ಬಜಾರ ರಸ್ತೆ: ಅವ್ಯವಸ್ಥೆಯ ತಾಣ

7

ಬಜಾರ ರಸ್ತೆ: ಅವ್ಯವಸ್ಥೆಯ ತಾಣ

Published:
Updated:

ಚಿಕ್ಕಬಳ್ಳಾಪುರ: ಪಾದಚಾರಿ ಮಾರ್ಗ ಆಕ್ರಮಿಸಿಕೊಂಡು ವ್ಯಾಪಾರ ಮಾಡಬಾರದು, ಸಾರ್ವಜನಿಕ ಸ್ಥಳಗಳಲ್ಲಿ ಮನಬಂದಂತೆ ವಾಹನಗಳ ನಿಲುಗಡೆ ಮಾಡಬಾರದು ಎಂದು ಪೊಲೀಸರು ಪದೇ ಪದೇ ಸೂಚನೆ ನೀಡುತ್ತಿದ್ದಾರೆ. ಪೊಲೀಸರ ಸಹಯೋಗದಲ್ಲಿ ನಗರಸಭೆ ಅಧಿಕಾರಿಗಳು ಆಗಾಗ್ಗೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.ನೋಟಿಸ್ ಕೂಡ ಹೊರಡಿಸುತ್ತಿದ್ದಾರೆ. ಆದರೆ ಇದ್ಯಾವುದರ ಪರಿಣಾಮ ರಸ್ತೆ ಮತ್ತು ಪಾದಚಾರಿ ಮಾರ್ಗದ ಮೇಲೆ ಆಗಿಲ್ಲ. ಸಾರ್ವಜನಿಕರೂ ಸಹ ಗಂಭೀರವಾಗಿ ಅದನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಚಿಕ್ಕಬಳ್ಳಾಪುರದ ಬಜಾರ ರಸ್ತೆ.ಬಜಾರ ರಸ್ತೆಯ ಒಂದು ಮೂಲೆಯಿಂದ ಮತ್ತೊಂದು ಮೂಲೆಯವರೆಗೆ ಒಂದು ಸುತ್ತು ಹಾಕಿದರೆ ಸಾಕು, ಎಲ್ಲ ರೀತಿಯ ಅವ್ಯವಸ್ಥೆಗಳು ಗೋಚರಿಸುತ್ತವೆ. ಸಾರ್ವಜನಿಕರಿಗೆ ನಡೆದಾಡಲು ಅವಕಾಶ ಇರದಂತೆ ಪಾದಚಾರಿ ಮಾರ್ಗ ಒತ್ತುವರಿಗೊಂಡಿರುವುದು, ರಸ್ತೆ ಮಧ್ಯೆ ಮತ್ತು ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿರುವುದು, ಕೆಲ ವ್ಯಾಪಾರಸ್ಥರು ಕಟ್ಟೆಗಳು ಮತ್ತು ಮೆಟ್ಟಿಲುಗಳನ್ನು ಕಟ್ಟಿಕೊಂಡಿರುವುದು ಮುಂತಾದವುಗಳ ದರ್ಶನವಾಗುತ್ತದೆ. ಈ ಎಲ್ಲ ಅವ್ಯವಸ್ಥೆಗಳ ಬಗ್ಗೆ ಯಾರಾದರೂ ಪ್ರಶ್ನಿಸಲು ಮುಂದಾದರೆ, ‘ಇದು ಎಲ್ಲ ಸಾಮಾನ್ಯ. ವ್ಯಾಪಾರ ಮಾಡಲಿಕ್ಕೆ ನಮಗೆ ಬೇರೆ ಸ್ಥಳವಾದರೂ ಎಲ್ಲಿದೆ’ ಎಂಬ ಉತ್ತರ ಸಿಗುತ್ತದೆ.ಸದ್ದುಗದ್ದಲ ಮತ್ತು ದೂಳುರಾಶಿಯ ನಡುವೆ ಸಾರ್ವಜನಿಕರು ಇಲ್ಲಿ ನಡೆದಾಡಬೇಕು. ವಾಹನ ಸವಾರರು ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ಸುಲಭವಾಗಿ ಪಾರಾಗುವುದಿಲ್ಲ. ಏಕಮುಖ ಸಂಚಾರ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬಂದರೂ ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಂಡಿಲ್ಲ.ಇಷ್ಟೇ ಅಲ್ಲ, ಬೃಹತ್ ವಾಹನವೊಂದು ಈ ರಸ್ತೆಯ ಮೂಲಕ ಹಾದು ಹೋದರೆ, ಸಂಚಾರ ವ್ಯವಸ್ಥೆಯನ್ನು ಸಹಜ ರೀತಿಗೆ ತರಲು ತುಂಬ ಸಮಯ ಬೇಕಾಗುತ್ತದೆ. ಹೂಹಣ್ಣು ಮತ್ತು ತರಕಾರಿಗಳ ಮಾರಾಟ ಅಲ್ಲೇ ನಡೆಯುವುದರಿಂದ, ಅವುಗಳನ್ನು ಕೊಳ್ಳುವ ನೆಪದಲ್ಲಿ ಸಾರ್ವಜನಿಕರು ಕೆಲವೇ ನಿಮಿಷಗಳವರೆಗೆ ವಾಹನಗಳನ್ನು ನಿಲುಗಡೆ ಮಾಡಿದರೂ ವಾಹನ ದಟ್ಟಣೆಗೆ ಕಾರಣವಾಗುತ್ತದೆ.‘ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ದೇವಸ್ಥಾನಗಳನ್ನು ತೆರವುಗೊಳಿಸಲಾಯಿತು. ಮರಗಳನ್ನು ಕಡಿಯಲಾಯಿತು. ಆದರೆ ಅದನ್ನು ಬುಡಸಮೇತ ಕೀಳದೇ ಹಾಗೆಯೇ ಬಿಟ್ಟಿದ್ದಾರೆ. ಅದು ಒಂದು ರೀತಿಯ ಸಮಸ್ಯೆಯಾದರೆ, ಇಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳದ್ದೇ ಮತ್ತೊಂದು ರೀತಿಯ ಸಮಸ್ಯೆ. ರಸ್ತೆ ಮೇಲೆ ನಡೆಯಲಾಗದ ಮತ್ತು ಪಾದಚಾರಿ ಮಾರ್ಗದ ಮೇಲೆ ಹೆಜ್ಜೆಯಿಡಲಾಗದ ಸ್ಥಿತಿಯನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ.ಸಾರ್ವಜನಿಕ ಸ್ಥಳಗಳಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ ಜಿಲ್ಲಾಡಳಿತ ಇಲ್ಲಿನ ವ್ಯವಸ್ಥೆಯನ್ನು ಯಾಕೆ ಸರಿಪಡಿಸುತ್ತಿಲ್ಲ? ನಗರಸಭೆಗೆ ಹೋಗಲು ಇದು ಮುಖ್ಯರಸ್ತೆಯಾಗಿದ್ದರೂ ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳು ಯಾಕೆ ಗಮನಹರಿಸುತ್ತಿಲ್ಲ’ ಎಂದು ನಿವೃತ್ತ ಉದ್ಯೋಗಿ ಕೃಷ್ಣೇಗೌಡ ಪ್ರಶ್ನಿಸುತ್ತಾರೆ.ನಗರಸಭೆ, ನಗರ ಪೊಲೀಸ್ ಠಾಣೆ ಮತ್ತು ಅತಿ ಹೆಚ್ಚಿನ ಚಿನ್ನಾಭರಣ ಮಳಿಗೆಗಳನ್ನು ಹೊಂದಿರುವ ಗಂಗಮ್ಮಗುಡಿ ರಸ್ತೆಗೆ ಹೋಗಲು ಬಜಾರ ರಸ್ತೆ ಮುಖ್ಯರಸ್ತೆಯಾಗಿದೆ. ಸ್ಥಳಾವಕಾಶವಿಲ್ಲದ ಕಿರಿದಾದ ರಸ್ತೆಯಲ್ಲಿ ಸಾಗುವುದಾದರೂ ಹೇಗೆ? ಸಾರ್ವಜನಿಕ ಸ್ಥಳಗಳ ಒತ್ತುವರಿ ತೆರವುಗೊಳಿಸಲು ನಗರಸಭೆ ಅಥವಾ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು.ಸಂಚಾರ ವ್ಯವಸ್ಥೆ ಸುಧಾರಿಸಲು ಪೊಲೀಸ್ ಇಲಾಖೆ ಗಮನಹರಿಸಬೇಕು. ಈ ರಸ್ತೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ತಾತ್ಕಾಲಿಕ ಕ್ರಮಗಳನ್ನು ತೆಗೆದುಕೊಂಡರೆ ಸಾಲದು, ಶಾಶ್ವತ ಪರಿಹಾರ ಕಂಡು ಹಿಡಿಯಬೇಕು’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry