ಬ.ಕಲ್ಯಾಣ: ಶಾಲಾ ಕಟ್ಟಡ ಶಿಥಿಲ

7

ಬ.ಕಲ್ಯಾಣ: ಶಾಲಾ ಕಟ್ಟಡ ಶಿಥಿಲ

Published:
Updated:
ಬ.ಕಲ್ಯಾಣ: ಶಾಲಾ ಕಟ್ಟಡ ಶಿಥಿಲ

ಬಸವಕಲ್ಯಾಣ: ಶಿಥಿಲವಾದ ಕಟ್ಟಡ. 400 ಕ್ಕೂ ಹೆಚ್ಚಿನ ಮಕ್ಕಳಿದ್ದರೂ ಇಬ್ಬರೇ ಶಿಕ್ಷಕರು. ಮಳೆ ನೀರು ಕೋಣೆಯಲ್ಲಿ ಸೋರಿದ್ದರಿಂದ ಹಾಳಾದ ಕಂಪ್ಯೂಟರ್‌ಗಳು. ಇದು ತಾಲ್ಲೂಕಿನ ಕೊಹಿನೂರ್ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ.ಈ ಗ್ರಾಮ ಹೋಬಳಿ ಕೇಂದ್ರವಾಗಿದೆ. ತಾಲ್ಲೂಕು ಸ್ಥಳದಿಂದ 45 ಕಿ.ಮೀ. ದೂರದಲ್ಲಿದ್ದು ಗುಲ್ಬರ್ಗ ಜಿಲ್ಲೆಗೆ ಹೊಂದಿಕೊಂಡಿದೆ. ಆದ್ದರಿಂದ ಆಳಂದ ಮತ್ತು ಕಮಲಾಪುರ ವಿಧಾನಸಭಾ ಕ್ಷೇತ್ರಗಳ ಕೆಲ ಗ್ರಾಮಗಳನ್ನು ಸೇರ್ಪಡೆ ಮಾಡಿ ಇದನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಅನೇಕ ಸಲ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಆದರೂ, ಸಂಬಂಧಿತರು ಇದನ್ನು ತಾಲ್ಲೂಕು ಕೇಂದ್ರ ಮಾಡುವುದಿರಲಿ; ಮೂಲ ಸೌಲಭ್ಯಗಳನ್ನು ಒದಗಿಸುವುದಕ್ಕೂ ಮುಂದಾಗುತ್ತಿಲ್ಲ. ಇಲ್ಲಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು ಹೊಸ ಕೋಣೆಗಳನ್ನು ಮಂಜೂರು ಮಾಡಬೇಕು ಎಂದು ಮಾಡಿದ ಮನವಿಗೂ ಯಾರೂ ಸ್ಪಂದಿಸಿಲ್ಲ.ಈ ಕಟ್ಟಡ 50 ವರ್ಷಗಳಷ್ಟು ಹಳೆಯದಾಗಿದ್ದು ಕೋಣೆಗಳು ಚಿಕ್ಕದಾಗಿವೆ. ಇದಲ್ಲದೆ ಹೆಚ್ಚಿನ ಕೋಣೆಗಳ ಅವಶ್ಯಕತೆಯೂ ಇದೆ. ಕೋಣೆಗಳ ಕೊರತೆಯ ಕಾರಣ ಮಕ್ಕಳನ್ನು ವರಾಂಡಾದಲ್ಲಿ ಕೂಡಿಸಲಾಗುತ್ತಿದೆ. ಕಂಪ್ಯೂಟರ್‌ಗಳಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದೆ ಸಾಮಾನು ಸಂಗ್ರಹಿಸುವ ಕೋಣೆಯಲ್ಲಿಯೇ ಇಡಲಾಗಿದೆ. ಈ ಕೋಣೆ ಮಳೆಯಿಂದಾಗಿ ಸೋರುತ್ತಿರುವುದರಿಂದ ಕಂಪ್ಯೂಟರ್‌ಗಳಿಗೆ ಮತ್ತು ಇಲ್ಲಿಟ್ಟಿರುವ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳಿಗೆ ಹಾನಿಯಾಗಿದೆ.ಶಾಲೆಯಲ್ಲಿನ ಒಟ್ಟು 11 ಸಿಬ್ಬಂದಿಗಳಲ್ಲಿ ಮುಖ್ಯ ಶಿಕ್ಷಕರು ಒಳಗೊಂಡು ಮೂವರು ಮಾತ್ರ ಇದ್ದಾರೆ. ಇವರಲ್ಲಿ ಒಬ್ಬ ಶಿಕ್ಷಕರು ದೀರ್ಘ ರಜೆ ಪಡೆದುಕೊಂಡಿದ್ದಾರೆ. ಯಾರಾದರೊಬ್ಬರು ಕಚೇರಿ ಕೆಲಸಕ್ಕೆ ಹೋದರೆ ಶಾಲೆಯಲ್ಲಿ ಒಬ್ಬರೇ ಉಳಿಯುತ್ತಾರೆ. ಆದ್ದರಿಂದ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆಯವರಿಗೆ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಿವಶರಣಪ್ಪ ಸಂತಾಜಿ, ಎಪಿಎಂಸಿ ಸದಸ್ಯ ವೈಜನಾಥ ಪೂಜಾರಿ ಹೇಳಿದ್ದಾರೆ.ಶಿಕ್ಷಕರ ಕೊರತೆಯ ಕಾರಣ ಪಾಠಬೋಧನೆ ಸರಿಯಾಗಿ ನಡೆಯುತ್ತಿಲ್ಲ. ಮಕ್ಕಳಿಗೆ ಸರಿಯಾಗಿ ಓದಲು ಬರೆಯಲು ಸಹ ಬರುತ್ತಿಲ್ಲ. ಆದ್ದರಿಂದ ಈ ಮಕ್ಕಳು ಪ್ರೌಢಶಾಲೆಗೆ ಸೇರಿದಾಗ ಇನ್ನೊಮ್ಮೆ ಮೂಲಾಕ್ಷರಗಳನ್ನು ಕಲಿಸಬೇಕಾಗುತ್ತಿದೆ ಎಂದು ಇಲ್ಲಿನ ಪ್ರೌಢಶಾಲೆಯ ಶಿಕ್ಷಕರು ತಿಳಿಸಿದ್ದಾರೆ.ಸರ್ಕಾರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಶಾಲೆಯಲ್ಲಿ ಕಂಪ್ಯೂಟರ್‌ಗಳಿದ್ದರೂ ಕಲಿಸುವವರಿಲ್ಲದೆ ವಿದ್ಯಾರ್ಥಿಗಳು ಅವುಗಳನ್ನು ಮುಟ್ಟಿಯೂ ನೋಡುತ್ತಿಲ್ಲ. ಇಂಥ ಪರಿಸ್ಥಿತಿ ಇರುವುದರಿಂದ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಬೇಕು ಎಂದರೆ ಸಮೀಪದಲ್ಲಿ ಯಾವ ಶಾಲೆಯೂ ಇಲ್ಲ. ಹೀಗಾಗಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬುದು ಪಾಲಕರ ಗೋಳಾಗಿದೆ. ಆದ್ದರಿಂದ ಇನ್ನು ಮುಂದಾರೂ ಸಂಬಂಧಿತರು ಈ ಕಡೆ ಕಣ್ಣು ತೆರೆದು ನೋಡಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry