ಭಾನುವಾರ, ಏಪ್ರಿಲ್ 11, 2021
26 °C

ಬಂದಿದೆ ನ. 15; ಬರಲಿಲ್ಲ ಹೊಸ ಗುತ್ತಿಗೆದಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತ್ಯಾಜ್ಯ ವಿಲೇವಾರಿ ಹೊಣೆಯನ್ನು ಹೊಸ ಗುತ್ತಿಗೆದಾರರಿಗೆ ನೀಡಲು ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಆಗಲೇ 15 ದಿನ ಕಳೆದಿದ್ದರೂ ಹೊಸಬರು ಕೆಲಸ ಆರಂಭಿಸುವ ಪ್ರಕ್ರಿಯೆಗೆ ಇನ್ನೂ ಚಾಲನೆ ಸಿಕ್ಕಿಲ್ಲ.ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ 89 ಪ್ಯಾಕೇಜ್ ರೂಪಿಸಲಾಗಿದ್ದು, ಅದರಲ್ಲಿ 80 ಪ್ಯಾಕೇಜ್‌ಗಳ ನಿರ್ವಹಣೆಗೆ ಗುತ್ತಿಗೆದಾರರನ್ನು ನೇಮಿಸಲಾಗಿದೆ.ಗುತ್ತಿಗೆ ನೀಡಲಾದ 80 ಪ್ಯಾಕೇಜ್‌ಗಳ ಪೈಕಿ ಸಿಂಹಪಾಲನ್ನು (50 ಪ್ಯಾಕೇಜ್) ಭಾರತ ವಿಕಾಸ ಗ್ರೂಪ್ (ಬಿವಿಜಿ) ಇಂಡಿಯಾ ಲಿಮಿಟೆಡ್ ಸಂಸ್ಥೆಯೊಂದೇ ಪಡೆದುಕೊಂಡಿದೆ. ಮುಂಬೈ, ನವಿಮುಂಬೈ, ಪುಣೆ ಮಹಾನಗರ ಪಾಲಿಕೆಗಳಲ್ಲೂ ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದ ಈ ಸಂಸ್ಥೆ, ಅಣು ಶಕ್ತಿ ನಿಗಮ (ಎನ್‌ಪಿಸಿ), ಬಿಇಎಲ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಿಗೂ ಸೇವೆ ನೀಡುತ್ತಿದೆ.`ನ. 15ರಿಂದ ಹೊಸ ಗುತ್ತಿಗೆದಾರರು ಜವಾಬ್ದಾರಿ ನಿರ್ವಹಿಸಲಿದ್ದಾರೆ~ ಎಂದು ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ತಯಾರಿಯನ್ನು `ಪ್ರಜಾವಾಣಿ~ ಪರಿಶೀಲಿಸಿದಾಗ `ಇನ್ನೂ ಕೆಲವು ದಿನ ಹಳೆಯ ವ್ಯವಸ್ಥೆಯೇ ಮುಂದುವರಿಯಲಿದೆ~ ಎಂಬ ಸಂದೇಶ ಎಲ್ಲೆಡೆ ಸಿಗುತ್ತಿದೆ.`ನ. 15ರಿಂದ ಗುತ್ತಿಗೆ ಹೊಣೆಯನ್ನು ವಹಿಸಿಕೊಳ್ಳಲಾಗುವುದೇ~ ಎಂದು ಬಿವಿಜಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, `ತಾಂತ್ರಿಕ ಅಡಚಣೆ ಇದ್ದು, ಇನ್ನೂ ಕೆಲವು ದಿನ ವಿಳಂಬವಾಗಲಿದೆ~ ಎಂಬ ಉತ್ತರ ನೀಡಿದರು.

 `ಏನು ತಾಂತ್ರಿಕ ಅಡಚಣೆ~ ಎಂದು ಕೇಳಿದರೆ, `ನಮ್ಮ ಮುಖ್ಯಸ್ಥರಾದ ಪ್ರಸನ್ನ ಶಾಸ್ತ್ರಿ ವಿದೇಶಕ್ಕೆ ಹೋಗಿದ್ದು, ಬಂದ ಮೇಲೆ ಅವರೇ ಮಾಹಿತಿ ನೀಡುತ್ತಾರೆ~ ಎಂದಷ್ಟೇ ತಿಳಿಸಿದರು.`ಪ್ರಮುಖ ಗುತ್ತಿಗೆದಾರರೇ ನ. 15ರಿಂದ ಕಾರ್ಯ ನಿರ್ವಹಣೆಗೆ ಇನ್ನೂ ಸನ್ನದ್ಧರಾಗಿಲ್ಲ. ಉಳಿದ ಸಣ್ಣ-ಪುಟ್ಟ ಗುತ್ತಿಗೆದಾರರು ಜವಾಬ್ದಾರಿ ವಹಿಸಿಕೊಂಡರೂ ವ್ಯವಸ್ಥೆಯಲ್ಲಿ ಬದಲಾವಣೆ ಆಗುವುದಿಲ್ಲ. ತ್ಯಾಜ್ಯ ವಿಲೇವಾರಿಯಲ್ಲಿ ಹಳೇ ಗುತ್ತಿಗೆದಾರರ ಹಿಡಿತವೇ ಮುಂದುವರಿಯಲಿದೆ. ಕಸದ ಚುಕ್ಕಾಣಿ ಅಷ್ಟು ಸುಲಭವಾಗಿ ಬದಲಾಗಲು ಅಲ್ಲಿಯ ಕಸ ವಿಲೇವಾರಿ ಮಾಫಿಯಾ ಅವಕಾಶ ನೀಡುವುದಿಲ್ಲ~ ಎಂದು ಕೆಲ ಬಿಬಿಎಂಪಿ ಸದಸ್ಯರು ವಿವರಿಸಿದರು.`2006 ಹಾಗೂ ಅದಕ್ಕಿಂತ ಈಚಿನ ಮಾಡೆಲ್ ಲಾರಿಗಳನ್ನಷ್ಟೇ ಹೊಂದಿರಬೇಕು. ವಲಯ ಮತ್ತು ಪ್ಯಾಕೇಜ್ ವಿವರ ಪ್ರತಿ ಲಾರಿಯ ಮೇಲೆ ಇರಬೇಕು. ಪ್ರತಿ ಲಾರಿ ಜಿಪಿಎಸ್ ವ್ಯವಸ್ಥೆ ಹೊಂದಿರಬೇಕು. ಅಗತ್ಯ ಸಂಖ್ಯೆಯ ಪೌರ ಕಾರ್ಮಿಕರನ್ನೂ ವ್ಯವಸ್ಥೆ ಮಾಡಿಕೊಳ್ಳಬೇಕು~ ಎಂಬ ಷರತ್ತುಗಳನ್ನು ಗುತ್ತಿಗೆದಾರರಿಗೆ ವಿಧಿಸಲಾಗಿದೆ.`ಕೆಲಸದ ಆದೇಶ ನೀಡಿದ 15 ದಿನಗಳಲ್ಲೇ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿಯನ್ನು ಆರಂಭಿಸುವುದು ಕಡ್ಡಾಯ~ ಎಂಬ ಷರತ್ತು ಕೂಡ ಟೆಂಡರ್‌ನಲ್ಲಿ ಅಡಕವಾಗಿದೆ. ಬಿಬಿಎಂಪಿ ನಿರ್ಣಯಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ಮೇಲಷ್ಟೇ ಗುತ್ತಿಗೆದಾರರಿಗೆ ಕೆಲಸದ ಆದೇಶ ನೀಡಲು ಸಾಧ್ಯವಾಗಲಿದೆ. ಈ ಪ್ರಕ್ರಿಯೆಯಲ್ಲಿ ತುಸು ಏರು-ಪೇರು ಉಂಟಾಗಿದ್ದೇ ವಿಳಂಬಕ್ಕೆ ಕಾರಣ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.ಹೊಸ ಗುತ್ತಿಗೆದಾರರು ವಾಹನ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಿಕೊಳ್ಳಬೇಕಿದ್ದು, ಅದಕ್ಕೆ ಕಾಲಾವಕಾಶ ಅಗತ್ಯವಾಗಿದೆ. ಅವರಿಂದ ಆ ಕೆಲಸ ಆಗುವವರೆಗೆ ಸದ್ಯದ ವ್ಯವಸ್ಥೆಯೇ ಮುಂದುವರಿಯಲಿದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.