ಮಂಗಳವಾರ, ಏಪ್ರಿಲ್ 20, 2021
32 °C

ಬಗರ್‌ಹುಕುಂ ಜಮೀನು ವಿವಾದದಲ್ಲಿ ಮೇಯರ್: ಮಂಜೂರಾತಿ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಗರ್‌ಹುಕುಂ ಜಮೀನು ವಿವಾದದಲ್ಲಿ ಮೇಯರ್: ಮಂಜೂರಾತಿ ರದ್ದು

ಬೆಂಗಳೂರು: ತಾವು ಕೃಷಿ ಕಾರ್ಮಿಕರಾಗಿದ್ದು, ತಮ್ಮ ಹೆಸರಿನಲ್ಲಿ ಯಾವುದೇ ಭೂಮಿ ಇಲ್ಲ ಎಂದು ತೋರಿಸಿ ಬಿಬಿಎಂಪಿ ಮೇಯರ್ ಡಿ.ವೆಂಕಟೇಶಮೂರ್ತಿ ಬಗರ್‌ಹುಕುಂ ಜಮೀನು ಪಡೆದಿರುವುದು ಬೆಳಕಿಗೆ ಬಂದಿದೆ. ಸುಳ್ಳು ದಾಖಲೆಗಳನ್ನು ತೋರಿಸಿ ಮೂರ್ತಿ ಹಾಗೂ ಪತ್ನಿ ಕೆ.ಪ್ರಭಾ ಅವರು ಉತ್ತರಹಳ್ಳಿ ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿ ಎಂಟು ಎಕರೆ ಜಮೀನು ಪಡೆದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.ಈ ಬಗರ್‌ಹುಕುಂ ಜಾಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಸೇರಿದ್ದು. ಈ ಗೋಮಾಳ ಜಾಗದಲ್ಲಿ ಬಿಎಂಟಿಸಿ ಬಸ್ ಟರ್ಮಿನಲ್ ನಿರ್ಮಿಸಲು ಉದ್ದೇಶಿಸಿತ್ತು. ಈ ಆಸ್ತಿ ಸರ್ಕಾರಿ ಜಾಗ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗದ ಮ್ಯಾಜಿಸ್ಟ್ರೇಟ್ ಅವರು ಜಾಗ ಮಂಜೂರಾತಿಯನ್ನು ರದ್ದುಪಡಿಸಿದ್ದಾರೆ. 2012ರ ಜೂನ್ 8ರಂದು ಹೊರಡಿಸಿರುವ ಈ ಆದೇಶ (ಆರ್‌ಯುಸಿ/ಸಿಆರ್/4/12/13)ದ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ. ಸೋಮನಹಳ್ಳಿಯ ಗ್ರಾಮಸ್ಥರು ದೂರು ನೀಡಿದ ಬಳಿಕ ಮಂಜೂರಾತಿ  ಯನ್ನು ರದ್ದುಪಡಿಸಲಾಯಿತು.  ಮೂರ್ತಿ ಹಾಗೂ ಪ್ರಭಾ ಜಾಗ ಪಡೆಯಲು ಸುಳ್ಳು ಘೋಷಣೆಗಳನ್ನು ಮಾಡಿರುವುದು ಜೂನ್ 5ರಂದು ನೀಡಿರುವ ತನಿಖಾ ವರದಿ (ವರದಿ ಸಂಖ್ಯೆ ಆರ್‌ಯುಸಿ/ಸಿಆರ್/02/12-13)ಯಲ್ಲಿ ಬಹಿರಂಗಗೊಂಡಿದೆ.ಕಾನೂನಿನ ಪ್ರಕಾರ ಬಗರ್‌ಹುಕುಂ ಜಮೀನನ್ನು ಭೂರಹಿತ ಕೃಷಿ ಕಾರ್ಮಿಕರಿಗೆ ಮಾತ್ರ ಮಂಜೂರು ಮಾಡಲಾಗುತ್ತದೆ. ಸಾಗುವಳಿ ಚೀಟಿ ನೀಡಿರುವುದು ಸಹ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಬಿಬಿಎಂಪಿ ಸರಹದ್ದಿನ 18 ಕಿ.ಮೀ. ಒಳಗಿನ ಭೂಮಿಯನ್ನು ಬಗರ್‌ಹುಕುಂ ಅಡಿಯಲ್ಲಿ ಕೃಷಿ ಚಟುವಟಿಕೆಗಾಗಿ ಮಂಜೂರು ಮಾಡುವಂತಿಲ್ಲ. ಕರ್ನಾಟಕ ಭೂ ಕಂದಾಯ ತಿದ್ದುಪಡಿ ಕಾಯ್ದೆ 1991ರ ಸೆಕ್ಷನ್ 192 (ಎ) ಪ್ರಕಾರ ಕಾಯ್ದೆಯ ಉಲ್ಲಂಘನೆಯಾದ ಸಂದರ್ಭದಲ್ಲಿ ಆರೋಪಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ವಾರೆಂಟ್ ಹೊರಡಿಸಲು ಅವಕಾಶ ಇದೆ.ಭೂರಹಿತ ಕಾರ್ಮಿಕ ಎಂದು ಮೂರ್ತಿ ಘೋಷಿಸಿಕೊಂಡಿದ್ದಾರೆ. ಕೆ. ಪ್ರಭಾ ಎಲ್ಲಿಯೂ ಮೂರ್ತಿಯನ್ನು ವಿವಾಹವಾದುದನ್ನು ಉಲ್ಲೇಖಿಸಿಲ್ಲ. `ಕೆಂಚಪ್ಪನ ಮಗಳು~ ಎಂದು ಆಕೆ ಘೋಷಿಸಿಕೊಂಡಿದ್ದಾರೆ. ಮತ್ತೊಂದು ಆಸಕ್ತಿಕರ ಸಂಗತಿಯೆಂದರೆ ಬಗರ್‌ಹುಕುಂ ಜಮೀನನ್ನು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾತ್ರ ಪಡೆಯಲು ಅರ್ಹರು. ಒಂದೇ ಕುಟುಂಬದ ಇಬ್ಬರು ಜಮೀನು ಪಡೆಯುವ ಮೂಲಕ ಇಲ್ಲಿಯೂ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಈ ನಡುವೆ, ಸರ್ಕಾರ ಈ ಜಮೀನನ್ನು ವಾಪಸು ಪಡೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ. ಅಯ್ಯಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಮ್ಯಾಜಿಸ್ಟ್ರೇಟ್ ಈ ವಿಚಾರದ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಪಪಡಿಸಿದರು. ಕರ್ನಾಟಕ ಭೂ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ವಿ.ಬಾಲಸುಬ್ರಹ್ಮಣ್ಯನ್ ಪ್ರತಿಕ್ರಿಯಿಸಿ, `ಜಾಗ ಮಂಜೂರು ಮಾಡಿರುವುದು ಅಕ್ರಮ. ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ವಾರೆಂಟ್ ಹೊರಡಿಸಲು ಅವಕಾಶ ಇದೆ~ ಎಂದರು.`ಭೂಮಿ ಪಡೆಯಲು ಅಶೋಕ ನೆರವು~


`ಬಗರ್‌ಹುಕುಂ ಜಮೀನು ಪಡೆಯಲು 2004ರಲ್ಲಿ ಬಗರ್‌ಹುಕುಂ ಸಮಿತಿಯ ಅಧ್ಯಕ್ಷರಾಗಿದ್ದ ಈಗಿನ ಗೃಹಸಚಿವ ಆರ್. ಅಶೋಕ ನೆರವು ನೀಡಿದರು~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಸ್ಪಷ್ಟಪಡಿಸಿದರು.`2004ರಲ್ಲಿ ಉತ್ತರಹಳ್ಳಿ ಶಾಸಕರಾಗಿದ್ದ ಅಶೋಕ ಬಗರ್‌ಹುಕುಂ ಶಿಫಾರಸು ಸಮಿತಿಯ ಅಧ್ಯಕ್ಷರಾಗಿದ್ದರು. ಆ ವೇಳೆ ಶಾಸಕರು ನನ್ನ ಹೆಸರನ್ನು ಶಿಫಾರಸು ಮಾಡಿದರು. ಬಗರ್‌ಹುಕುಂ ಜಮೀನು ಪಡೆದಿರುವುದು ನಾನೊಬ್ಬನೇ ಅಲ್ಲ. ಕೆಲವು ಶಾಸಕರೂ ಸೇರಿದಂತೆ ಪ್ರತಿಷ್ಠಿತ ವ್ಯಕ್ತಿಗಳು ಇಲ್ಲಿ ಫಲಾನುಭವಿಗಳಾಗಿದ್ದಾರೆ.ಆದರೆ, ಅವರ ಹೆಸರನ್ನು ಹೇಳಲು ಇಚ್ಛಿಸುವುದಿಲ್ಲ~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ `ಪ್ರಜಾವಾಣಿ~ಗೆ ಗುರುವಾರ ತಿಳಿಸಿದರು. ಮೂರ್ತಿ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮುಂದಾದಾಗ ಆರ್. ಅಶೋಕ ಸಂಪರ್ಕಕ್ಕೆ ಲಭ್ಯರಾಗಿಲ್ಲ.`ಇಲ್ಲಿ ನಾನೊಬ್ಬನೇ ತಪ್ಪಿತಸ್ಥನಲ್ಲ. ನನಗೆ ಜಮೀನು ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ತಹಶೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್‌ಗಳು, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ಜವಾಬ್ದಾರರು~ ಎಂದು ಅವರು ಆರೋಪಿಸಿದ್ದಾರೆ.`ನಾನು ಜಾಗ ಪಡೆದಿರುವ ಸಂಗತಿಯನ್ನು ರಾಜಕೀಯ ವಿರೋಧಿಗಳು ಮಾಧ್ಯಮಗಳಿಗೆ ದೊರಕುವಂತೆ ಮಾಡಿದ್ದಾರೆ. ನನ್ನ ಏಳಿಗೆ ಶ್ರಮಿಸದೆ ಈ ರೀತಿ ಮಾಡಿದ್ದಾರೆ~ ಎಂದು ಅವರು ದೂರಿದರು.`ಈ ಪ್ರಕರಣದಲ್ಲಿ ಪ್ರಭಾ ಎಲ್ಲಿಯೂ ನನ್ನ ಪತ್ನಿ ಎಂದು ಹೇಳಿಕೊಂಡಿಲ್ಲ. ಕೆಂಚಪ್ಪನ ಮಗಳು ಎಂದು ತಿಳಿಸಿದ್ದಾಳೆ. ಇದು ಆಕೆ ಮಾಡಿರುವ ತಪ್ಪು~ ಎಂದು ಅಭಿಪ್ರಾಯಪಟ್ಟಿರುವ ಮೂರ್ತಿ, `ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಯಾವುದೇ ಅಗತ್ಯ ನನಗಿಲ್ಲ. ನನ್ನ ಪುತ್ರ ಅಮೆರಿಕದಲ್ಲಿ ಪೈಲೆಟ್ ತರಬೇತಿ ಪಡೆಯುತ್ತಿದ್ದಾನೆ. ಮಗಳು ಸಹ ಉತ್ತಮ ಸ್ಥಿತಿಯಲ್ಲಿ ಇದ್ದಾಳೆ. ನನ್ನ ಜನತೆಯ ಸೇವೆ ಮಾಡುವುದು ನನ್ನ ಏಕೈಕ ಮಹತ್ವಾಕಾಂಕ್ಷೆ. ಅದನ್ನು ಈಗಲೂ ಮಾಡುತ್ತಿದ್ದೇನೆ~ ಎಂದು ಪ್ರತಿಪಾದಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.