ಶುಕ್ರವಾರ, ಮೇ 20, 2022
21 °C

ಬಜೆಟ್:ಆರ್ಥಿಕ ಶಿಸ್ತಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಂಡಿಸಿದ ಮೊದಲ ಬಜೆಟ್‌ನಲ್ಲಿ ಆರ್ಥಿಕ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ಸರ್ಕಾರದ ವಿವಿಧ ಇಲಾಖೆಗಳು ಯೋಜನೆಗಳ ವೆಚ್ಚದ ಪಟ್ಟಿ (ಬಿಲ್) ತಯಾರಿಕೆ ಮತ್ತು ಪಾವತಿಯನ್ನು ಆನ್‌ಲೈನ್ ಮೂಲಕವೇ ನಿರ್ವಹಿಸುವ ವ್ಯವಸ್ಥೆ ವರ್ಷಾಂತ್ಯದಿಂದ ಜಾರಿಗೆ ಬರಲಿದೆ. ಇಲಾಖೆಗಳು ವಿವಿಧ ಯೋಜನೆಗಳ ಹಣಕಾಸು ವೆಚ್ಚಗಳನ್ನು ಆನ್‌ಲೈನ್‌ನಲ್ಲಿಯೇ ವೀಕ್ಷಿಸಬಹುದಾಗಿದೆ.ಸರಕು-ಸೇವಾ ತೆರಿಗೆ

ಪ್ರಸ್ತಾವಿತ `ಸರಕು ಮತ್ತು ಸೇವಾ ತೆರಿಗೆ'(ಜಿಎಸ್‌ಟಿ) ಜಾರಿಯನ್ನು ರಾಜ್ಯ ಸ್ವಾಗತಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆ ಸಹಭಾಗಿತ್ವದಲ್ಲಿ `ಜಿಎಸ್‌ಟಿ' ಸಮಾಲೋಚನಾ ಸಮಿತಿ ರಚಿಸಲಾಗುವುದು. ಈ ಸಮಿತಿ ರಾಜ್ಯದಲ್ಲಿ `ಜಿಎಸ್‌ಟಿ' ಜಾರಿಯ ಸವಾಲುಗಳನ್ನು ಪರಿಶೀಲಿಸಿ ಸಲಹೆ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.ಬಜೆಟ್‌ನಲ್ಲಿ ಘೋಷಿಸಿರುವ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ಅಗತ್ಯ ಇರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಣಿಜ್ಯ ತೆರಿಗೆ ಮೂಲಕರೂ37,740 ಕೋಟಿ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ. ಜತೆಗೆ 2012ರ ಆಗಸ್ಟ್‌ನಿಂದ ಒಂದು ವರ್ಷದ ಅವಧಿಗೆ ಹೆಚ್ಚಿಸಲಾಗಿದ್ದ `ಮೌಲ್ಯವರ್ಧಿತ ತೆರಿಗೆ'(ವಿಎಟಿ-ವ್ಯಾಟ್) ದರಗಳನ್ನು (ಶೇ 5.5ರಿಂದ 14.5) ಜುಲೈ 31ರ ನಂತರವೂ ವಿಸ್ತರಿಸಲಾಗಿದೆ. ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ  ಹೆಚ್ಚುವರಿಯಾಗಿರೂ1,452 ಕೋಟಿ ರಾಜಸ್ವ ಸಂಗ್ರಹಣೆ ಆಗಲಿದೆ ಎಂದರು.ಅಗ್ಗದ ಪಾದರಕ್ಷೆಗೆ ತೆರಿಗೆ ವಿನಾಯ್ತಿ

ಇದೇ ವೇಳೆ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೆಲವು ತೆರಿಗೆ ವಿನಾಯ್ತಿಗಳನ್ನೂ ನೀಡಲಾಗಿದೆ.ರೂ300 ಬೆಲೆವರೆಗಿನ ಪಾದರಕ್ಷೆಗಳಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಸಕ್ಕರೆ ಕಾರ್ಖಾನೆಗಳಿಗೆ ಶೇ 1ರಷ್ಟು ಪ್ರವೇಶ ತೆರಿಗೆ ಬದಲಿಗೆ ಶೇ 1ರಷ್ಟು ಮೌಲ್ಯವರ್ಧಿತ ತೆರಿಗೆ ವಿಧಿಸಲಾಗಿದೆ. ಜತೆಗೆ ಕಬ್ಬು ಖರೀದಿ ತೆರಿಗೆಯನ್ನು ಪ್ರತಿ ಟನ್‌ಗೆರೂ20ರಷ್ಟು ಮತ್ತು `ಸೆಸ್'ರೂ5ರಷ್ಟು ತಗ್ಗಿಸಲಾಗಿದೆ.ಡೀಸೆಲ್ ಅಗ್ಗ

ಬಜೆಟ್‌ನಲ್ಲಿ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 16.75ರಿಂದ ಶೇ 15.65ಕ್ಕೆ ತಗ್ಗಿಸಲಾಗಿದೆ. ಇದರಿಂದ ಬೆಂಗಳೂರು ನಗರದಲ್ಲಿ ಡೀಸೆಲ್ ಬೆಲೆ 51 ಪೈಸೆಗಳಷ್ಟು ಕಡಿಮೆಯಾಗಲಿದೆ. ತೆರಿಗೆ ಕಡಿತದಿಂದ ಸರ್ಕಾರಕ್ಕೆರೂ300 ಕೋಟಿ ವರಮಾನ ನಷ್ಟವಾಗಲಿದೆ.ವಾಹನ ತೆರಿಗೆ

ಸಾರಿಗೆ ಇಲಾಖೆ ಮೂಲಕರೂ 4,120 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ. ಶಾಲಾ ಮಕ್ಕಳನ್ನು ಕೊಂಡೊಯ್ಯುವ ಮ್ಯಾಕ್ಸಿ ಕ್ಯಾಬ್‌ಗಳು ಪಾವತಿಸಬೇಕಿರುವ ವಾಹನ ತೆರಿಗೆಯಲ್ಲಿ ಶೇ 50ರಷ್ಟು ರಿಯಾಯ್ತಿ ನೀಡಲಾಗಿದೆ.ವೃತ್ತಿ ತೆರಿಗೆ

ಪಿಗ್ಮಿ ಮತ್ತಿತರೆ ಏಜೆಂಟ್‌ಗಳಿಗೆ ವೃತ್ತಿ ತೆರಿಗೆ ವಿನಾಯ್ತಿಗೆ ನಿಗದಿಪಡಿಸಿರುವ ವಾರ್ಷಿಕ ಆದಾಯದ ಮಿತಿಯನ್ನು ಈಗಿನರೂ36 ಸಾವಿರದಿಂದರೂ1.20 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವ ಸಲ್ಲಿಸಲಾಗಿದೆ. ಚಲನಚಿತ್ರ ಉದ್ಯಮದ ಮನವಿ ಹಿನ್ನೆಲೆಯಲ್ಲಿ ಹವಾನಿಯಂತ್ರಿತ ಚಿತ್ರ ಮಂದಿರಗಳು ಪ್ರೇಕ್ಷಕರಿಂದ ಸಂಗ್ರಹಿಸುವ ರೂ 3 ವರೆಗಿನ ಸೇವಾಶುಲ್ಕವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದುವರೆಗೆ ಈ ವಿನಾಯ್ತಿ ಮಿತಿ ರೂ1.50 ಇತ್ತು. ಇತರ ಚಿತ್ರಮಂದಿರಗಳಿಗೆ ಈ ಮಿತಿ ರೂ2ಕ್ಕೆ ಹೆಚ್ಚಿಸಲಾಗುವುದು. ಇದರಿಂದ ಮಾಲೀಕರು ಭರಿಸುವ ಚಿತ್ರಮಂದಿರ ತೆರಿಗೆ ಹೊರೆ ಕೊಂಚ ಕಡಿಮೆಯಾಗಲಿದೆ.ಅಬಕಾರಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆರೂ12,600 ಕೋಟಿ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಿದೆ.  ಈ ಹಿನ್ನೆಲೆಯಲ್ಲಿ ಎಲ್ಲ 17 ಸ್ಲ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಶೇ 16ರಿಂದ ಶೇ 40ರಷ್ಟು ಹೆಚ್ಚಿಸಲಾಗಿದೆ.ಅಬಕಾರಿ ಇಲಾಖೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವ ಉದ್ದೇಶದಿಂದ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಲ್ಲುಕೋಟೆ ಗ್ರಾಮದಲ್ಲಿ `ಆಧುನಿಕ ಅಬಕಾರಿ ಅಕಾಡೆಮಿ' ಸ್ಥಾಪನೆಗೆ ಸರ್ಕಾರ ಪ್ರಸ್ತಾವ ಸಲ್ಲಿಸಿದೆ. ರಾಜ್ಯದ 2048 ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳಲ್ಲಿ ಅಕ್ರಮವಾಗಿ ಮಧ್ಯ ತಯಾರಿಸುತ್ತಿದ್ದ ಕುಟುಂಬಗಳ ಸದಸ್ಯರನ್ನು ಗುರುತಿಸಲಾಗಿದ್ದು, ಇವರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.ನೋಂದಣಿ- ಮುದ್ರಾಂಕ

ಪ್ರಸಕ್ತ ಹಣಕಾಸು ವರ್ಷದಲ್ಲಿ ನೋಂದಣಿ ಮತ್ತು ಮುದ್ರಾಂಕದ ಮೂಲಕರೂ6,500 ಕೋಟಿ ತೆರಿಗೆ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಮೌಲ್ಯ ಪರಿಷ್ಕರಣೆ ಮಾಡಲಾಗುತ್ತಿದೆ. ಜಮೀನು ಮತ್ತು ಆಸ್ತಿಗಳ ನೋಂದಣಿ ಸಕಾಲ ಸೇವೆಯಡಿ ತಂದಿರುವುದರಿಂದ ಒಂದೇ ದಿನದಲ್ಲಿ ಆಸ್ತಿಗಳ ನೋಂದಣಿ ಮಾಡಬಹುದಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.