ಬಂದ್: ಜಿಲ್ಲೆಯಲ್ಲಿ ಬಹುತೇಕ ಯಶಸ್ವಿ

7

ಬಂದ್: ಜಿಲ್ಲೆಯಲ್ಲಿ ಬಹುತೇಕ ಯಶಸ್ವಿ

Published:
Updated:

ದಾವಣಗೆರೆ: ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರ ಆರೋಪದ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ ರಾಜ್ಯಪಾಲರ ಧೋರಣೆಯನ್ನು ಖಂಡಿಸಿ ಶುಕ್ರವಾರ ನಡೆದ ಬಂದ್ ನಗರವೂ ಸೇರಿದಂತೆ ನಾಲ್ಕು ತಾಲ್ಲೂಕುಗಳಲ್ಲಿ ಬಹುತೇಕ ಯಾಸ್ವಿಯಾಗಿದೆ.ಹರಪನಹಳ್ಳಿಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂತು. ಉಳಿದಂತೆ ದಾವಣಗೆರೆ, ಚನ್ನಗಿರಿ, ಹೊನ್ನಾಳಿ ಹಾಗೂ ಹರಿಹರದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.ಹೊನ್ನಾಳಿ ಬಸ್‌ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಎರಡು ಬಸ್‌ಗಳಿಗೆ ಶನಿವಾರ ಬೆಳಗಿನ ಜಾವ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬಹುತೇಕ ಭಾಗ ಸುಟ್ಟು ಕರಕಲಾಗಿವೆ. ಗುಲ್ಬರ್ಗದಿಂದ ದಾವಣಗೆರೆಗೆ ಬರುತ್ತಿದ್ದ ರಾಜಹಂಸ ಬಸ್‌ಗೆ ನಗರದ ಬಳಿ ಕಲ್ಲು ತೂರಿದ ಪರಿಣಾಮ ಮುಂದಿನ ಗಾಜು ಒಡೆದು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜಯದೇವ ವೃತ್ತದ ಬಳಿ ಖಾಸಗಿ ಬಸ್ ಮೇಲೆ ಕಲ್ಲು ತೂರಲಾಗಿದೆ. ಉಳಿದಂತೆ ಎಲ್ಲೆಡೆ ಬಂದ್ ಶಾಂತಿಯುತವಾಗಿತ್ತು.ಬೆಳಿಗ್ಗೆಯಿಂದಲೇ ವಾಣಿಜ್ಯ ನಗರಿ ದಾವಣಗೆರೆಯ ಬಹುತೇಕ ಮಾರ್ಗಗಳಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಕೈ ಜೋಡಿಸಿದರು. ಕೆಲ ಭಾಗಗಳಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. ಅರುಣ ವೃತ್ತ, ಯುಬಿಡಿಟಿ ಕಾಲೇಜು ಮುಂಭಾಗ, ಗಾಂಧಿ ವೃತ್ತಗಳಲ್ಲಿ ಟಯರ್ ಸುಟ್ಟು ಹಾಗೂ ರಾಜಪಾಲರ ಪ್ರತಿಕೃತಿ ದಹಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಬಸ್, ಲಾರಿ, ಆಟೋರಿಕ್ಷಾ ಸೇರಿದಂತೆ ಸರಕು ಸಾಗಣೆ ಹಾಗೂ ಪ್ರಯಾಣಿಕರ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ವಿರಳವಾಗಿ ಸಂಚರಿಸಿದವು. ತಡರಾತ್ರಿ ರಜೆ ಘೊಷಿಸಿದ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿಗಳು ಬೆಳಿಗ್ಗೆ ಶಾಲಾ-ಕಾಲೇಜುಗಳಿಗೆ ಹಾಜರಾಗಿದ್ದರು. ಮರಳಿ ವಾಪಸ್ ಮನೆಗೆ ಹೋಗಲು ಪರದಾಡಿದರು.ಪ್ರಯಾಣಿಕರ ಪರದಾಟ: ಬಸ್‌ಗಳು ರಸ್ತೆಗೆ ಇಳಿಯದ ಪರಿಣಾಮ ವಿವಿಧೆಡೆ ಪ್ರಯಾಣಿಸಬೇಕಿದ್ದವರು ಪರದಾಡಿದರು. ಬಂದ್ ಬಗ್ಗೆ ಮಾಹಿತಿ ಇದ್ದ ಬಹುತೇಕ ಮಂದಿ ಮನೆಯಿಂದ ಹೊರಕ್ಕೆ ಬರಲಿಲ್ಲ. ಮಾಹಿತಿ ಇಲ್ಲದವರು ನಿಲ್ದಾಣಗಳಿಗೆ ಬಂದು ವಾಪಸ್ ಮರಳಿದರು. ಬೆಳಿಗ್ಗೆಯೇ ನಗರಕ್ಕೆ ಆಗಮಿಸಿದ್ದ ರೈತರು ಹಾಗೂ ವಿದ್ಯಾರ್ಥಿಗಳು ಬಸ್ ಇಲ್ಲದೇ ಪರಿತಪಿಸಿದರು. ಹುಬ್ಬಳ್ಳಿ, ಬೀರೂರು, ಅರಸೀಕೆರೆ, ಬೆಂಗಳೂರು ಮಾರ್ಗದಲ್ಲಿ ಸಂಚರಿಸುವವರು ರೈಲುಗಳನ್ನು ಆಶ್ರಯಿಸಿದರು. ರೈಲು ಸಂಚಾರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಖಾಸಗಿ ಬಸ್‌ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದರೆ, ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಎಲ್ಲ ಬಸ್‌ಗಳು ನಿಲುಗಡೆ ಮಾಡಿದ್ದರು.  ಆಸ್ಪತ್ರೆಗಳು, ಔಷಧ ಅಂಗಡಿಗಳ ಸೇವೆ ಅಬಾಧಿತವಾಗಿದ್ದು, 108 ಸೇರಿದಂತೆ ಅಂಬುಲೆನ್ಸ್‌ಗಳು ರೋಗಿಗಳ ಸೇವೆಗೆ ನೆರವಾದವು.ಹರಿಹರ

 ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ನಡೆದ ಬಂದ್ ಕಾರ್ಯಕ್ರಮ ಬಹುತೇಕ ಯಶಸ್ವಿಯಾಯಿತು. ಬೆಳಿಗ್ಗೆ 10ರಿಂದಲೇ ಬಿಜೆಪಿ ಕಾರ್ಯಕರ್ತರು ಶಾಸಕ ಬಿ.ಪಿ. ಹರೀಶ್ ಅವರ ನೇತೃತ್ವದಲ್ಲಿ ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಮಹಾತ್ಮ ಗಾಂಧಿ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವು ಭಾಗದಲ್ಲಿ ಜನರು ಸ್ವಯಂಪ್ರೇರಣೆಯಿಂದ ಬಂದ್ ಆಚರಿಸಿದರೆ, ಕೆಲವು ಭಾಗಗಳಲ್ಲಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಬಂದ್ ಮಾಡಿದರು. ತರಕಾರಿ, ಹಾಲುಹಣ್ಣು ಹಾಗೂ ಔಷಧಿ ಅಂಗಡಿಗಳು ನಿರಾಂತಕವಾಗಿ ಕಾರ್ಯ ನಿರ್ವಹಿಸಿದವು.ಬಸ್‌ನಿಲ್ದಾಣ ಬಸ್‌ಗಳಲ್ಲಿದೇ ಬಿಕೋ ಎನ್ನುತ್ತಿತ್ತು. ಹೊರ ಭಾಗಗಳಿಂದ ಬಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಹೈದರಾಬಾದ್‌ನಿಂದ ಬಂದ ಪ್ರಯಾಣಿಕರ ತಂಡವೊಂದು ಶಿವಮೊಗ್ಗಕ್ಕೆ ಹೋಗಲು ಬಸ್‌ಗಳಿಲ್ಲದ ಕಾರಣ, ಹೆಚ್ಚುವರಿ ಹಣ ನೀಡಿ ಖಾಸಗಿ ಕ್ರೂಸರ್ ಒಂದನ್ನು ಬಾಡಿಗೆ ಪಡೆದು ಹಿಡಿ ಶಾಪ ಹಾಕುತ್ತಾ ತೆರಳಿದರು. ಕೆಲವು ಹೋಟಲ್, ಬೀಡಾ ಅಂಗಡಿಗಳು ಹಾಗೂ ಬಾರ್‌ಗಳ ಮೇಲೆ ಬಂದ್, ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಬಿಜೆಪಿ ಬಂದ್‌ಗೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸದೇ ಇದ್ದುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು. ಪ್ರತಿಭಟನೆಯಲ್ಲಿ ಬಿಜೆಪಿ ತಾಲ್ಲೂಕು, ನಗರ ಘಟಕ, ಮಹಿಳಾ ಮೋರ್ಚಾ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಚನ್ನಗಿರಿಶಾಸಕ ಮಾಡಾಳ್ ವಿರೂಪಾಕ್ಷಪ್ಪ ನೇತೃತ್ವದಲ್ಲಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರು  ಬೃಹತ್ ಪ್ರತಿಭಟನೆ ನಡೆಸಿದರು.  ರಾಜ್ಯಪಾಲರನ್ನು ಕೇಂದ್ರ ಸರ್ಕಾರ ತಕ್ಷಣ ವಾಪಸ್ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಾಂತ ಬಿಜೆಪಿ ತೀವ್ರ ಹೋರಾಟ ನಡೆಸುತ್ತದೆ ಎಂದು ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ಕಾರ್ಯಕರ್ತರು ಟೈರ್ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಹುತೇಕ ಅಂಗಡಿ- ಮುಂಗಟ್ಟು ಮಾಲೀಕರು ಸ್ವಯಂಪ್ರೇರಿತರಾಗಿ ಬಾಗಿಲುಗಳನ್ನು ಹಾಕಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಕೆಲವು ಅಂಗಡಿಗಳನ್ನು ಬಿಜೆಪಿ ಕಾರ್ಯಕರ್ತರು ಬಲವಂತದಿಂದ ಮುಚ್ಚಿಸಿದ ಘಟನೆ ಕೂಡಾ ನಡೆಯಿತು.

ತಾಲ್ಲಕು ಬಿಜೆಪಿ ಅಧ್ಯಕ್ಷ ವಡ್ನಾಳ್ ರುದ್ರಸ್ವಾಮಿ, ಮುಖಂಡರಾದ ಪುಷ್ಪಲತಾ, ಕೆ.ಪಿ.ಎಂ. ಶಿವಲಿಂಗಯ್ಯ, ಬಷೀರ್ ಉನ್ನಿಸಾ, ಟಿ.ವಿ. ರಾಜು,  ವಿಜಯಕುಮಾರ್, ನಂಜಯ್ಯಕುಮಾರ್, ಹಿರೇಮಳಲಿ ಲೋಕೇಶಪ್ಪ, ಕೆ.ಜಿ. ಬಸವಲಿಂಗಪ್ಪ, ಎಚ್.ವಿ. ರುದ್ರಪ್ಪ, ಸಿದ್ದೇಶ್, ಸುರೇಶಾಚಾರ್, ರಾಜುಕರಡೇರ್, ಡಿ. ಚಿಕ್ಕಪ್ಪ, ಎಲ್.ಎಂ. ರೇಣುಕಾ, ಮತ್ತಿತರರು ಪಾಲ್ಗೊಂಡಿದ್ದರು.

 

ರಾಜ್ಯಪಾಲರ ವರ್ತನೆಗೆ ಜಿಲ್ಲಾ ಬಿಜೆಪಿ ಖಂಡನೆ

ದಾವಣಗೆರೆ: ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರ ಆರೋಪದ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ ರಾಜ್ಯಪಾಲರ ಧೋರಣೆ ರಾಜಕೀಯ ಪ್ರೇರಿತ ಎಂದು ಜಿಲ್ಲಾ ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದರು.ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಗುರುಸಿದ್ದನಗೌಡ, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ರಾಜ್ಯಪಾಲರ ವಿರುದ್ಧ ಗುಡುಗಿದರು.ಎರಡೂವರೆ ವರ್ಷದ ಹಿಂದೆ ಬಿಜೆಪಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ನಂತರ ರಾಜ್ಯಪಾಲರು ಒಂದಿಲ್ಲೊಂದು ನೆಪ ಮಾಡಿಕೊಂಡು ಸರ್ಕಾರಕ್ಕೆ ಕಿರಿಕಿರಿ ಮಾಡುತ್ತಾ ಬಂದಿದ್ದಾರೆ. ಇಲ್ಲಸಲ್ಲದ ತಕರಾರು ತೆಗೆದು ಸಮರ್ಪಕವಾಗಿ ಆಡಳಿತ ನಡೆಸಲು ಅಡ್ಡಗಾಲು ಹಾಕುತ್ತಿದ್ದಾರೆ. ಸರ್ಕಾರವನ್ನು ವಿನಾ ಕಾರಣ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಈಚೆಗೆ ನಡೆದ ಪಂಚಾಯ್ತಿ ಚುನಾವಣೆಯೂ ಸೇರಿದಂತೆ ಹಲವು ಚುನಾವಣೆಗಳಲ್ಲಿ ಬಿಜೆಪಿ ನಿರಂತರವಾಗಿ ವಿಜಯ ಸಾಧಿಸುತ್ತಿರುವುದು ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನೂ ಎರಡು ವರ್ಷ ಬಿಜೆಪಿ ಅಧಿಕಾರದಲ್ಲಿ ಮುಂದುವರಿದರೆ ಕನಿಷ್ಠ 20 ವರ್ಷ ವಿರೋಧ ಪಕ್ಷದ ಸ್ಥಾನವೇ ಗತಿ ಎನ್ನುವುದು ಮನವರಿಕೆಯಾಗಿದೆ. ಈ ಕಾರಣದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ರೀತಿ ಪಿತೂರಿ ಮಾಡಿಸುತ್ತಿವೆ ಎಂದು ದೂರಿದರು.ರಾಜ್ಯದಲ್ಲಿ ನಡೆದಿದೆ ಎನ್ನಲಾದ ಭೂಹಗರಣಗಳ ಕುರಿತು ನ್ಯಾಯಮೂರ್ತಿ ಪದ್ಮರಾಜ್ ಸಮಿತಿ ಹಾಗೂ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ. ಅದರ ವರದಿ ಬರುವ ಮುನ್ನವೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿರುವುದು ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರು ರಾಜಭವನದ ಪಾವಿತ್ರ್ಯವನ್ನು ಹಾಳು ಮಾಡುತ್ತಿದ್ದಾರೆ. ಕೂಡಲೇ, ಅವರನ್ನು ರಾಷ್ಟ್ರಪತಿ ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಪಾಲಿಕೆ ಮೇಯರ್ ಎಂ.ಜಿ. ಬಕ್ಕೇಶ್, ‘ದೂಡಾ’ ಅಧ್ಯಕ್ಷ ಯಶವಂತರಾವ್ ಜಾಧವ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

ಸರ್ಕಾರ ವಜಾಕ್ಕೆ ಒತ್ತಾಯ

ದಾವಣಗೆರೆ: ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿ ಡಿಎಸ್‌ಎಸ್ ಹಾಗೂ ಇನ್ನಿತರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.ಭೂಹಗರಣ ಸೇರಿದಂತೆ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ವಿರುದ್ಧ  ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಸರಿಯಾಗಿಯೇ ಇದೆ. ಇಂತಹ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು. ಅದಕ್ಕೆ ರಾಜ್ಯದ ಎಲ್ಲ ಪ್ರಗತಿಪರ ಸಂಘಟನೆಗಳ ಬೆಂಬಲವಿದೆ ಎಂದು ಘೊಷಿಸಿದರು.ಅಧಿಕಾರ ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಬಿಜೆಪಿ ರಾಜ್ಯ ಬಂದ್‌ಗೆ ಕರೆ ನೀಡಿದೆ. ಸಾವಿರಾರು ಕೋಟಿ ರೂ ನಷ್ಟಕ್ಕೆ ನೇರ ಹೊಣೆಯಾಗಿದೆ. ಬಂದ್ ಸಂದರ್ಭದಲ್ಲಿ ಆಗಿರುವ ಸಾರ್ವಜನಿಕ ಆಸ್ತಿ ನಷ್ಟಕ್ಕೆ ಬಿಜೆಪಿ ಹಾಗೂ ರಾಜ್ಯ ಸರ್ಕಾರ ನೇರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.ಪ್ರಗತಿಪರ ಸಂಘಟನೆಯ ಮುಖಂಡರಾದ ಆಲೂರು ಲಿಂಗರಾಜ್, ಹೆಗ್ಗೆರೆ ರಂಗಪ್ಪ, ಚಂದ್ರಶೇಖರ ತೋರಣ ಘಟ್ಟ, ಕುಂದುವಾಡ ಮಂಜುನಾಥ್, ಹೂವಿನಮಡು ಅಂಜಿನಪ್ಪ, ಹೆಮ್ಮನಬೇತೂರು ಅಂಜನಪ್ಪ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry