆಚ್ಚು ಬೆಳೆ ಬೆಳೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಆದ್ಯತೆ ನೀಡುತ್ತಿದೆ.ಜಿಲ್ಲೆಯು ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಬರುವ 5 ವರ್ಷಗಳಲ್ಲಿ ಜಿಲ್ಲೆಯನ್ನು ಮಾದರಿಯಾಗಿ ಮಾಡುವ ಗುರಿ ಹೊಂದಲಾಗಿದೆ. ರೈತರು ಗುಳೆ ಹೋಗುವುದನ್ನು ತಪ್ಪಿಸಲು ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕೈಗೊಳ್ಳಲಾಗುವುದು.ಕೆರೆ ತುಂಬಿಸುವ ಯೋಜನೆ, ಕೆರೆ ಹೂಳೆತ್ತುವುದು ಸೇರಿದಂತೆ ಸಮರೋಪಾದಿಯಲ್ಲಿ ಕಾಮಗಾರಿ ನಡೆಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.ಸನ್ನತ್ತಿ ಏತ ನೀರಾವರಿ ಯೋಜನೆಯ ಮೂಲಕ ಗುರುಮಠಕಲ್ ಮತಕ್ಷೇತ್ರದ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಪಡೆಯುವ ಮೂಲಕ ಜಿಲ್ಲೆಯ ಸಮಗ್ರ ನೀರಾವರಿಗೆ ಚಿಂತನೆ ನಡೆಸಲಾಗಿದೆ.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಮುತುವರ್ಜಿಯಿಂದ ಸಂವಿಧಾನದ 371 ನೇ ಕಲಂಗೆ ತಿದ್ದುಪಡಿ ಮಸೂದೆ ಅಂಗೀಕಾರವಾಗಿದ್ದು, ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಇದನ್ನು ಅನುಷ್ಠಾನಕ್ಕೆ ತರಲಿದೆ. ಅಲ್ಲದೇ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ಜಿಪಂ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ, ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಸದಸ್ಯ ಬಸವರಾಜ ಖಂಡ್ರೆ, ಮಹಿಪಾಲರೆಡ್ಡಿ ದುಪ್ಪಲ್ಲಿ, ಮಹಿಪಾಲರೆಡ್ಡಿ ಹತ್ತಿಕುಣಿ, ತಾಪಂ ಸದಸ್ಯರಾದ ಶರಣಪ್ಪ ಮೋಟ್ನಳ್ಳಿ, ಸಣ್ಣಹಣಮಂತ, ಸಿದ್ಧಲಿಂಗರಡ್ಡಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.