ಸೋಮವಾರ, ಜೂಲೈ 13, 2020
28 °C

ಬಂದ್ ಪರಿಣಾಮ: ಬಸವಳಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಶನಿವಾರ ಬಿಜೆಪಿ ಕರೆ ನೀಡಿದ್ದ ಬಂದ್ ಸಾಗರದಲ್ಲಿ ಬಹುತೇಕ ಯಶಸ್ವಿಯಾಯಿತು. ಬೆಳಿಗ್ಗೆ 7 ಗಂಟೆಯಿಂದಲೇ ಬಿಜೆಪಿ ಕಾರ್ಯಕರ್ತರು ನಗರದ ಪ್ರಮುಖ ವೃತ್ತಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಾಕುವ ಮೂಲಕ ಸಾರ್ವಜನಿಕರಲ್ಲಿ ಭೀತಿಯನ್ನು ಸೃಷ್ಟಿಸಿದ್ದರು. ಬೆಳಿಗ್ಗಿನಿಂದಲೂ ಬಸ್‌ಗಳ ಸಂಚಾರ ಇಲ್ಲದೇ ಇದ್ದುದ್ದರಿಂದ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಪರದಾಡಬೇಕಾಯಿತು.ಶಾಲಾ-ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಿಸದೆ ಇದ್ದರೂ ಅನೇಕ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳಿಗೆ ಬರುವುದು ಬೇಡ ಎಂಬ ಸೂಚನೆ ರವಾನಿಸಿದ್ದರಿಂದ ಎಲ್ಲಿಯೂ ತರಗತಿಗಳು ನಡೆಯಲಿಲ್ಲ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲು ಮುಂದಾಗಿದ್ದಾಗ ಬಿಜೆಪಿ ಕಾರ್ಯಕರ್ತರು ಕಚೇರಿಗಳಿಗೆ ತೆರಳಿ ಕೆಲಸ ಮಾಡದಂತೆ ತಾಕೀತು ಮಾಡಿದರು. ಇದರಿಂದಾಗಿ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಯಲಿಲ್ಲ.ಬಿಜೆಪಿ ಕಾರ್ಯಕರ್ತರು ಕೆಲವು ವಾಹನಗಳಲ್ಲಿ ಘೋಷಣೆ ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಎಲ್ಲೆಲ್ಲಿ ಬಂದ್ ಮಾಡಿಲ್ಲ ಅಲ್ಲಿಗೆ ತೆರಳಿ ಬಂದ್ ಮಾಡುವಂತೆ ಒತ್ತಾಯ ಹೇರಿದರು. ಬಿ.ಎಚ್. ರಸ್ತೆಯಲ್ಲಿ ಕೋಳಿಮಾಂಸ ಮಾರಾಟದ ಅಂಗಡಿಯೊಂದನ್ನು ಬಂದ್ ಮಾಡದೇ ಇದ್ದುದ್ದಕ್ಕೆ ಸ್ಥಳದಲ್ಲಿ ಧರಣಿ ಕುಳಿತು ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು. ಮತ್ತೊಂದು ಗುಂಪು ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿತು.ಈ ಹಂತದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಕೋಳಿಮಾಂಸ ಮಾರಾಟ ಅಂಗಡಿಯ ಬಾಗಿಲನ್ನು ಮುಚ್ಚಿದ್ದರಿಂದ ಸಿಟ್ಟಾದ ಕೆಲವರು ಆತನ ಮೇಲೆ ಹಲ್ಲೆಗೆ ಮುಂದಾದರು. ಇದರಿಂದ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ನಂತರ, ಸಾಗರ್ ಹೋಟೆಲ್ ವೃತ್ತದಲ್ಲಿ ಬಿಜೆಪಿ ಮುಖಂಡರು ಬಹಿರಂಗ ಸಭೆ ನಡೆಸಿ ರಾಜ್ಯಪಾಲರ ವರ್ತನೆಯನ್ನು ಖಂಡಿಸಿದರು.ಬಿಜೆಪಿ ಮುಖಂಡ ಟಿ.ಡಿ. ಮೇಘರಾಜ್, ವಿ. ಮಹೇಶ್, ರಾಧಾಕೃಷ್ಣ ಬೇಂಗ್ರೆ, ಸತೀಶ್‌ಬಾಬು, ಕೆ.ಆರ್. ಗಣೇಶ್‌ಪ್ರಸಾದ್, ಪ್ರಸನ್ನ ಕೆರೆಕೈ ಭಾಗವಹಿಸಿದ್ದರು.ಬೀದಿಗಿಳಿದ ಕಾರ್ಯಕರ್ತರು

ಭದ್ರಾವತಿ: ಬಂದ್‌ಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಬೆಳಿಗ್ಗೆಯೇ ಕಾರ್ಯಕರ್ತರು ಪ್ರಮುಖ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು.ಬೈಪಾಸ್ ರಸ್ತೆಗೆ ತೆರಳಿ ಅಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತಡೆ ಹಾಕಿ ಶಿವಮೊಗ್ಗಕ್ಕೆ ವಾಪಸ್ ಕಳುಹಿಸಿದ ಕಾರ್ಯಕರ್ತರು ಈ ಸಂದರ್ಭದಲ್ಲಿ ಎರಡು ಬಸ್‌ಗೆ ಕಲ್ಲು ತೂರಿ ಗ್ಲಾಸ್ ಒಡೆದರು.ರಂಗಪ್ಪ ವೃತ್ತ ಹಾಗೂ ಸಂತೇ ಮೈದಾನ ಪ್ರದೇಶದ ಎರಡು ಅಂಗಡಿಗೆ ದುಷ್ಕರ್ಮಿಗಳು ಕಲ್ಲು ತೂರಿದ ಕಾರಣ  ಗಾಜುಗಳು ಒಡೆದಿರುವ ಘಟನೆ ಹೊರತುಪಡಿಸಿ ಬೇರಾವುದೇ ಅಹಿತಕರ ಘಟನೆ ನಡೆದಿರುವುದಿಲ್ಲ.ತಾ.ಪಂ, ನಗರಸಭೆ ಹಾಗೂ ತಾಲ್ಲೂಕು ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು. ಇಲ್ಲಿಗೂ ಸಹ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿಸುವಲ್ಲಿ ಯಶಸ್ವಿಯಾದರು. ಆದರೆ, ಕೆಲವು ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದು ಕಂಡುಬಂತು.  ದ್ವಿಚಕ್ರ ವಾಹನ ರ್ಯಾಲಿ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುತ್ತಾ ಅವರನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕರೆಸಿಕೊಳ್ಳುವಂತೆ ಆಗ್ರಹಿಸಿದರು.ಬೆಳಿಗ್ಗೆ 8.5ಕ್ಕೆ ಆಗಮಿಸಿದ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲಿಗೆ ಅಂಬೇಡ್ಕರ್ ವೃತ್ತದ ಮೇಲ್ಸೆತುವೆ ಮೇಲೆ ತಡೆ ಹಾಕಿದ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರ ಧೋರಣೆ ವಿರುದ್ಧ ಘೋಷಣೆ ಕೂಗಿದರು. ಅಲ್ಲಿ ಸುಮಾರು ಆರು ನಿಮಿಷಗಳ ಕಾಲ ತಡೆ ಹಾಕಲಾಗಿತ್ತು.ಸಿಎಂ ಕ್ಷೇತ್ರದಲ್ಲಿ ಬಂದ್ ಯಶಸ್ವಿ

ಶಿಕಾರಿಪುರ:  ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡುವುದಕ್ಕೆ ರಾಜ್ಯಪಾಲರು ಅನುಮತಿ ನೀಡಿರುವ ಕ್ರಮ ಖಂಡಿಸಿ ಬಿಜೆಪಿ ಶನಿವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬಂದ್ ಹಿನ್ನೆಲೆಯಲ್ಲಿ ಯಾವುದೇ ಶಾಲಾ-ಕಾಲೇಜುಗಳು ತೆರೆದಿರಲಿಲ್ಲ. ಬಸ್‌ಸಂಚಾರ ಸಂಪೂರ್ಣ ನಿಲುಗಡೆಯಾಗಿತ್ತು. ಬಿಜೆಪಿ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ಬಸ್‌ನಿಲ್ದಾಣದ ವೃತ್ತದಲ್ಲಿ ರಾಜ್ಯಪಾಲರ ಪ್ರತಿಕೃತಿ ದಹಿಸುವ ಮೂಲಕ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ವಾರದ ಸಂತೆಯ ದಿನವೇ ಬಂದ್ ನಡೆಸಿದ್ದರಿಂದಾಗಿ ತಾಲ್ಲೂಕಿನ ಜನರು ಸಾಕಷ್ಟು ಪರದಾಡುವಂತಾಯಿತು. ತಾವು ಬೆಳೆದ ತರಕಾರಿಗಳೊಂದಿಗೆ ಆಗಮಿಸಿದ್ದ ರೈತರನ್ನು ಬಲವಂತವಾಗಿ ವಾಪಸ್ ಕಳುಹಿಸಲಾಯಿತು. ಕೆಲ ರೈತರು ಕೇರಿಗಳಿಗೆ ತೆರಳಿ ಮಾರಾಟ ಮಾಡುತ್ತಿರುವಾಗಲೂ ಕಾರ್ಯಕರ್ತರು ಅದಕ್ಕೆ ಅಡ್ಡಿಪಡಿಸಿದರು. ಇದರಿಂದಾಗಿ ಸ್ಥಳೀಯ ಜನರೊಂದಿಗೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮಧ್ಯ ಪ್ರವೇಶದಿಂದಾಗಿ ಪರಿಸ್ಥಿತಿ ಹತೋಟಿಗೆ ಬಂದಿತು.ಕನಕ ಪಾರ್ಕ್ ಎದುರಿನಲ್ಲಿ ಚಪ್ಪಲಿ ಹೊಲಿಯುತ್ತಿದ್ದ ವ್ಯಕ್ತಿಗೂ ಮನೆಗೆ ತೆರಳುವಂತೆ ಕಾರ್ಯಕರ್ತರು ಒತ್ತಾಯಿಸಿದರು. ‘ಹೊಟ್ಟೆ ಪಾಡಿಗಾಗಿ’ ಮಾಡುತ್ತಿದ್ದೇನೆ ಎನ್ನುವ ಮನವಿಗೂ ಯಾವುದೇ ಬೆಲೆ ಸಿಗಲಿಲ್ಲ. ಮಾಸೂರು ರಸ್ತೆಯಲ್ಲಿ ನಿಂತಿದ್ದ ಖಾಸಗಿ ಬಸ್‌ನ ಮುಂದಿನ ಗಾಜನ್ನು ದುಷ್ಕರ್ಮಿಗಳು ಒಡೆದಿದ್ದಾರೆ.ಸರ್ಕಾರಿ ಕಚೇರಿಗಳು ತೆರೆದಿದ್ದರೂ ಹಾಜರಾತಿ ವಿರಳವಾಗಿತ್ತು. ಪೆಟ್ರೋಲ್, ಡಿಸೇಲ್ ವಿತರಣೆಯಲ್ಲಿ ಸಮಸ್ಯೆ ಉಂಟಾಗಿದ್ದರಿಂದಾಗಿ ತಹಶೀಲ್ದಾರ್ ಶಿವಕುಮಾರ್, ವೃತ್ತ ನಿರೀಕ್ಷಕ ಸುರೇಶ್ ಪೆಟ್ರೋಲ್ ಬಂಕ್ ಬಳಿ ನಿಂತಿದ್ದು, ಜನರಿಗೆ ತೊಂದರೆಯಾಗದಂತೆ ಅವಕಾಶ ಕಲ್ಪಿಸಿದ್ದರು. ಬಂದ್ ಯಶಸ್ವಿ

ರಿಪ್ಪನ್‌ಪೇಟೆ: ಇಲ್ಲಿ ನಡೆದ ಬಂದ್ ಯಶಸ್ವಿಯಾಯಿತು.ಬೆಳಿಗ್ಗೆ 8ರಿಂದ ಸಂಜೆ 6ರ ತನಕ ಯಾವುದೇ ಅಂಗಡಿ ಮುಂಗಟ್ಟು ತೆರೆಯದೇ ಸಂಪೂರ್ಣ ಸ್ವಯಂ ಘೋಷಿತ ಬಂದ್ ಅಚರಿಸಲಾಯಿತು.ದ್ವಿತೀಯ ಪಿಯು ಪರೀಕ್ಷೆ ಇದ್ದರೂ ಸಹ ಮುಂದೂಡಲಾಯಿತು. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.ಅಂಚೆ ಕಚೇರಿ, ದೂರವಾಣಿ ಇಲಾಖೆ, ಬ್ಯಾಂಕ್‌ಗಳು ಎಂದಿನಂತೆ ತೆರೆದಿದ್ದರೂ ಸಹ ಗ್ರಾಹಕರರಿಲ್ಲದೇ ವ್ಯವಹಾರ ಸ್ಥಗಿತಗೊಂಡಿತ್ತು.ಸಾರಿಗೆ ಸಂಚಾರವಿಲ್ಲದೇ ಪರಸ್ಥಳದಿಂದ ಬಂದ ಪ್ರಯಾಣಿಕರು  ಪರದಾಡುವಂತಾಯಿತು. ಜನಜೀವನ ಅಸ್ತವ್ಯಸ್ತಗೊಂಡು ಪಟ್ಟಣ ಬೀಕೋ ಎನ್ನುತ್ತಿತ್ತು. ರಕ್ಷಣಾ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.