ಬಂದ್‌ಗಳು ಬಂದಾಗುವುದು ಎಂದು?

7

ಬಂದ್‌ಗಳು ಬಂದಾಗುವುದು ಎಂದು?

Published:
Updated:

ರಾಜಕೀಯ ಪಕ್ಷಗಳು ನೀಡುವ ಬಂದ್ ಕರೆಯನ್ನು 1997ರಲ್ಲಿ ಕೇರಳ ಹೈಕೋರ್ಟ್  ಅಕ್ರಮ ಎಂದು ಘೋಷಿಸಿತು.ಸುಪ್ರೀಂ ಕೋರ್ಟ್ ಈ ತೀರ್ಪನ್ನು 1998ರಲ್ಲಿ ಎತ್ತಿಹಿಡಿಯಿತು.2002ರಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎಲ್ಲ ಬಗೆಯ ಹರತಾಳಗಳಿಗೆ ವಿಸ್ತರಿಸಿತು.2004ರ ಜುಲೈಯಲ್ಲಿ ಶಿವಸೇನೆ ಮತ್ತು ಭಾರತೀಯ ಜನತಾ ಪಕ್ಷ ಕರೆ ನೀಡಿ ಅಂದಾಜು 50 ಕೋಟಿ ನಷ್ಟಕ್ಕೆ ಕಾರಣವಾದ ಮುಂಬೈ ಬಂದನ್ನು ಅಕ್ರಮ ಎಂದು ಸಾರಿದ ಮುಂಬೈ ಹೈಕೋರ್ಟ್ ಈ ಎರಡೂ ಪಕ್ಷಗಳಿಗೆ ತಲಾ 20 ಲಕ್ಷ ರೂಪಾಯಿಗಳ ದಂಡ ವಿಧಿಸಿತು. ಈ ದಂಡವನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ನಿರಾಕರಿಸಿತು.ತೃಣಮೂಲ ಕಾಂಗ್ರೆಸ್ 2004ರ ನವೆಂಬರ್‌ನಲ್ಲಿ ಕರೆ ನೀಡಿದ ಕೋಲ್ಕತ್ತ ಬಂದ್‌ಅನ್ನು ಅಕ್ರಮವೆಂದು ಸಾರಿದ ಕೋಲ್ಕತ್ತ ಹೈಕೋರ್ಟ್, ಈ ಬಂದ್ ಕರೆಯನ್ನು ಹಿಂಪಡೆಯುವಂತೆ ಅದನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆಯೂ ನಿರ್ದೇಶಿಸಿತು. 2006ರಲ್ಲಿ ಕೇರಳ ಹೈಕೋರ್ಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಂದ್ ಕರೆಕೊಡುವ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತು. 2007ರ ಜೂನ್‌ನಲ್ಲಿ ಗುಜ್ಜರ್ ಚಳವಳಿಯ ಫಲಶ್ರುತಿಯಾದ ದೆಹಲಿ ಬಂದ್‌ಅನ್ನು ಮತ್ತು ಆ ಕಾರಣದಿಂದಾದ ಸುಮಾರು 700 ಕೋಟಿ ನಷ್ಟವನ್ನು ಸುಪ್ರೀಂ ಕೋರ್ಟ್ ‘ರಾಷ್ಟ್ರೀಯ ಅವಮಾನ’ವೆಂದಿತು.  2006ರ ಅಕ್ಟೋಬರ್‌ನಲ್ಲಿ ಬೆಳಗಾವಿ ವಿವಾದದ ಕನ್ನಡ ಪರ ಚಳವಳಿಯಿಂದ ಆದ ಬಂದ್‌ನಲ್ಲಿ ಸುಮಾರು 2000 ಕೋಟಿ ನಷ್ಟವುಂಟಾಯಿತೆಂದು ಅಂದಾಜಿಸಲಾಗಿದೆ.ಇತ್ತೀಚೆಗೆ ಅಂದರೆ 2010ರ ಜುಲೈ 5ರಂದು ಪ್ರತಿಪಕ್ಷಗಳು ತೈಲಬೆಲೆ ಏರಿಕೆಯನ್ನು ಪ್ರತಿಭಟಿಸಿ ನೀಡಿದ ಭಾರತ ಬಂದ್ ಉಂಟುಮಾಡಿದ ನಷ್ಟಕ್ಕೆ ಲೆಕ್ಕವಿಲ್ಲ.2011ರ ಜನವರಿ 22ರಂದು ಅಡಳಿತಾರೂಢ ಭಾರತೀಯ ಜನತಾ ಪಕ್ಷ ಕರೆ ನೀಡಿದ ಕರ್ನಾಟಕ ಬಂದ್ ಈ ಅಕ್ರಮ ಹಾದಿಯಲ್ಲಿ ಇನ್ನೊಂದು ಹೆಜ್ಜೆ.ಬಂದ್ ಕರೆ ನೀಡಿದ ಆಡಳಿತ ಪಕ್ಷವು ಜನತೆ ಸ್ವಯಂಪ್ರೇರಣೆಯಿಂದ ಬಂದ್ ಮಾಡಿದರೆಂದು ಹೇಳಿ ಕೊಂಡಿತು.ಅನೇಕ ಕಡೆ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಯಿತು.ಬಸ್‌ಗಳನ್ನು ಸುಡಲಾಯಿತು. ಬಸ್ ಪ್ರಯಾಣ ರದ್ದಾಯಿತು.ಶಾಲೆ-ಕಾಲೇಜುಗಳನ್ನು ಮಾತ್ರವಲ್ಲ, ಸಾರ್ವಜನಿಕ ಮತ್ತು ಸರ್ಕಾರಿ ಕಚೇರಿಗಳು ಬಂದಾದವು. ಒಟ್ಟಾರೆ ನಷ್ಟ ನೂರಾರು ಕೋಟಿಗಟ್ಟಲೆಯೆಂದು ಒಂದು ಅಂದಾಜು.ನ್ಯಾಯಾಲಯಗಳು ಇಷ್ಟೊಂದು ಸ್ಪಷ್ಟವಾಗಿ ತೀರ್ಪು ನೀಡಿ ಬಂದ್‌ಗಳನ್ನು ಅಕ್ರಮವೆಂದು ಘೋಷಿಸಿದರೂ ರಾಜಕೀಯ ಪಕ್ಷಗಳು ಹೀಗೆ ರಾಜಾರೋಷಾಗಿ ಬಂದ್ ಕರೆಯನ್ನು ಹೇಗೆ ಕೊಡುತ್ತವೆ? ಇಷ್ಟಕ್ಕೂ ಬಂದ್‌ಗಳನ್ನು ನಡೆಸುವುದು ಸರಿಯೇ? ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಅದರಲ್ಲೂ ಆಡಳಿತ ಪಕ್ಷಗಳು ಬಂದ್ ಕರೆ ಕೊಡುವುದು ಸಾಂವಿಧಾನಿಕವೇ?ನಮ್ಮ ದೇಶದ ಪ್ರಜಾಪ್ರಭುತ್ವದ ಅನೇಕ ದುರಂತಗಳಲ್ಲಿ ಬಂದ್ ಕೂಡಾ ಒಂದು. ಕಾನೂನನ್ನು ರಚಿಸುವವರೇ ಈ ದೇಶದ ಕಾನೂನನ್ನು ಮುರಿಯುವುದು ಒಂದು ಕ್ರೂರ ವ್ಯಂಗ್ಯ. ಕಾನೂನಿನ ಪಾಲನೆ ಮತ್ತು ಅನುಷ್ಠಾನ ಮಾಡಬೇಕಾದವರು ಕೂಡಾ ಕಾನೂನನ್ನು ಮುರಿಯುತ್ತಿರುತ್ತಾರೆ. ಅಧಿಕಾರಿಗಳು ಕಾನೂನಿನ ಉಲ್ಲಂಘನೆಗೆ ಬೇಕಾದ ವಾತಾವರಣ ಸೃಷ್ಟಿಸುತ್ತಾರೆ. ಶಾಲಾ-ಕಾಲೇಜು ಮಕ್ಕಳಿಗೆ ರಕ್ಷಣೆ ನೀಡಿ ಪಾಠ ನಡೆಯಲು ಅನುವು ಮಾಡಿಕೊಡುವ ಬದಲು, ಅವರಿಗೆ ಧೈರ್ಯ ತುಂಬುವ ಬದಲು ರಜೆ ಸಾರಿ ಅವರ ನೈತಿಕ ಸ್ಥೈರ್ಯವನ್ನು ಕುಂದಿಸುತ್ತಾರೆ.ವಾಹನಗಳಿಗೆ ಅವುಗಳ ಸಂಚಾರಕ್ಕೆ ಬೇಕಾದ ಬಂದೋಬಸ್ತು ಮಾಡುವ ಬದಲು ಸಂಚಾರವನ್ನು ನಿಷೇಧಿಸುತ್ತಾರೆ.ಮೊನ್ನೆಯ ಕರ್ನಾಟಕ ಬಂದ್‌ನಲ್ಲಿ ಬಂದ್ ಮುಗಿಯುವ ಹೊತ್ತಿಗೆ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ವಿಧಿಸಲಾಗಿತ್ತು. ಬಂದ್ ಕರೆ ನೀಡುವವರನ್ನು ಮುಂಜಾಗ್ರತಾ ಕ್ರಮವಾಗಿ ದಸ್ತಗಿರಿ ಮಾಡಿದರೆ ಉಳಿದವರು ಬಂಧನದ ಭೀತಿಯಲ್ಲಿ ರಸ್ತೆಗಿಳಿಯಲಾರರು. ಆದರೆ ಪೊಲೀಸರು ಅಮಾಯಕರ ಮೇಲೆ ಲಾಠಿ ಬೀಸಿ ದೊಡ್ಡವರನ್ನು ಬಂಧನವೆಂಬ ನಾಟಕದ ನಾಯಕರನ್ನಾಗಿಸುತ್ತಾರೆ.ಬಂದ್‌ಅನ್ನು ಸಮರ್ಥಿಸುವವರು ವಿರಳ.ಕರೆ ಕೊಟ್ಟವರು ಬಂದ್‌ಅನ್ನು ಯಶಸ್ವಿಗೊಳಿಸಲು ಬಲಾತ್ಕಾರದ ಎಲ್ಲ ತಂತ್ರಗಳನ್ನೂ ಬಳಸುತ್ತಾರೆ.ಮುಖ್ಯವಾಗಿ ರಾಜಕೀಯ ಪಕ್ಷಗಳಲ್ಲಿರುವ ಗೂಂಡಾಗಳು,ರೌಡಿಗಳು ಬೀದಿಬೀದಿ ಸುತ್ತಿ ಅಂಗಡಿಗಳನ್ನು ಮುಚ್ಚಿಸುತ್ತಾರೆ.ವಾಹನಗಳಿಗೆ ಕಲ್ಲೆಸೆಯುತ್ತಾರೆ; ಬೆಂಕಿಯಿಡುತ್ತಾರೆ. ಸಹಜ ಓಡಾಟವನ್ನು, ಬದುಕನ್ನು ಅಸಾಧ್ಯವಾಗಿಸುತ್ತಾರೆ.ಬಹಳಷ್ಟು ಜನರು ದಿನನಿತ್ಯದ ಆದಾಯವನ್ನು ನಂಬಿ ಬದುಕುವ ಕೂಲಿಕಾರ್ಮಿಕರು; ರಿಕ್ಷಾ ಚಾಲಕರು; ಬೀದಿಬದಿಯ ಚಿಕ್ಕಪುಟ್ಟ ಅಂಗಡಿ-ಹೋಟೆಲ್ ಉದ್ಯಮಿಗಳು. ಇವರಿಗೆ ಒಂದು ದಿನದ ಆದಾಯ ಖೋತಾ ಆಯಿತೆಂದರೆ ಆ ದಿನ ಏಕಾದಶಿ. ಹಾಲು, ಆಹಾರಧಾನ್ಯ ಮುಂತಾದ ದಿನನಿತ್ಯದ ಸಾಮಗ್ರಿಗಳನ್ನು ತರಬೇಕಾದವರಿಗೆ ಬಂದ್ ಭಾರೀ ಅನಿಷ್ಟ.ದೂರದ ಊರುಗಳಿಂದ ಬಂದು ರೈಲು, ಬಸ್ಸು ನಿಲ್ದಾಣಗಳಲ್ಲಿ ಇಳಿದವರು ವಾಹನ ಸೌಕರ್ಯವಿಲ್ಲದೆ ಪಡುವ ಪಾಡು ಯಾರಿಗೂ ಬೇಡ.ಬಹುತೇಕ ಜನರು ಬಂದ್ ಕುರಿತಂತೆ ಯಾವ ಪ್ರೀತಿಯನ್ನು ಹೊಂದಿಲ್ಲ. ಯಶಸ್ವೀ ಬಂದ್‌ಗಳ ಹಿಂದೆ ನಿಗೂಢ ಭೀತಿಯಿರುತ್ತದೆ.ಎಲ್ಲಿ ಯಾರು ನಮ್ಮ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿ ಹಲ್ಲೆ ಮಾಡುತ್ತಾರೆ ಎಂಬ ಭಯದ ವಾತಾವರಣ ಕಾರಣವಾಗಿ ಬಂದ್ ಯಶಸ್ವಿಯಾಗುತ್ತದೆಯೇ ವಿನಾ ಸ್ವಯಂಪ್ರೇರಣೆಯಿಂದಲ್ಲ.ಪ್ರಾಯಃ ಸ್ವತಂತ್ರ ಭಾರತದಲ್ಲಿ ಈ ಸಾರ್ವಜನಿಕ ಸತ್ಯಾಗ್ರಹವು ಸತ್ಯದ ಆಗ್ರಹಕ್ಕಿಂತ ಹೆಚ್ಚಾಗಿ ಸ್ವಹಿತ ಸಾಧನೆಗೆ, ಸ್ವಾರ್ಥಕಾರಣಕ್ಕಾಗಿ ಬಳಕೆಯಾಗುತ್ತಿದೆ. ಬಹುತೇಕ ಅದು ಹಿಂಸಾತ್ಮಕ ಸ್ವರೂಪವನ್ನು ಪಡೆದು ಕರೆಕೊಟ್ಟವರ ಹಿಡಿತವನ್ನು ಮೀರುತ್ತಿತ್ತು.ಪಶ್ಚಿಮ ಬಂಗಾಳದಲ್ಲಿ 60ರ ದಶಕದಲ್ಲಿ ಮುಷ್ಕರ, ಸತ್ಯಾಗ್ರಹ, ಬಂದ್  ಇವು ಇಲ್ಲದ ದಿನಗಳೇ ಇರುತ್ತಿರಲಿಲ್ಲ.ಇದರಿಂದಾಗಿ ಸಾರ್ವಜನಿಕ ಬೊಕ್ಕಸಕ್ಕೆ ಆದ ನಷ್ಟದ ಲೆಕ್ಕವೇ ಇರುತ್ತಿರಲಿಲ್ಲ.ಆಗ ಬಂದ್ ಕುರಿತಂತೆ ನಿರ್ದಿಷ್ಟವಾದ ಕಾನೂನಿನ ಹಿಡಿತವಿರಲಿಲ್ಲ. ಬಂದ್ ಎಂದರೆ ಪ್ರಜಾಪ್ರಭುತ್ವದ ಅನಿವಾರ್ಯ ಕೆಡುಕೆಂದೇ ಬಗೆಯಲಾಗುತ್ತಿತ್ತು.ಆದರೆ ಈಗ ಇಷ್ಟೊಂದು ತೀರ್ಪುಗಳಿದ್ದರೂ ಅವನ್ನು ಕಾಲಕಸವಾಗಿ ಕಂಡು ಬಂದ್‌ಗೆ ಕರೆಕೊಡುವ ರಾಜಕಾರಣಿಗಳನ್ನು, ರಾಜಕೀಯ ಪಕ್ಷಗಳನ್ನು ನಿಜಕ್ಕೂ ‘ಭಂಡ’ರೆಂದೇ ಕರೆಯಬೇಕು. ಚುನಾವಣೆಗಳಲ್ಲಿ ಗೆಲ್ಲುವುದಕ್ಕಾಗಿ ಮತ್ತು ಅಧಿಕಾರ ಹಿಡಿಯುವುದಕ್ಕಾಗಿ ಯಾವ ಕುತಂತ್ರವನ್ನೂ ಮಾಡಲು ಸಿದ್ಧವಾಗಿರುವ ರಾಜಕಾರಣಿಗಳು ಬಹಿರಂಗವಾಗಿ ಕಾನೂನಿನ ಇಂತಹ ಉಲ್ಲಂಘನೆ ಮಾಡುವುದಕ್ಕೆ ಕೇವಲ ದಂಡ ವಿಧಿಸಿದರೆ ಸಾಲದು.ಇದನ್ನು ದೇಶದ್ರೋಹವೆಂದು ಪರಿಗಣಿಸಬೇಕು. ಜಾಮೀನಿಲ್ಲದ ಅಪರಾಧವೆಂದು ಪರಿಗಣಿಸಬೇಕು ಮತ್ತು ಕೊಲೆ-ದರೋಡೆಗಳಿಗೆ ಸಮನಾದ ಶಿಕ್ಷೆಯನ್ನೇ ವಿಧಿಸಬೇಕು. ದೇಶವನ್ನು ಆವರಿಸಿದ ಅಕ್ರಮ, ಅನೈತಿಕತೆ ಮತ್ತು ಭ್ರಷ್ಟಾಚಾರದಂತೆ ಬಂದ್ ಕೂಡಾ ಒಂದು.ಬಂದ್ ಮತ್ತು ಅಂತಹ ಅನೇಕ ಅನಿಷ್ಟಗಳು ದೇಶ ಬಿಟ್ಟು ತೊಲಗದ ವಿನಾ ದೇಶ ಉದ್ಧಾರವಾಗದು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry