ಮಂಗಳವಾರ, ಏಪ್ರಿಲ್ 20, 2021
32 °C

ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಬಗರ್‌ಹುಕುಂ ಸಕ್ರಮೀಕರಣ, ಅರಣ್ಯಭೂಮಿ ಹಾಗೂ ಮನೆ ನಿವೇಶನ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತರೈತ ಸಂಘ (ಕೆಪಿಆರ್‌ಎಸ್) ಹಾಗೂ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು) ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪಿಕೆಟಿಂಗ್ ನಡೆಸಲು ಯತ್ನಿಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಜಮಾುಸಿದ ನೂರಾರು ಕಾರ್ಯಕರ್ತರು, ರಾಜ್ಯ ಬಿಜೆಪಿ ಸರ್ಕಾರ ಹಾಗೂ ಸ್ಥಳೀಯ ಶಾಸಕ ಜಿ. ಕರುಣಾಕರರೆಡ್ಡಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ಹೊಸಪೇಟೆ ರಸ್ತೆ, ಪ್ರವಾಸಿಮಂದಿರ ವತ್ತದ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು.ಪ್ರತಿಭಟನೆಯ ನೇತೃತ್ವವಹಿಸಿದ್ದ ಕೆಪಿಆರ್‌ಎಸ್ ಸಂಘಟನೆಯ ಮುಖಂಡ ಎಚ್. ವೆಂಕಟೇಶ್ ಮಾತನಾಡಿ, ದಶಕಗಳಿಂದಲೂ ಬಗರ್‌ಹುಕುಂ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಉಪಜೀವನ ಸಾಗಿಸುತ್ತ ಬಂದಿರುವ ಭೂರಹಿತ ಬಡ-ನಿರ್ಗತಿಕ ಕುಟುಂಬಗಳ ರೈತರಿಗೆ ಸರ್ಕಾರ ಹಕ್ಕುಪತ್ರ ನೀಡಲು ಮೀನ-ಮೇಷ ಎಣಿಸುತ್ತಿದೆ.ಆದರೆ, ಅರಣ್ಯ, ಕಂದಾಯ ಇಲಾಖೆಯ ಭೂಮಿಯನ್ನು ಗಣಿಕಳ್ಳರಿಗೆ ಧಾರೆ ಎರೆಯುವ ಮೂಲಕ ನಾಡಿನ ಅಮೂಲ್ಯ ಖನಿಜ ಸಂಪತ್ತಿನ ಲೂಟಿಗೆ ಸರ್ಕಾರ ಸಾರಥ್ಯವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿವಿಧ ಸಂಘಟನೆಯ ಮುಖಂಡರು ಸರ್ಕಾರದ ಧೋರಣೆ, ಸ್ಥಳೀಯ ಶಾಸಕರ ಕಾರ್ಯವೈಖರಿ ಕುರಿತು ವಾಗ್ದಾಳಿ ನಡೆಸಿದರು. ಬಳಿಕ ತಾಲ್ಲೂಕು ಕಚೇರಿಯ ಮುಖ್ಯದ್ವಾರ ಪ್ರವೇಶಿಸಲು ಮುಂದಾಗುತ್ತಿದ್ದಂತೆಯೇ ಪೊಲೀಸರು ಕಾರ್ಯಕರ್ತರನ್ನು ತಡೆದು, ಬಂಧಿಸಿದರು. ಬಳಿಕ 13 ಮಹಿಳೆಯರು ಹಾಗೂ 18 ಮಂದಿ ಪುರುಷರು ಸೇರಿದಂತೆ 31 ಮಂದಿ ಕಾರ್ಯಕರ್ತರನ್ನು ಜಾಮೀನನ ಮೇಲೆ ಬಿಡುಗಡೆಗೊಳಿಸಿದರು.ವಿವಿಧ ಸಂಘಟನೆಯ ಮುಖಂಡರಾದ ಎಲ್.ಬಿ. ಹಾಲೇಶನಾಯ್ಕ, ಟಿ. ಪದ್ಮಾವತಿ, ವೆಂಕಟೇಶ ಬೇವಿನಹಳ್ಳಿ, ಮಂಜುನಾಥ ಕಲ್ಲಹಳ್ಳಿ, ಕೆಂಚಮ್ಮ, ಉಚ್ಚಂಗೆಮ್ಮ, ರಾಜಪ್ಪ, ಸೋಮ್ಲನಾಯ್ಕ, ಸತೀಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಜಗಳೂರು

 ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.ಬರಪೀಡಿತ ತಾಲ್ಲೂಕಿನಲ್ಲಿ ರೈತರಿಗೆ ಬೆಳೆನಷ್ಟ ಪರಿಹಾರ ನೀಡಬೇಕು. ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು. ಸರ್ಕಾರದ ಭೂಮಿ ಖರೀದಿಸಿ ಭೂರಹಿತ ಕೂಲಿಕಾರ್ಮಿಕರಿಗೆ ನಿವೇಶನ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಆರ್. ಓಬಳೇಶ್ ಮಾತನಾಡಿ, ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬಗರ್‌ಹುಕುಂ ಹಾಗೂ `ಶೇಂದಿವನ~ ಭೂಮಿಯಲ್ಲಿ ಕಳೆದ 50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಸರ್ಕಾರ ಇದುವರೆಗೆ ಹಕ್ಕುಪತ್ರ ನೀಡದೆ ಅನ್ಯಾಯ ಮಾಡಲಾಗಿದೆ. ಐದು ವರ್ಷಗಳಿಂದ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸಂಘಟನೆ ನೇತೃತ್ವದಲ್ಲಿ ಹೋರಾಟ ನಡೆಸಲಾಗಿದೆ.

ಇದರ ಫಲವಾಗಿ `ಶೇಂದಿವನ~ಗಳಿಗೆ ಮಾತ್ರ ಸರ್ಕಾರ ಹಕ್ಕುಪತ್ರ ನೀಡಲು ಆದೇಶಿಸಿ 6 ತಿಂಗಳು ಕಳೆದರೂ ಇದುವರೆಗೆ ತಾಲ್ಲೂಕು ಆಡಳಿತ ಹಕ್ಕುಪತ್ರ ವಿತರಿಸಿಲ್ಲ ಎಂದು ಆರೋಪಿಸಿದರು.ಪ್ರಾತ ರೈತ ಸಂಘದ ಮುಖಂಡರಾದ ಪಾಪಲಿಂಗಪ್ಪ, ಹನುಮಂತಪ್ಪ, ರೋಷನ್‌ಆಲಿ, ಎನ್. ಬಸವರಾಜ್, ಲೋಕಪ್ಪ, ಪರಸಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.