ಬಂದೂಕು ತರಬೇತಿ ಕೇಂದ್ರಕ್ಕೆ ಆದ್ಯತೆ; ಅಂಚಟಗೇರಿಯಲ್ಲಿ ಶೀಘ್ರ ಫೈರಿಂಗ್ ರೇಂಜ್ ಆರಂಭ

7

ಬಂದೂಕು ತರಬೇತಿ ಕೇಂದ್ರಕ್ಕೆ ಆದ್ಯತೆ; ಅಂಚಟಗೇರಿಯಲ್ಲಿ ಶೀಘ್ರ ಫೈರಿಂಗ್ ರೇಂಜ್ ಆರಂಭ

Published:
Updated:

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪೊಲೀಸ್ ಸಿಬ್ಬಂದಿಗೆ ಅತಿ ಅಗತ್ಯವಾದ `ಬಂದೂಕು ತರಬೇತಿ ಕೇಂದ್ರ~ (ಫೈರಿಂಗ್ ರೇಂಜ್) ಕಾರವಾರ ರಸ್ತೆಯ ಅಂಚಟಗೇರಿಯಲ್ಲಿ ಸದ್ಯದಲ್ಲೆ ಆರಂಭಗೊಳ್ಳಲಿದೆ. ಆ ಮೂಲಕ ಕಳೆದ 5 ವರ್ಷಗಳಿಂದ ಇಲ್ಲಿನ ಪೊಲೀಸರು ಎದುರಿಸುತ್ತಿರುವ ದೊಡ್ಡ ಕೊರತೆಯೊಂದು ನೀಗಲಿದೆ.`ಧಾರವಾಡ ಎಸ್‌ಡಿಎಂ ಎಂಜಿಯನಿರಿಂಗ್ ಕಾಲೇಜು ಸಮೀಪ ಸುಮಾರು 36 ಎಕರೆ ಜಾಗದಲ್ಲಿ ಇದ್ದ ಫೈರಿಂಗ್ ರೇಂಜ್ ಅನ್ನು ಐದು ವರ್ಷಗಳ ಹಿಂದೆ ರದ್ದುಗೊಳಿಸಲಾಗಿತ್ತು. ಸುತ್ತಮುತ್ತ ಜನವಾಸ, ಶಾಲೆಗಳು ಹೆಚ್ಚಿದ ಪರಿಣಾಮ ಆ ಕೇಂದ್ರವನ್ನು ಜಿಲ್ಲಾಧಿಕಾರಿ ರದ್ದುಗೊಳಿಸಿದ್ದರು. ಅನಂತರ ಸೂಕ್ತ ಜಾಗವಿಲ್ಲದೆ  ಪೊಲೀಸರಿಗೆ ನಿಯಮಿತವಾಗಿ ಬಂದೂಕು ತರಬೇತಿ ನಡೆಸಲು ಸಾಧ್ಯವಾಗಿರಲಿಲ್ಲ.ಇದೀಗ ಈ ಉದ್ದೇಶಕ್ಕಾಗಿ ಅಂಚಟಗೇರಿಯಲ್ಲಿರುವ 8.25 ಎಕರೆ ಸರ್ಕಾರಿ ಜಾಗವನ್ನು ಜಿಲ್ಲಾಧಿಕಾರಿ ಮೂರು ತಿಂಗಳ ಹಿಂದೆ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್‌ಗೆ ಹಸ್ತಾಂತರಿಸಿದ್ದರು. ಈ ಪ್ರದೇಶದ ಸುತ್ತ ಕಾಡು ಆವರಿಸಿಕೊಂಡಿದ್ದು, ಎತ್ತರದ ದಿಣ್ಣೆಯಂತಹ ಜಾಗವಿದೆ. ಹೀಗಾಗಿ ಬಂದೂಕು ತರಬೇತಿಗೆ ಸೂಕ್ತ ಜಾಗವಿದು~ ಎಂದು ಪೊಲೀಸ್ ಆಯುಕ್ತ ಡಾ. ಕೆ.ರಾಮಚಂದ್ರ ರಾವ್ `ಪ್ರಜಾವಾಣಿ~ಗೆ ತಿಳಿಸಿದರು.`ಅಂಚಟಗೇರಿಯಲ್ಲಿ ಸುಸಜ್ಜಿತ ಫೈರಿಂಗ್ ರೇಂಜ್ ಆರಂಭಿಸಲು ಆದ್ಯತೆ ನೀಡಲಾಗುವುದು. ಪೊಲೀಸ್ ಇಲಾಖೆಯಲ್ಲಿ ಸದ್ಯ ಬಳಕೆಯಲ್ಲಿರುವ ಎಲ್ಲ ವಿಧದ ಆಯುಧಗಳನ್ನು ಬಳಸುವ ಬಗ್ಗೆ ಇಲ್ಲಿ ಸಿಬ್ಬಂದಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು. ಅದಕ್ಕೆ ಅನುಗುಣವಾಗಿ ಈ ಜಾಗದಲ್ಲಿ  ಹಳ್ಳ-ದಿಣ್ಣೆ ರೂಪಿಸಲು ಆರಂಭದ ಹಂತದಲ್ಲಿ 25 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ದಾರೆ.ಧಾರವಾಡದಲ್ಲಿದ್ದ ಫೈರಿಂಗ್ ರೇಂಜ್ ರದ್ದುಗೊಂಡ ಬಳಿಕ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಸುಮಾರು 45 ಕಿ.ಮೀ ದೂರ ಶಿಗ್ಗಾಂವ್‌ನಲ್ಲಿರುವ ಕೆಎಸ್‌ಆರ್‌ಪಿ ಫೈರಿಂಗ್ ಕೇಂದ್ರಕ್ಕೆ ಹೋಗಬೇಕಿತ್ತು. ಪೊಲೀಸ್ ಸಿಬ್ಬಂದಿ ವರ್ಷಕ್ಕೆ 2 ಬಾರಿ ಫೈರಿಂಗ್ ತರಬೇತಿಯಲ್ಲಿ ಭಾಗವಹಿಸಬೇಕು ಎನ್ನುವುದು ನಿಯಮ.

 

ಆದರೆ ಶಿಗ್ಗಾಂವ್‌ಗೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಲು ಮತ್ತು ಎಲ್ಲ ಸಿಬ್ಬಂದಿ ಅಲ್ಲಿಗೆ ತೆರಳಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜಿಲ್ಲೆಯ್ಲ್ಲಲೇ ಇಂತಹ ಒಂದು ತರಬೇತಿ ಕೇಂದ್ರ ಸ್ಥಾಪಿಸುವುದು ಅಗತ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.`ಫೈರಿಂಗ್ ಸಹಿತ ಯಾವುದೇ ತರಬೇತಿ ಬೆಳಿಗ್ಗೆ 5.30ಕ್ಕೆ ಆರಂಭಗೊಂಡು 8 ಗಂಟೆ ಒಳಗೆ ಮುಕ್ತಾಯವಾಗಬೇಕು. ಆದರೆ ಶಿಗ್ಗಾಂವ್‌ನಲ್ಲಿರುವ ಕೇಂದ್ರಕ್ಕೆ ಹೋಗಿ ಬರಲು ಹೆಚ್ಚಿನ ಸಮಯ ತಗಲುತ್ತಿದೆ.

ಹೀಗಾಗಿ ಪರ್ಯಾಯ ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು.ಅಲ್ಲದೆ ಬೂದನಗುಡ್ಡದಲ್ಲಿ ಜಾಗ ನೀಡುವಂತೆ ಕೋರಿಕೆ ಸಲ್ಲಿಸಲಾಗಿತ್ತು. ಆದರೆ ಆ ಜಾಗ ಅರಣ್ಯ ಇಲಾಖೆಗೆ ಸೇರಿದ್ದರಿಂದ ಅದನ್ನು ನೀಡಲು ಜಿಲ್ಲಾಡಳಿತ ಒಪ್ಪಿರಲಿಲ್ಲ ಎಂದು ಫೈರಿಂಗ್ ರೇಂಜ್ ಉಸ್ತುವಾರಿ ಹೊತ್ತಿರುವ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಉಪ ಪೊಲೀಸ್ ಆಯುಕ್ತ ಎಂ.ಎನ್. ಜೋಗಳೇಕರ ತಿಳಿಸಿದರು.ಅಂಚಟಗೇರಿಯಲ್ಲಿ ಆರಂಭಗೊಳ್ಳಲಿರುವ ಕೇಂದ್ರದಲ್ಲಿ ನಾಗರಿಕ ಬಂದೂಕು ತರಬೇತಿಯನ್ನೂ ನೀಡಲಾಗುವುದು. ಇಲ್ಲಿ ಆವರಣ ಗೋಡೆ, ನೆಲ ಸಮತಟ್ಟು ಕಾಮಗಾರಿ ಸದ್ಯಲ್ಲೆ ಪೂರ್ಣಗೊಂಡು 3-4 ತಿಂಗಳಲ್ಲಿ ತರಬೇತಿ ಆರಂಭಿಸಲಾಗುವುದು ಎಂದರು.ಬಂಜಾರ ಕಾಲೊನಿಗೆ ಸಿಎಆರ್

`ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಕೇಂದ್ರವೂ ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿರುವ ಬಂಜಾರ ಕಾಲೊನಿಗೆ ಸದ್ಯದಲ್ಲೆ ಸ್ಥಳಾಂತರಗೊಳ್ಳಲಿದೆ. ಇಲ್ಲಿ 8 ಎಕರೆ ಜಾಗದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮತ್ತಿತರ ಕಾಮಗಾರಿ ಪೂರ್ಣಗೊಂಡಿದೆ. ಜೊತೆಗೆ ಸಶಸ್ತ್ರ ಪೊಲೀಸರ ತರಬೇತಿ ಕೇಂದ್ರವೂ ಇಲ್ಲಿ ರೂಪುಗೊಳ್ಳಲಿದೆ.`ಬಂಜಾರ ಕಾಲೊನಿಯಲ್ಲಿ 64 ವಸತಿಗೃಹಗಳು ನಿರ್ಮಾಣ ವಾಗಿದೆ. ಆದರೆ ಸದ್ಯ ನೀರಿನ ಸಮಸ್ಯೆ ಇದೆ. ಹೀಗಾಗಿ ಪೊಲೀಸ್ ಸಿಬ್ಬಂದಿಗೆ ಉಳಿದುಕೊಳ್ಳುವುದು ಕಷ್ಟ. ಅಲ್ಲದೆ ಒಳಾಂಗಣ ಕೆಲಸ ಪೂರ್ಣಗೊಂಡಿಲ್ಲ. ನಂತರ ಸ್ಥಳಾಂತರ ಕಾರ್ಯ ನಡೆಯಲಿದೆ ಎಂದು ಜೋಗಳೇಕರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry