ಬಕ್ರೀದ್ ಹಬ್ಬ: ಕುರಿ ದುಬಾರಿ, ವ್ಯಾಪಾರ ಜೋರು...

7

ಬಕ್ರೀದ್ ಹಬ್ಬ: ಕುರಿ ದುಬಾರಿ, ವ್ಯಾಪಾರ ಜೋರು...

Published:
Updated:
ಬಕ್ರೀದ್ ಹಬ್ಬ: ಕುರಿ ದುಬಾರಿ, ವ್ಯಾಪಾರ ಜೋರು...

ಬೆಂಗಳೂರು: ಸಂತೆಯಲ್ಲಿ ಕುರಿ ಸಾಮಾನ್ಯವಾಗಿ ಐದಾರು ಸಾವಿರ ರೂಪಾಯಿಗೆ ಮಾರಾಟವಾಗುತ್ತದೆ. ಆದರೆ, ಚಾಮರಾಜಪೇಟೆಯ `ಕುರಿ ಸಂತೆ~ಯಲ್ಲಿ ವ್ಯಾಪಾರಿಯೊಬ್ಬರಿಗೆ `ಶುಕ್ರ ದೆಸೆ~. ಅವರು ತಂದಿದ್ದ ಕುರಿ ಮರಿಯೊಂದು 1.25 ಲಕ್ಷ ರೂಪಾಯಿಗೆ ಬಿಕರಿಯಾಯಿತು!ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ `ಕುರಿ ಸಂತೆ~ಯಲ್ಲಿ ದಷ್ಟಪುಷ್ಟವಾಗಿ ಬೆಳೆದಿರುವ ಕುರಿಗಳಿಗೆ ಚಿನ್ನದ ಬೆಲೆ! ಹದಿನೈದು ಕೆ.ಜಿ ತೂಗುವ ಬಂಡೂರು ತಳಿಯ ಕುರಿಮರಿಯ ಬೆಲೆಯಂತೂ ಲಕ್ಷ ದಾಟಿತ್ತು. ವಾರಾಂತ್ಯದ ದಿನವಾದ್ದರಿಂದ ಒಂದೇ ದಿನಕ್ಕೆ ಹದಿನೈದು ಸಾವಿರಕ್ಕೂ ಅಧಿಕ ಕುರಿಗಳು ಮಾರಾಟಗೊಂಡವು. ಇದರಿಂದಾಗಿ ಮಾರಾಟಗಾರರ ಸಂತಸ ಇಮ್ಮಡಿಯಾಗಿತ್ತು.ಪ್ರತಿವರ್ಷದಂತೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆಯುವ `ಕುರಿ ಸಂತೆ~ಯಲ್ಲಿ ಬೀದರ್, ವಿಜಾಪುರ, ತುಮಕೂರು, ಮದ್ದೂರು, ಶಿರಾ, ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧ ಭಾಗಗಳ ಕುರಿ ಮಾರಾಟಗಾರರು ಭಾರಿ ಉತ್ಸಾಹದಿಂದ ತಮ್ಮ ಸರಕುಗಳನ್ನು ಮಾರಾಟ ಮಾಡಿದರು. ಗ್ರಾಹಕರು ಕುರಿಯ ಬಣ್ಣ, ಮಾಂಸದ ಅಂದಾಜು, ಗಾತ್ರ, ಅದರ ದಟ್ಟ ಕೂದಲು, ಕೊಂಬು ಪರಿಶೀಲಿಸಿ ಅಳೆದು ತೂಗಿ ಚೌಕಾಶಿ ಮಾಡಿ ಖರೀದಿಸುತ್ತಿದ್ದರು.ಸಂತೆಯಲ್ಲಿ ಬಂಡೂರು, ವಾತ, ನಾಟಿ, ಮಿಶ್ರ ತಳಿ ಸೇರಿದಂತೆ ವಿವಿಧ ಜಾತಿಯ ಕುರಿಗಳು ಹಾಗೂ ಟಗರುಗಳು ಗ್ರಾಹಕರ ಚಿತ್ತಾಕರ್ಷಿಸಿದವು. ಪ್ರತಿ ವ್ಯಾಪಾರಿಯೂ 30ರಿಂದ 40 ಕುರಿಗಳನ್ನು ತಂದಿದ್ದರು.ಕೆಲವು ವ್ಯಾಪಾರಿಗಳ ಕುರಿಗಳು ಒಂದೇ ದಿನದಲ್ಲೇ ಮಾರಾಟಗೊಂಡರೆ, ಹಲವರಿಗೆ ತಮ್ಮ ಸರಕು ಮಾರಾಟವಾಗದ ಬೇಸರ. ಮೈದಾನದಲ್ಲಿ ಸಂತಸ- ಬೇಸರದ ಮಿಶ್ರಭಾವ. ಮತ್ತೊಂದೆಡೆ, `ಭಾನುವಾರ ಗ್ರಾಹಕರ ಸಂಖ್ಯೆಯೂ ಜಾಸ್ತಿ ಇರುತ್ತದೆ. ಉತ್ತಮ ಬೆಲೆ ದೊರಕುವುದು ಖಚಿತ~ ಎಂದು ತಮ್ಮನ್ನೇ ಸಮಾಧಾನ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.ಏರಿಕೆಯಾದ ಸಾಗಣೆ ದರ:
ಕುರಿ ಖರೀದಿ ಮಾಡುವ ಸಲುವಾಗಿ ಗ್ರಾಹಕರು ಆಟೊ, ಟೆಂಪೊ, ಲಾರಿಗಳಲ್ಲಿ ಬಂದಿದ್ದರು. ಕೆಲವು ಮಂದಿ ಸಾಗಣೆಯ ವಾಹನಗಳಿಗೆ ಸಾವಿರ ರೂಪಾಯಿಗಿಂತಲೂ ಅಧಿಕ ಬಾಡಿಗೆಯನ್ನು ತೆತ್ತು ಕುರಿಗಳನ್ನು ಕೊಂಡೊಯ್ದರು.ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮಾರಾಟಗಾರ ಮದ್ದೂರಿನ ಕೃಷ್ಣಪ್ಪ, `ವ್ಯಾಪಾರಕ್ಕಾಗಿ ಐವತ್ತು ಸಾವಿರಕ್ಕೂ ಅಧಿಕ ಕುರಿಮರಿಗಳನ್ನು ತರಲಾಗಿದೆ. ಶನಿವಾರ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಕುರಿಗಳು ಮಾರಾಟಗೊಂಡಿವೆ ಎಂದು ಅಂದಾಜಿಸಬಹುದು. ಮಾರಾಟಗಾರರಿಗೆ ನಿಗದಿತ ಮಳಿಗೆ ಇಲ್ಲದ ಕಾರಣ ಮಾರಾಟಗೊಂಡ ಕುರಿಗಳ ಸಂಖ್ಯೆಯನ್ನು ಅಂದಾಜಿಸುವುದು ಕಷ್ಟ~ ಎಂದು ತಿಳಿಸಿದರು.`ಕುರಿ ಸಂತೆಗೆ ಈ ಬಾರಿ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ತಂದ ಎಲ್ಲ ಕುರಿಗಳಿಗೂ ಸೂಕ್ತ ಬೆಲೆ ದೊರೆಯುವುದಿಲ್ಲ. ಕೆಲವೊಮ್ಮೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತೇವೆ. ಕುರಿ ಸಾಕಾಣೆ ಮತ್ತು ಸಾಗಣೆಯ ವೆಚ್ಚವನ್ನು ಕಳೆದರೆ  ಸ್ವಲ್ಪ ಮಟ್ಟಿಗೆ ಲಾಭ ದೊರೆಯುತ್ತದೆ~ ಎಂದು ಹೇಳಿದರು.ಗ್ರಾಹಕರ

ಅಭಿಪ್ರಾಯಗಳು...ಈಗ ಖರೀದಿಸಿದರೆ ಬಚಾವ್`ಸಂತೆಯಲ್ಲಿ ವಿವಿಧ ತಳಿಗಳ ಕುರಿಗಳು ಬಂದಿವೆ. ಈಗ ಖರೀದಿಸಿದರೆ ಬಚಾವ್. ಇನ್ನೆರಡು ದಿನಗಳಲ್ಲಿ ಕುರಿ ದರ ದುಬಾರಿಯಾಗಲಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕುರಿಯ ದರ ತುಸು ಹೆಚ್ಚಿದೆ. ಬೆಲೆ ಏರಿಕೆ ಬಿಸಿಯ ನಡುವೆಯೇ ಕುರಿಯ ಬೆಲೆಯೂ ಹೆಚ್ಚಿ ಹಬ್ಬದ ಸಂಭ್ರಮಕ್ಕೆ ಪೆಟ್ಟು ನೀಡಿದೆ.~ 

-ಇಮಾಮ್, ಹನುಮಂತನಗರ

ಬಜೆಟ್‌ಗೆ ತಕ್ಕಂತೆ ಖರೀದಿ

`ಕುರಿಯನ್ನು ಕಡಿದ ನಂತರ ಒಂದು ಭಾಗ ಬಡವರಿಗೆ, ಮತ್ತೊಂದು ಭಾಗ ಕುಟುಂಬ ಹಾಗೂ ನೆಂಟರಿಗೆ ಎಂದು ಮೀಸಲಿಡುತ್ತೇವೆ. ಹಾಗಾಗಿ ಹೆಚ್ಚು ಮಾಂಸವುಳ್ಳ ಕುರಿಯನ್ನು ಖರೀದಿ ಮಾಡುತ್ತೇವೆ. ನಮ್ಮ ಬಜೆಟ್‌ಗೆ ತಕ್ಕಂತೆ ಉತ್ತಮ ಗುಣಮಟ್ಟದ ಕುರಿ ಖರೀದಿಗಾಗಿ ಮೈದಾನದೊಳಗೆ ಒಂದು ಸುತ್ತು ಬಂದಿದ್ದೇನೆ~.       

ಮುಷಫರ್, ನಾಯಂಡಹಳ್ಳಿಲಕ್ಷಕ್ಕೂ ಮೀರಿದ ಕುರಿ ದರ

ಹಬ್ಬದ ಹಿಂದಿನ ದಿನದ ಮಧ್ಯರಾತ್ರಿಯವರೆಗೂ ನಡೆಯುವ ಸಂತೆಯೂ ನಿತ್ಯ ನೂರಾರು ಗ್ರಾಹಕರನ್ನು ಸೆಳೆಯುತ್ತದೆ. ಸಂತೆಯಲ್ಲಿ ಕುರಿಗಳಿಗೆ ಆರು ಸಾವಿರ ರೂಪಾಯಿಯಿಂದ ಒಂದು ಲಕ್ಷದವರೆಗೆ ದರವನ್ನು ನಿಗದಿ ಮಾಡಲಾಗಿತ್ತು. ಕೆಲವು ಗ್ರಾಹಕರು 18 ಸಾವಿರ ರೂಪಾಯಿಯ ಒಂದೇ ಕುರಿಯನ್ನು ಖರೀದಿ ಮಾಡಿದರೆ, ಮತ್ತೆ ಕೆಲವರು ಆರು ಸಾವಿರ ರೂಪಾಯಿ ಬೆಲೆಯ 10 ಕುರಿಗಳನ್ನು ಕೊಂಡುಕೊಂಡರು. ಮಾರಾಟಗಾರರು ಮತ್ತು ಗ್ರಾಹಕರ ನಡುವೆ ಚೌಕಾಶಿ ಸಾಮಾನ್ಯವಾಗಿತ್ತು. ಕೆಲವು ಗ್ರಾಹಕರು ಒಂದೇ ಬಾರಿಗೆ ಇಪ್ಪತ್ತೈದು ಕುರಿಗಳನ್ನು ಖರೀದಿಸಿ ಸಾಗಿಸುತ್ತಿದ್ದರು.ಮಾರಾಟಗಾರರ ಅಭಿಪ್ರಾಯಗಳು...

ಅಷ್ಟೇನೂ ಕುದುರಿಲ್ಲ

`ಕುರಿ ಮಾರಾಟ ಮಾಡುವ ಸಲುವಾಗಿ ವರ್ಷಕ್ಕೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಕುರಿ ಮಾರಾಟವಾಗುವವರೆಗೂ ಊಟ, ತಿಂಡಿ, ನಿದ್ರೆ ಎಲ್ಲವೂ ಈ ಮೈದಾನದಲ್ಲಿಯೇ. ಈ ಬಾರಿ ಕುರಿ ವ್ಯಾಪಾರ ಅಷ್ಟೇನೂ ಕುದುರಿಲ್ಲ. ಐವತ್ತು ಕುರಿ ತಂದಿದ್ದರೂ ಈವರೆಗೆ ಹದಿಮೂರು ಕುರಿಗಳು ಮಾತ್ರ ಮಾರಾಟವಾಗಿವೆ. ಕೆಲವೊಮ್ಮೆ ಗ್ರಾಹಕರು ತೀರಾ ಕಡಿಮೆ ಬೆಲೆಗೆ ಕುರಿಯನ್ನು ಕೇಳುತ್ತಾರೆ. ವಿಧಿಯಿಲ್ಲದೇ ಕಡಿಮೆ ಬೆಲೆಗೆ ಮಾರಾಟ ಮಾಡಲೇಬೇಕಾಗುತ್ತದೆ~. - ಅಂಜನಪ್ಪ, ವ್ಯಾಪಾರಿ, ಶಿರಾಪ್ರತಿ ಬಾರಿಯೂ ಲಾಭ

`ಬಂಡೂರು ಕುರಿಗೆ ಒಳ್ಳೆಯ ದರವಿದೆ. ದಷ್ಟಪುಷ್ಟವಾದ, ಚೆಲುವಾದ ಕುರಿಗಳಿಗೆ ಚೌಕಾಶಿ ಮಾಡದೇ ಗ್ರಾಹಕರು ನಿಗದಿತ ದರವನ್ನೇ ನೀಡುತ್ತಾರೆ. ನಾನು ಹೆಚ್ಚಾಗಿ ಬಂಡೂರಿನ ತಳಿಯನ್ನೇ ಸಾಕಿ ಮಾರಾಟ ಮಾಡುತ್ತೇನೆ. ಹೀಗಾಗಿ, `ಕುರಿ ಸಂತೆ~ ನನಗೆ ಪ್ರತಿ ಬಾರಿಯೂ ಲಾಭ ತಂದುಕೊಟ್ಟಿದೆ~. 

 ಮಹಾಂತೇಶ, ಮದ್ದೂರು 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry