ಬಂದೇ ಬಂತು ಒಂದು ದಿನ...

7

ಬಂದೇ ಬಂತು ಒಂದು ದಿನ...

Published:
Updated:
ಬಂದೇ ಬಂತು ಒಂದು ದಿನ...

`ಬಂದೇ ಬರುವುದು ಒಂದು ದಿನ~- ಇದು ಯುವಕವಿ ವೀರಣ್ಣ ಮಡಿವಾಳರ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಪ್ರಕಟಿಸಿದ, ಈಗ ಕವನ ಸಂಕಲನ ಎಂದು ಹೆಸರಿಸಲು ಸಂಕೋಚ ಪಡುವ ಪುಸ್ತಕ. ಆ ಸಂಕಲನದ ಕವಿತೆಗಳ ವಿಷಯವೇನೇ ಇರಲಿ, ಅದರ ಶೀರ್ಷಿಕೆ ಧ್ವನಿಸುವ ಆಶಾಭಾವವಂತೂ ವೀರಣ್ಣರ ಪಾಲಿಗೆ ನಿಜವಾಗಿದೆ. `ಆ ಒಂದು ದಿನ~ ಈಗ ಅವರದಾಗಿದೆ. ಅವರ `ನೆಲದ ಕರುಣೆಯ ದನಿ~ ಸಂಕಲನಕ್ಕೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರದ ಗೌರವ.ನಮ್ಮ ಅನೇಕ ಕವಿಗಳಂತೆ ವೀರಣ್ಣನವರಿಗೆ ಕವಿತೆ ಎನ್ನುವುದು ಒಂದು ವ್ಯಸನವಲ್ಲ. ಅದು ಸಾಹಿತ್ಯದ ಧ್ಯಾನವೂ ಅಲ್ಲ. ಅದು, ಬದುಕಿನ ಹಾದಿಯಲ್ಲಿ ಅವರು ಕಂಡುಕೊಂಡ ಒಂದು ನೆಳಲು ಹಾಗೂ ಪ್ರತಿರೋಧದ ಕೊಳಲು. `ಕಾವ್ಯರಚನೆ ಎನ್ನುವುದು ನನ್ನ ವಿರುದ್ಧದ ನನ್ನದೇ ಬಂಡಾಯ~ ಎನ್ನುವ ವೀರಣ್ಣನವರಿಗೆ, ಕವಿತೆಯ ಮೂಲಕವೇ ಮಾನವೀಯ ಮನಸ್ಸುಗಳನ್ನು ಹೆಚ್ಚು ಆರ್ದ್ರಗೊಳಿಸುವ ಹಂಬಲ.ವೀರಣ್ಣನವರ ಕವಿತೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರ ಬದುಕಿನ ಹಿನ್ನೆಲೆಯನ್ನು ತಿಳಿಯಬೇಕು. ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಕಲಕೇರಿ ಅವರ ಹುಟ್ಟೂರು. ಅಪ್ಪ ಸರ್ಕಾರಿ ದವಾಖಾನೆಯಲ್ಲಿ ಕಂಪೌಂಡರ. ಅಮ್ಮ ಮನೆ ಮಕ್ಕಳು ಎಂದು ಜೀವ ತೇಯುವ ಹೆಣ್ಣುಮಗಳು. ಅಪ್ಪಅವ್ವನ ಕನಸುಗಳನ್ನು ಉಂಡುಕೊಂಡು, ತಮ್ಮ-ತಂಗಿಯ ನಾಳೆಗಳನ್ನು ಬೆನ್ನಿಗಿಟ್ಟುಕೊಂಡ ವೀರಣ್ಣನಿಗೆ ಎಂಜಿನಿಯರ್ ಆಗಬೇಕೆನ್ನುವ ಆಸೆ. ಅದಕ್ಕೆ ತಕ್ಕನಾಗಿ ಹತ್ತನೇ ಇಯತ್ತೆವರೆಗೆ ಪರೀಕ್ಷೆಗಳಲ್ಲೆಲ್ಲ ಭರ್ಜರಿ ಕೊಯಿಲು.ಆದರೆ, ಪಿಯುಸಿ ಮೊದಲ ವರ್ಷದ ಕಲಿಕೆ ತಾಳತಪ್ಪಿತು. ಕಾಲೇಜಿನಲ್ಲಿ ಉಪನ್ಯಾಸಕರಿಲ್ಲ. ದಿಕ್ಕು ತೋರುವವರಿಲ್ಲ. ಹಳ್ಳಿಗನಾದ ನನಗೆ ವಿಜ್ಞಾನ ಜೀರ್ಣವಾಗುವ ಸಂಗತಿಯಲ್ಲ ಎಂದೆಣೆಸಿದ ವೀರಣ್ಣ ಗೆಳೆಯರೊಂದಿಗೆ ಗೋವಾಕ್ಕೆ ವಲಸೆ ಹೋದರು. ಆದರೆ ಸ್ವಲ್ಪ ದಿನಗಳಲ್ಲೇ, ತನ್ನ ದಾರಿ ಇದಲ್ಲವೆನ್ನಿಸಿತು. ಹೊಸ ಕನಸುಗಳೊಂದಿಗೆ ವೀರಣ್ಣ ಕಾಲೇಜಿಗೆ ಮರಳಿದರು. ತನಗೆ ತೋಚಿದ್ದನ್ನು ಓದಿಕೊಂಡೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನೂ ಬರೆದರು. ಎಲ್ಲ ವಿಷಯಗಳಲ್ಲೂ ಪ್ರಥಮ ದರ್ಜೆ ಅಂಕಗಳು ದೊರೆತು. ಆದರೆ, ಗಣಿತದಲ್ಲಿ ಮಾತ್ರ ನಪಾಸು. ಎಂಜಿನಿಯರ್ ಆಗಬೇಕೆಂದುಕೊಂಡಿದ್ದ ಹುಡುಗ ಲೆಕ್ಕತಪ್ಪಿದ್ದ.ಪಿಯುಸಿ ಫೇಲಾಗಿ ಊರಿಗೆ ಬಂದ ವೀರಣ್ಣ ಊರಿನಲ್ಲಿನ ಸ್ವಯಂ ಸೇವಾಸಂಸ್ಥೆಯೊಂದರ ಜೊತೆ ಗುರ್ತಿಸಿಕೊಂಡರು. ಕೃಷಿ ಹೊಂಡ ತೆರೆಸಲು ಸಹಾಯಕನಾಗಿ ದುಡಿದರು. ಕೃಷಿ ಹೊಂಡ ತೆರೆಸುವ ಓಡಾಟ ಅವರ ಬದುಕಿನ ಕಣ್ಣನ್ನೂ ತೆರೆಸಿತೆನ್ನಬೇಕು. ಕೃಷಿಯನ್ನು, ಕೃಷಿಕರ ಬದುಕನ್ನು ಹತ್ತಿರದಿಂದ ಕಾಣುವ ಅವಕಾಶ ಅವರದಾಯಿತು. ಸುಮಾರು ಮುನ್ನೂರು ಹೊಂಡಗಳನ್ನು ತೆಗೆಸಲು ಅವರು ಮಾರ್ಗದರ್ಶನ ನೀಡಿದರು.ಗಣಿತದಲ್ಲಿ ದಡ ಸೇರಲೇಬೇಕು ಎನ್ನುವ ಹಂಬಲದಿಂದ ವೀರಣ್ಣ ಗದಗಕ್ಕೆ ಬಂದರು. ಅಲ್ಲಿನ ತರಬೇತಿ ಕೇಂದ್ರವೊಂದರಲ್ಲಿ ಸಹಾಯಕನಾಗಿ ದುಡಿಯುತ್ತಲೇ, ಗಣಿತದ ತರಗತಿಗಳಲ್ಲೂ ಕೂರತೊಡಗಿದರು. ಗಣಿತ ಕೊನೆಗೂ ಕೈಹತ್ತಿತು. ಪರೀಕ್ಷೆಯಲ್ಲಿ ಪಾಸಾದರು. ಅಪ್ಪನ ಕಿಸೆಗೆ ಎಂಜಿನಿಯರಿಂಗ್ ಸೀಟು ದೊರಕಿಸಿಕೊಡುವ ಶಕ್ತಿ ಇಲ್ಲವೆನ್ನುವುದು ವೀರಣ್ಣನವರಿಗೆ ಯಾವಾಗಲೋ ಮನವರಿಕೆಯಾಗಿತ್ತು. ಅದಕ್ಕೆ ಸರಿಯಾಗಿ ಪರೀಕ್ಷೆಗಳ ಮೇಲೆ ಪರೀಕ್ಷೆ! ಕೊನೆಗೆ, ಎಂಜಿನಿಯರಿಂಗ್ ಆಸೆ ಬಿಟ್ಟ ಅವರು, ಡಿ.ಎಡ್ ಬಾಗಿಲು ಬಡಿದರು.ಶಿಕ್ಷಕ ತರಬೇತಿ ಪೂರೈಸಿದ ನಂತರ ವೀರಣ್ಣ ಉತ್ತರ ಕರ್ನಾಟಕದ ಭೂ ಸಂಬಂಧ ಚಳವಳಿಗಳಲ್ಲಿ ಸಕ್ರಿಯರಾದರು. ರೋಣದ ದಲಿತರ ಹಕ್ಕುಗಳಿಗಾಗಿ ದನಿಯೆತ್ತಿದರು. ಶಿರೋಳದ ಕೊಳಗೇರಿ ಜನರ ಸಂಘಟನೆಗೆ ದುಡಿದರು. ಹೋರಾಟದ ಹಾದಿಯಲ್ಲಿ ಸಾಗುತ್ತಿರುವಾಗಲೇ ಶಿಕ್ಷಕ ವೃತ್ತಿ ಅವರಿಗೆ ದೊರೆಯಿತು. ಬದುಕಿನ ದಿಕ್ಕು ಮತ್ತೊಮ್ಮೆ ಬದಲಾಯಿತು.ಸರ್ಕಾರಿ ನೌಕರಿಗೆ ಸೇರಿದ ಮೇಲೆ ಪ್ರತಿರೋಧದ ದಾರಿಯಾಗಿ ವೀರಣ್ಣನವರಿಗೆ ಕಾಣಿಸಿದ್ದು ಕವಿತೆ. ತಮ್ಮೆದೆಯ ತಲ್ಲಣಗಳನ್ನೆಲ್ಲ ಕವಿತೆಯಾಗಿ ಬರೆದರು. `ನೆಲದ ಕರುಣೆಯ ದನಿ~ ಎನ್ನುವ ಕವಿತೆಗೆ `ಪ್ರಜಾವಾಣಿ~ ದೀಪಾವಳಿ ವಿಶೇಷಾಂಕದ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು. ಅದೇ ಹೆಸರಿನ ಸಂಕಲನವನ್ನೂ ಹೊರತಂದರು. ಅದೇ ಸಂಕಲನಕ್ಕೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ. ನೆಲದ ಕರುಣೆಯ ದನಿಯ ಕವಿತೆಗಳ ವಾಚನದ ಸೀಡಿಯನ್ನೂ ವೀರಣ್ಣ ಹೊರತಂದಿದ್ದಾರೆ.ಚಿಕ್ಕೋಡಿ ತಾಲ್ಲೂಕಿನ ಗಾವಡ್ಯಾನವಾಡಿ ಎನ್ನುವಲ್ಲಿನ ತೋಟದ ಶಾಲೆ ಈಗ ವೀರಣ್ಣನವರ ಕರ್ಮಭೂಮಿ. ಎರಡು ಮೂರು ಕಿ.ಮೀ. ದೂರದ ಗ್ರಾಮಗಳ ಚಿಣ್ಣರು ಕಬ್ಬಿನ ಗದ್ದೆಗಳನ್ನು ಹಾದುಕೊಂಡು ಶಾಲೆಗೆ ಬರುತ್ತಾರೆ. ಆ ಮಕ್ಕಳಿಗೆ ಕಲಿಸುತ್ತಾ, ತಾವೂ ಕಲಿಯುತ್ತಾ, ಕನಸು ಕಾಣುತ್ತಾ... ಆದರ್ಶ, ಮಾನವೀಯತೆ, ಬಂಡಾಯ, ಪ್ರೇಮ, ಮುಂತಾಗಿ ಸುತ್ತುವ-ಕನವರಿಸುವ ಅವರಿಗೆ ಶಾಲೆಯ ಬದುಕೂ ಅಲ್ಲಿನ ಮಕ್ಕಳೂ ಕಾವ್ಯವೇ. ಮೇಷ್ಟ್ರು ಕೆಲಸ ಅರ್ಥಪೂರ್ಣ ಅನ್ನಿಸಿದೆ.ಸುತ್ತಮುತ್ತಲ ಶೋಷಣೆಗಳ ಬಗ್ಗೆ ಭಾವುಕರಾಗುವ, ಅನ್ಯಾಯ-ಅಸಮಾನತೆಗಳ ಬಗ್ಗೆ ರೊಚ್ಚಿನಿಂದ ಮಾತನಾಡುವ ವೀರಣ್ಣರ ಕವಿತೆಗಳಲ್ಲಿ ವಿಚಿತ್ರ ನಿರ್ಲಿಪ್ತತೆ ಇರುವುದನ್ನು ಗಮನಿಸಬೇಕು. ವಿಷಾದವೇ ಶಾಯಿಯೂ ಸ್ಥಾಯಿಯೂ ಆದ ಅವರ ಕವಿತೆಗಳ ಕೊನೆಯ ಮಾತು ಬದುಕಿನ ಜೀವಂತಿಕೆ ಹಾಗೂ ಮಾನವೀಯತೆ. ಓರಗೆಯ ಗೆಳೆಯರು ಕಥೆ-ಕವಿತೆ ಬರೆದುಕೊಂಡು, ಪ್ರಶಸ್ತಿ ಪ್ರಭಾವಳಿಗಳಲ್ಲಿ ತೋಯ್ದುಕೊಳ್ಳುತ್ತಿರುವ ಸಂದರ್ಭದಲ್ಲೇ, ಅವರೊಡನಿದ್ದೂ ಅವರಂತಾಗದ ಹಾದಿಯಲ್ಲಿ ವೀರಣ್ಣ ನಡೆಯುತ್ತಿದ್ದಾರೆ. ಶೋಷಿತರ ನೋವುಗಳು ತಮ್ಮವೂ ಎಂದು ಚಡಪಡಿಸುವ ಕವಿಮನಸು ಅವರದು. ಸವಣೂರು ಭಂಗಿಗಳಿಗೆ ನ್ಯಾಯ ಒದಗಿಸಲು ಅವರ ಜೊತೆಯಾಗಿ ಹೆಜ್ಜೆ ಹಾಕಿದವರು ಇದೇ ವೀರಣ್ಣ.ಕಾವ್ಯದ ಮೂಲಕ ಗೌರವವನ್ನು, ಸಹೃದಯರ ಪ್ರೀತಿಯನ್ನೂ ವೀರಣ್ಣ ಪಡೆದಿದ್ದಾರೆ. ಆದರೆ, ಇದೇ ಕವಿತೆಯ ಕಾರಣದಿಂದಲೇ ಅಪ್ಪನ ಸಿಟ್ಟಿಗೂ ಗುರಿಯಾಗಿದ್ದಾರೆ. ದವಾಖಾನೆಯಲ್ಲಿ ಕಂಪೌಂಡರ ಆಗಿರುವ ಅಪ್ಪನಿಗೆ ಕಾವ್ಯ ಒಂದು ಮದ್ದಿನಂತೆ ಯಾಕೋ ಕಾಣುತ್ತಿಲ್ಲ.ಅಪ್ಪ ಮುಖ ತಿರುಗಿಸಿಕೊಂಡರೂ ಕವಿತೆ ವೀರಣ್ಣನವರಿಗೆ ಸಂಗಾತಿಯನ್ನು ದೊರಕಿಸಿಕೊಟ್ಟಿದೆ. ಪತ್ನಿ ಭಾರತಿ ಪ್ರೌಢಶಾಲೆಯಲ್ಲಿ ಶಿಕ್ಷಕಿ. ಇಬ್ಬರ ಪ್ರೇಮದ ಕುಡಿ ಆರು ತಿಂಗಳ ಕೂಸು ವಿಭಾ. ಈಚೆಗಷ್ಟೇ ಹೆಂಡತಿ ಮಗಳೊಂದಿಗೆ ವೀರಣ್ಣ ಕಲಕೇರಿಗೆ ಹೋಗಿಬಂದಿದ್ದಾರೆ. ಮೊಮ್ಮಗಳ ನೋಡಿ ಅಜ್ಜಿಯ ಕಣ್ಣುಗಳು ಮಿನುಗಿವೆ. ಅಪ್ಪನ ಮುನಿಸಿನ್ನೂ ತೀರಿಲ್ಲ. ಪ್ರಶಸ್ತಿ ಬಂದ ಹೊತ್ತು, `ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ~ ಎಂದು ವೀರಣ್ಣನವರಿಗೆ ಅನ್ನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry