ಬಂದ್ ದಿನ ಏನೇನಾಯ್ತು...?

7

ಬಂದ್ ದಿನ ಏನೇನಾಯ್ತು...?

Published:
Updated:

ಡಿಎಸ್‌ಎಸ್‌ನಿಂದ ಮಾನವ ಸರಪಳಿ

ದಲಿತ ಸಂಘರ್ಷ ಸಮಿತಿ ಸದಸ್ಯರು ಶನಿವಾರ ಕಮಲಾನಗರದಿಂದ ಶಂಕರಮಠ ವೃತ್ತದವರೆಗೆ ಜಾಥಾ ನಡೆಸಿದರು. ಶಂಕರಮಠ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಮಿತಿಯ ರಾಜ್ಯ ಘಟಕದ ಸಂಚಾಲಕ ಸಿದ್ದಲಿಂಗಯ್ಯ, ಜಿಲ್ಲಾ ಘಟಕದ ಸಂಚಾಲಕ ಕೃಷ್ಣಮೂರ್ತಿ ಸೇರಿದಂತೆ ಹಲವರು ಜಾಥಾದಲ್ಲಿ ಪಾಲ್ಗೊಂಡಿದ್ದರು.ರೈಲು ತಡೆ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಚೆನ್ನೈ ಎಕ್ಸ್‌ಪ್ರೆಸ್ ರೈಲು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಮೇಖ್ರಿ ವೃತ್ತದಿಂದ ಜಾಥಾ ನಡೆಸಿದರು. ನಂತರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು ನಗರ ರೈಲು ನಿಲ್ದಾಣವನ್ನು ಸೇರಿ, ಮಧ್ಯಾಹ್ನ ಒಂದು ಗಂಟೆಗೆ ರೈಲು ತಡೆದರು. ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆಗಳನ್ನು ಕೂಗಿದರು.ಶೆಟ್ಟರ್ ನಿವಾಸಕ್ಕೆ ಮುತ್ತಿಗೆ: ಬಂಧನ

`ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಗೃಹ ಕಚೇರಿ ಕೃಷ್ಣಾಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಜನಪರ ವೇದಿಕೆ ಅಧ್ಯಕ್ಷ ವಾಟಾಳ್ ನಾಗರಾಜ್, ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಸೇರಿದಂತೆ ವಿವಿಧ ಸಂಘಟನೆಗಳ 40 ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.ಇದೇ ರೀತಿ ನಗರದಾದ್ಯಂತ ಶನಿವಾರ 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು~ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.ಕೃಷ್ಣ, ಮೊಯಿಲಿ ಮನೆಗೆ ಮುತ್ತಿಗೆ: ಬಂಧನ

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಜಯ ಕರ್ನಾಟಕ ಸಂಘಟನೆಯ 28 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.` ಎಸ್.ಎಂ.ಕೃಷ್ಣ ಅವರಿಗೆ ಇಲ್ಲಿನ ವಾಸ್ತವ ಸ್ಥಿತಿ ಗೊತ್ತಿದೆ. ಅದನ್ನು ಪ್ರಧಾನಮಂತ್ರಿ ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ಸಹ ಅವರು ಮಾಡಿಲ್ಲ~ ಎಂದು ಆರೋಪಿಸಿ ಸದಾಶಿವನಗರದಲ್ಲಿರುವ  ಕೃಷ್ಣ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಅವರನ್ನು ಬಂಧಿಸಿದ ಪೊಲೀಸರು, ಅವರನ್ನು ಆಡುಗೋಡಿ ಮೈದಾನಕ್ಕೆ ಕರೆದೊಯ್ದು ಸಂಜೆ ಬಿಡುಗಡೆ ಮಾಡಿದರು.ಕರ್ನಾಟಕ ಜನಪರ ವೇದಿಕೆ ಸದಸ್ಯರು ನಗರದ ಡಾಲರ್ಸ್‌ ಕಾಲೊನಿಯಲ್ಲಿರುವ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ 21ಮಂದಿಯನ್ನು ಸಂಜಯನಗರ ಪೊಲೀಸರು ಬಂಧಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry