ಬಂದ್ ಕರೆಗೆ ನೀರಸ ಪ್ರತಿಕ್ರಿಯೆ

7

ಬಂದ್ ಕರೆಗೆ ನೀರಸ ಪ್ರತಿಕ್ರಿಯೆ

Published:
Updated:

ಯಾದಗಿರಿ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ಕೇಂದ್ರ ಹಾಗೂ ತಮಿಳು ನಾಡು ಸರ್ಕಾರಗಳ ಧೋರಣೆಯನ್ನು ಖಂಡಿಸಿ ಶನಿವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದನ್ನು ಹೊರತುಪಡಿಸಿ, ಬಂದ್‌ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಅಂಗಡಿ-ಮುಗ್ಗಟ್ಟುಗಳು ಬಾಗಿಲು ತೆರೆದಿದ್ದವು. ವಾಹನ ಸಂಚಾರ, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಬಂದ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ರಜೆಯ ಮೋಜು ಅನುಭವಿಸಿದರು.ಸಾರಿಗೆ ಸಂಸ್ಥೆಯ ಬಸ್‌ಗಳ ಓಡಾಟ, ನಗರದಾದ್ಯಂತ ಅಟೋ ರಿಕ್ಷಾಗಳ ಸಂಚಾರ, ಪೆಟ್ರೋಲ್ ಬಂಕ್‌ಗಳು, ತರಕಾರಿ ಮಾರುಕಟ್ಟೆ, ವಿವಿಧ ಅಂಗಡಿಗಳು ಎಂದಿನಂತೆ ವಹಿವಾಟು ನಡೆಸಿದವು. ಇದರಿಂದಾಗಿ ಜಿಲ್ಲೆಯ ಜನರಿಗೆ ಕಾವೇರಿ ಬಂದ್‌ನ ಬಿಸಿ ತಾಗಲಿಲ್ಲ.ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ), ಜೈಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಕರ್ನಾಟಕ, ಶ್ರೀರಾಮಸೇನೆ, ಜಯ ಕರ್ನಾಟಕ, ಕಸ್ತೂರಿ ಕನ್ನಡ ಜನಪರ ವೇದಿಕೆ, ಕಲ್ಯಾಣ ಕರ್ನಾಟಕ ಯುವ ಸೇನೆ ಸೇರಿದಂತೆ ಹಲವಾರು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದ ರೈಲ್ವೆ ನಿಲ್ದಾಣದ ಎದುರು ಉರುಳು ಮತ್ತು ಉಗುಳು ಸೇವೆ ನಡೆಸುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ಪ್ರಧಾನಿ ಮನಮೋಹನ ಸಿಂಗ್‌ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕಾವೇರಿ ನೀರಿಗಾಗಿ ಪ್ರಾಣ ಬಿಡಲು ಸಿದ್ಧ. ಆದರೆ ಹನಿ ನೀರು ಕೊಡುವುದಿಲ್ಲ ಎಂಬ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಮೂಲಕ ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಎರಡು ವರ್ಷಗಳಿಂದ ರಾಜ್ಯದಲ್ಲಿ ಸತತ ಬರಗಾಲ ಆವರಿಸಿದೆ. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀರು ಬಿಡುವಂತೆ ಸೂಚನೆ ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಮುಂಬರುವ ದಿನಗಳಲ್ಲಿ ನಾಡಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಜನ ಮತ್ತು ಜಾನುವಾರುಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲ ತಿಳಿದಿದ್ದರೂ, ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತೀವ್ರ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಮಳೆಗಾಲ ಮುಗಿಯುವ ಹಂತಕ್ಕೆ ಬಂದಿದ್ದು, ಜಲಾಶಯಗಳು ಖಾಲಿಯಾಗಿವೆ. ತಮಿಳುನಾಡಿಗೆ ನೀರು ಬಿಟ್ಟಲ್ಲಿ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ಬರಲಿದೆ. ನೀರಿನ ಬವಣೆ ಬಗ್ಗೆ ಕೇಂದ್ರಕ್ಕೆ ಸಂಪೂರ್ಣ ಮಾಹಿತಿ ಇದೆ. ಆದರೂ ತನಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ ಎಂದು ಕಿಡಿಕಾರಿದರು.ಕರವೇ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ, ಜಯಕರ್ನಾಟಕ ಸಂಘಟನೆ ಭೀಮಾಶಂಕರ ಆಲ್ದಾಳ್, ಜೈಕರವೇ ಸಂಘಟನೆಯ ಶ್ರೀಕಾಂತ ಭೀಮನಳ್ಳಿ, ಕನ್ನಡ ಸೇನೆ ಕರ್ನಾಟಕದ ರಾಜು ಕುಂಬಾರ, ಕಲ್ಯಾಣ ಕರ್ನಾಟಕ ಯುವ ಸೇನೆಯ ಅಂಬರೀಶ ಬಿಲ್ಲವ, ಕಸ್ತೂರಿ ಕನ್ನಡ ಜನಪರ ವೇದಿಕೆಯ ಮಹಾದೇವಯ್ಯ ಸ್ವಾಮಿ, ದೇವು ಪಾಟೀಲ್, ಸಿದ್ಧಾರಡ್ಡಿ ತಡಬಿಡಿ ಮುಂತಾದವರು ನೇತೃತ್ವ ವಹಿಸಿದ್ದರು.ಅಣಕು ಶವಯಾತ್ರೆ:

ಬಂದ್‌ಗೆ ಬೆಂಬಲ ವ್ಯಕ್ತಪಡಿಸದ ಕರ್ನಾಟಕ ರಕ್ಷಣಾ ವೇದಿಕೆ ((ನಾರಾಯಣಗೌಡ ಬಣ)ದ ಕಾರ್ಯಕರ್ತರು ನಗರದ ಸುಭಾಷ್ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿದರು.ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಅಧಿಕಾರಕ್ಕೆ ಬಂದಾಗಿನಿಂದಲೂ ಕಾವೇರಿ ವಿಷಯ ಮುಂದಿಟ್ಟುಕೊಂಡು ಪದೇ ಪದೇ ತಗಾದೆ ತೆಗೆಯುತ್ತಲೇ ಬಂದಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಪರೋಕ್ಷ ಬೆಂಬಲ ನೀಡುತ್ತಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಇಂತಹ ಕ್ರಮ ಖಂಡನೀಯ ಎಂದು ದೂರಿದರು.ಕರವೇ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರ್ಜುನ ಪವಾರ್, ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಮಿಲ್ಟ್ರಿ, ಹಣಮಂತ ನಾಯಕ, ಶಿವಕುಮಾರ ಕಾನಗಡ್ಡಾ, ಶಹಾಪುರ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಸಾಲಿಮನಿ, ಭೀಮು ಶಕಾಪುರ, ಬಸವರಾಜ ನಾಯಕ, ವಿದ್ಯಾರ್ಥಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಕರಬಸಪ್ಪ ಬೀರಾಳ, ಮಲ್ಲು ವರ್ಕನಳ್ಳಿ, ಹಣಮಂತ ಗುಂಡಳ್ಳಿ, ರಫೀಕ್ ವಡಗೇರಾ, ರಾಜು ಸಗರ, ಅಜಮೀರ್, ಲಿಂಗು ತೇಕರಾಳ, ಹಣಮಂತ ಪಾಟೀಲ್ ತೇಕರಾಳ, ಹಣಮಂತ ಖಾನಳ್ಳಿ, ಕೃಷ್ಣ ಮಡಿವಾಳ, ಅಯ್ಯಪ್ಪ ಜಾಲಿಬೆಂಚಿ, ಹಣಮಂತ ತಡಿಬಿಡಿ, ಮಾರುತಿ ನಾಯಕ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry