ಬಜಗೋಳಿಯಲ್ಲಿ ಯಶಸ್ವಿ ಕೃಷಿ ಮೇಳ

7

ಬಜಗೋಳಿಯಲ್ಲಿ ಯಶಸ್ವಿ ಕೃಷಿ ಮೇಳ

Published:
Updated:

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಫೆ. 4ರಿಂದ 6ರವರೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬಜಗೋಳಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 31ನೇ ಕೃಷಿ ಮೇಳ ಯಶಸ್ವಿಯಾಗಿ ನಡೆಯಿತು.ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಕೃಷಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ರೈತರ ಗಮನಕ್ಕೆ ತರುವ ಪ್ರಯತ್ನವಾಗಿ ಪ್ರತಿ ವರ್ಷ ಕೃಷಿ ಮೇಳವನ್ನು ಸಂಘಟಿಸುತ್ತಾರೆ. ಮೂರು ದಿನಗಳ ಕೃಷಿ ಮೇಳದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ರೈತರು ಹಾಗೂ ಆಸಕ್ತ ಜನರು ಭಾಗವಹಿಸಿದ್ದರು. ನಿರೀಕ್ಷೆಗೂ ಮೀರಿ ಸಮ್ಮೇಳನ ಯಶಸ್ವಿಯಾಯಿತು.ರೈತರಿಗೆ ಆಧುನಿಕ ತಂತ್ರಜ್ಞಾನದ ಮಾಹಿತಿ ನೀಡುವುದು ಹಾಗೂ ಮಾರ್ಗದರ್ಶನದೊಂದಿಗೆ ಸುತ್ತಲಿರುವ ನೆಲ, ಜಲ, ಪ್ರಕೃತಿ - ಪರಿಸರದ ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತೆ ಪ್ರೇರಣೆ ನೀಡುವುದು ‘ಗ್ರಾಮೀಣಾಭಿವೃದ್ದಿ ಯೋಜನೆ’ಯ ಉದ್ದೇಶ. ಕೃಷಿ ತರಬೇತಿ, ಶ್ರಮ ವಿನಿಮಯ, ಸಂಪೂರ್ಣ ಸುರಕ್ಷಾ, ಸಾವಯವ ಕೃಷಿ ಪದ್ಧತಿ, ಹೈನುಗಾರಿಕೆ ಅಭಿವೃದ್ಧಿ, ಸೌರ ಶಕ್ತಿಯ ಬಳಕೆ, ಗೋ ಶಾಲೆ ಅಭಿವೃದ್ಧಿ ಇತ್ಯಾದಿ ಯೋಜನೆಗಳನ್ನು ಗ್ರಾಮೀಣಾಭಿವೃದ್ದಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಗ್ರಾಮೀಣಾಭಿವೃದ್ದಿ ಯೋಜನೆಯ 15 ಲಕ್ಷ ಸದಸ್ಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.ಕೃಷಿ ಮೇಳದ ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪುಷ್ಪೋದ್ಯಮ, ಮೀನುಗಾರಿಕೆ ಮತ್ತಿತರ ಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತು ವಿಷಯಗಳಿದ್ದವು. ಚರ್ಚೆ, ಸಂವಾದ, ತಜ್ಞರಿಂದ ಮಾಹಿತಿ ವಿನಿಮಯ, ರೈತ ಮಹಿಳೆಯರ ವಿಚಾರಗೋಷ್ಠಿ, ಘನತ್ಯಾಜ್ಯ ನಿರ್ವಹಣೆ, ಸಾವಯವ ಕೃಷಿ ಪ್ರಾತ್ಯಕ್ಷಿಕೆ ಇತ್ಯಾದಿಗಳನ್ನು ಸಂಘಟಿಸಲಾಗಿತ್ತು.

 ರೈತರೊಂದಿಗೆ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆಲೆ ಮನೆಯಲ್ಲಿ ಕಬ್ಬಿನ ರಸ ತೆಗೆದು ಬೆಲ್ಲ ತಯಾರಿಸುವ ಸಾಂಪ್ರದಾಯಿಕ ವಿಧಾನ, ಒನಕೆಯಿಂದ ಭತ್ತ ಕುಟ್ಟುವುದು, ಅಕ್ಕಿ ಮುಡಿ ಕಟ್ಟುವುದು, ಬೈಹುಲ್ಲಿನ ರಾಶಿ, ಕರಕುಶಲ ವಸ್ತುಗಳ ತಯಾರಿ ಇತ್ಯಾದಿ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶನದೊಂದಿಗೆ ಟ್ರಾಕ್ಟರ್, ಪಂಪ್‌ಸೆಟ್, ಹನಿ ನೀರಾವರಿ ತಂತ್ರಜ್ಞಾನ, ಸಾವಯವ ಕೃಷಿ ಪದ್ಧತಿ, ಮಿಶ್ರಬೆಳೆ ಇತ್ಯಾದಿ ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆಯೂ ರೈತರಿಗೆ ಮೇಳದಲ್ಲಿ ಮಾಹಿತಿ ನೀಡಲಾಯಿತು. ಕೃಷಿ ಮೇಳ ರೈತರಲ್ಲಿರುವ ಹತಾಶೆ ಭಾವನೆ ದೂರಮಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಯಶಸ್ವಿಯಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry