ಬಗೆಬಗೆ ಕಲಾರಸ

7
ಕಲಾಪ

ಬಗೆಬಗೆ ಕಲಾರಸ

Published:
Updated:

ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿರುವ ‘ಕಲಾರಸ ಆರ್ಟ್ ಹೌಸ್’ ಎಂಬ ವೈವಿಧ್ಯಮಯ ಗ್ಯಾಲರಿಯಲ್ಲಿ ನಡೆಯುತ್ತಿರುವ 71 ಕಲಾವಿದರ ಚಿತ್ರಕಲಾ ಪ್ರದರ್ಶನ ಸೆ.18ರಂದು ಕೊನೆಗೊಳ್ಳಲಿದೆ.ರಾಜ್ಯದೆಲ್ಲೆಡೆಯಿಂದ ಆಯ್ದ ಪ್ರತಿಭಾವಂತ ಕಲಾವಿದರ ಕಲಾಕೃತಿಗಳ ಸಂಗ್ರಹದಿಂದ ಅತ್ಯುತ್ತಮವಾದುದನ್ನು ಆಯ್ದು ‘ಕಲಾರಸ’ದಲ್ಲಿ ಪ್ರದರ್ಶಿಸಿರುವುದು ವಿಶೇಷ.ನಿಗದಿತ ವಸ್ತುವನ್ನು ಭಿನ್ನ ನೋಟ, ವಿಭಿನ್ನ ಆಯಾಮದೊಂದಿಗೆ ಅದಕ್ಕೆ ತಕ್ಕುದಾದ ಮಾಧ್ಯಮದಲ್ಲಿ ಬಿಂಬಿಸಿರುವ ಕಲಾಕೃತಿಗಳನ್ನು ರಚಿಸಿದ ಸಂವೇದನಾಶೀಲ ಕಲಾವಿದರಿಗಷ್ಟೇ ಎರಡೋ ಮೂರೋ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಉಳಿದಂತೆ ಒಬ್ಬ ಕಲಾವಿದನ ಒಂದೊಂದೇ ಕಲಾಕೃತಿ ಪ್ರದರ್ಶನದಲ್ಲಿದೆ.ಸೃಜನಶೀಲ ಕಲಾವಿದ ಎಂದೇ ಗುರುತಿಸಿಕೊಂಡಿರುವ ಉಡುಪಿಯ ಪುರುಷೋತ್ತಮ ಅಡ್ವೆ ಅವರ ಎರಡು ಕಲಾಕೃತಿಗಳು ಅವರ ಅಧ್ಯಯನ  ಮತ್ತು ಚಿಂತನೆಯ ಪ್ರತೀಕವಾಗಿ ಮೂಡಿಬಂದಿವೆ. ಚಿತ್ರಕಲೆಗೆ ವಸ್ತು/ ವಿಷಯವನ್ನು ಹುಡುಕುತ್ತಾ ಬೇರೆ ಬೇರೆ ರಾಜ್ಯಗಳಿಗೆ, ಕುಗ್ರಾಮಗಳಿಗೆ ಪ್ರವಾಸ ಕೈಗೊಂಡು ಅಲ್ಲಿನ ಜನಜೀವನ, ಸಂಸ್ಕೃತಿಗಳನ್ನು ಮನನ ಮಾಡಿಕೊಂಡು ಕಲಾಕೃತಿಗಳನ್ನು ರಚಿಸುವುದು ಅಡ್ವೆ ಅವರ ವೈಶಿಷ್ಟ್ಯ. ಪ್ರದರ್ಶನದಲ್ಲಿರುವ ಆದಿವಾಸಿಗಳ ಸಂಸ್ಕೃತಿಯನ್ನು ಬಿಂಬಿಸುವ ಅವರ ಚಿತ್ರ ಇದಕ್ಕೆ ಸಾಕ್ಷಿ.ಒಂದೆಡೆ ದೊಡ್ಡದೊಂದು ಲೇಖನಿಯನ್ನು ಹಿಡಿದ ವ್ಯಕ್ತಿಯ ಹಿನ್ನೆಲೆಯಲ್ಲಿ ಒಂದಷ್ಟು ಕ್ರುದ್ಧ ಜನರ ನೇತೃತ್ವ ವಹಿಸಿಕೊಂಡಂತಿರುವ ಹಿರಿಯ ವ್ಯಕ್ತಿಯ ಚಿತ್ರವಿದೆ. ಅದು ಘರ್ಷಣೆಯೋ ಕುಶಲ ವಿಚಾರಣೆಯೋ ಎಂಬ ಬಗ್ಗೆ ಗೊಂದಲ ಮೂಡಿಸುವಂತಿದೆ, ಕುಂಚ ಹಿಡಿದ ಆ ಹಿರಿಯ ವ್ಯಕ್ತಿಯ ನಗೆ. ಮಹೇಂದ್ರ ಹಳವರ್ ಅವರ ಕಲಾಕೃತಿಯಿದು. ಹೀಗೆ, ವೀಕ್ಷಕರನ್ನು ಚಿಂತನೆಗೆ ಹಚ್ಚುವ ಕಲಾಕೃತಿಗಳು ಅನೇಕ ಇವೆ.ಕಲೆಯನ್ನು ಆಸ್ವಾದಿಸಲು ಬಯಸುವವರಿಗೆ ಕಲಾರಸ ಅಪೂರ್ವ ಆಯ್ಕೆಯಾಗಬೇಕು ಎಂಬ ಉದ್ದೇಶದೊಂದಿಗೆ ಭರತ್ ಕುಮಾರ್ ಅವರು ಆರಂಭಿಸಿರುವ ಈ ಗ್ಯಾಲರಿ ಆಂಪಿಥಿಯೇಟರ್, ಗ್ರಂಥಾಲಯ, ಫ್ಯಾಷನ್ ಮಳಿಗೆ, ಕೆಫೆ ಮತ್ತು ಕಲಾಭಿವೃದ್ಧಿ ಕೇಂದ್ರಗಳನ್ನು ಒಳಗೊಂಡಿದೆ. ಗ್ಯಾಲರಿ ಬಗ್ಗೆ ಇನ್ನಷ್ಟು ಮಾಹಿತಿಗೆ: www.kalarasa.com

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry