ಬುಧವಾರ, ಏಪ್ರಿಲ್ 21, 2021
25 °C

ಬಗರ್‌ಹುಕುಂ: ಹಕ್ಕುಪತ್ರ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಗರ್‌ಹುಕುಂ: ಹಕ್ಕುಪತ್ರ ನೀಡಲು ಆಗ್ರಹ

ಸೊರಬ: ಅರಣ್ಯ ಹಕ್ಕು ಕಾಯ್ದೆಯ ಅಡಿ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಹಾಗೂ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಸೊರಬ ತಾಲ್ಲೂಕು ಬಗರ್‌ಹುಕುಂ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ತೀ.ನಾ. ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನಲ್ಲಿ ಅರಣ್ಯ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡಿರುವ ರೈತರ ಮೇಲೆ ಅರಣ್ಯ ಇಲಾಖೆ ಅಮಾನುಷವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದೆ.ಕೆರೆಹಳ್ಳಿ, ತಾಳಗುಪ್ಪದಲ್ಲಿ ರೈತರು ಸಾಗುವಳಿ ಮಾಡಿರುವ ಭೂಮಿಯನ್ನು ಬಿಟ್ಟು ಉಳಿದ ಭೂಮಿಯನ್ನು ಅರಣ್ಯ ಎಂದು ಘೋಷಿಸುವಂತೆ ಅರೆ ನ್ಯಾಯಿಕ ಸಮಿತಿ, ಅರಣ್ಯ ವ್ಯವಸ್ಥಾಪನಾ ಸಮಿತಿ ತೀರ್ಮಾನಿಸಿ, ಗೆಜೆಟ್‌ನಲ್ಲಿ ಪ್ರಕಟಣೆ ಆಗಿದೆ. ಆದರೂ, ರೂ 5 ಕೋಟಿ ಮೌಲ್ಯದ ಬೆಳೆಯನ್ನು ನಾಶ ಮಾಡಲಾಗಿದೆ. ಸರ್ಕಾರ ರೈತರ ಪರ ನ್ಯಾಯಾಲಯದಲ್ಲಿ ಸರಿಯಾಗಿ ವಾದಿಸದಿರುವುದು ಅದಕ್ಕೆ ಕಾರಣವಾಗಿದೆ ಎಂದರು.ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರಿಗೆ ಯಾವುದೇ ಅನುಕೂಲ ಮಾಡದೇ ಸತತವಾಗಿ ಹತ್ತಿಕ್ಕುತ್ತಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರು ಮಂಜೂರಾತಿ ಕೋರಿ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಗಳು ವಿಲೇವಾರಿಯಾಗದೇ ಹಾಗೇ ಉಳಿದಿವೆ.ಅರಣ್ಯ ಮತ್ತು ಕಂದಾಯ ಇಲಾಖೆಗಳು ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಜಮೀನಿನಲ್ಲಿ ಪ್ರವೇಶ ಮಾಡಿ ಬೆಳೆ ಹಾನಿ ಮಾಡಿ ರೈತರು ದಿಕ್ಕೆಡುವಂತೆ ಮಾಡಿರುವ ಕ್ರಮ ಖಂಡನೀಯ ಎಂದರು.ಕೇಂದ್ರ ಸರ್ಕಾರ ಕೂಡಲೇ ಅರಣ್ಯ ಹಕ್ಕು ಕಾಯಿದೆ ಜಾರಿಗೊಳಿಸಬೇಕು. 1978ರ ಪೂರ್ವದಲ್ಲಿ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ನೀಡಬೇಕು. ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವ 4,494 ಪ್ರಕರಣ ಬಾಕಿ ಉಳಿದಿದ್ದು, ಜಿಲ್ಲಾಧಿಕಾರಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಹೊರಡಿಸಿದ ಸುತ್ತೋಲೆ ಅನುಷ್ಠಾನಗೊಳಿಸಬೇಕು.ತೀರ್ಥಹಳ್ಳಿ ತಾಲ್ಲೂಕು ಮಲಂದೂರಿನಲ್ಲಿ ಕಾಯ್ದೆ ಅನುಷ್ಠಾನಗೊಳಿಸಿರುವಂತೆ ತಾಲ್ಲೂಕಿನಲ್ಲೂ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದರು. ಬೇಡಿಕೆಯನ್ನು 10 ದಿನಗಳ ಒಳಗೆ ಈಡೇರಿಸದಿದ್ದರೆ ತಾಲ್ಲೂಕಿನಾದ್ಯಂತ `ಕಾನೂನುಭಂಗ ಚಳವಳಿ~ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.