ಬಜೆಟ್‌ನಲ್ಲಿ ಕೊಡಗಿಗೆ ವಿಶೇಷ ಆದ್ಯತೆ: ಸಿಎಂ

7

ಬಜೆಟ್‌ನಲ್ಲಿ ಕೊಡಗಿಗೆ ವಿಶೇಷ ಆದ್ಯತೆ: ಸಿಎಂ

Published:
Updated:
ಬಜೆಟ್‌ನಲ್ಲಿ ಕೊಡಗಿಗೆ ವಿಶೇಷ ಆದ್ಯತೆ: ಸಿಎಂ

ಮಡಿಕೇರಿ: ಇದೇ ಫೆಬ್ರುವರಿ ತಿಂಗಳಲ್ಲಿ ಜನ ಸಾಮಾನ್ಯರು ಮೆಚ್ಚುವ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಿಳಿಸಿದರು.ಕೂಡಿಗೆಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪರಿಶಿಷ್ಟ ಪಂಗಡ ಸಮುದಾಯದವರಿಗೆ ಅರಣ್ಯ ಹಕ್ಕುಪತ್ರ, ಪೌಷ್ಠಿಕ ಆಹಾರ, ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಹಂತದಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹ ಧನ ವಿತರಣೆ ಮಾಡುವುದಕ್ಕೆ ಮೊದಲು ಮುಖ್ಯಮಂತ್ರಿ ಅವರು ಮಾತನಾಡಿದರು.ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರ ಜನತೆಯ ಆಶಯದಂತೆ ಐದು ವರ್ಷ ಪೂರ್ಣಗೊಳಿಸಲಿದ್ದು, ರಾಜ್ಯದ ಎಲ್ಲಾ ಸಮುದಾಯದ ಜನತೆ ಮೆಚ್ಚುವ ರೀತಿಯ ಬಜೆಟ್ ಮಂಡನೆ ಮಾಡಲಾಗುವುದು. ಕೊಡಗು ಜಿಲ್ಲೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಅವರು ಹೇಳಿದರು.ಕೊಡಗು ಜಿಲ್ಲೆಯ ಲೋಕೋಪಯೋಗಿ ರಸ್ತೆಗಾಗಿಯೇ 400 ಕೋಟಿ ಅನುದಾನ ಒದಗಿಸಲಾಗಿದೆ. ಹಾಗೆಯೇ ಗ್ರಾಮೀಣ ರಸ್ತೆಗೆ  ರೂ. 300ಕೋಟಿ ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಬಾಕಿ ಇರುವ ರಸ್ತೆ ಕಾಮಗಾರಿಗಳು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಸರ್ಕಾರ ಕಳೆದ ನಾಲ್ಕುವರೆ ವರ್ಷಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಎಲ್ಲಾ ಸಮುದಾಯದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ. ಈ ಬಗ್ಗೆ ನಾಗರಿಕರು ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಅವರು ಹೇಳಿದರು.ಮುಂದಿನ ಬಜೆಟ್‌ನಲ್ಲಿ ರಸ್ತೆ ಅಭಿವೃದ್ಧಿಗಾಗಿಯೇ ರೂ.150 ಕೋಟಿ  ಪ್ರಕಟಿಸುವಂತೆ  ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಜಿಲ್ಲೆಗೆ ಕಳೆದ ನಾಲ್ಕುವರೆ ವರ್ಷದಲ್ಲಿ ವೈದ್ಯಕೀಯ ಕಾಲೇಜು, ಸೈನಿಕ ಶಾಲೆ, ಚಿಕ್ಕಳುವಾರದಲ್ಲಿ ವಿಶ್ವವಿದ್ಯಾನಿಲಯ, ಎಂಜಿನಿಯರಿಂಗ್ ಕಾಲೇಜು, ಜಿಲ್ಲಾಡಳಿತ ಸಂಕೀರ್ಣ ಹೀಗೆ ನಾನಾ ಯೋಜನೆಗಳು ಪ್ರಗತಿಯ ಹಂತದಲ್ಲಿವೆ ಎಂದು ಹೇಳಿದರು.

ಕೂಡಿಗೆ ಬಳಿ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಜಾಗ ಗುರ್ತಿಸಲಾಗಿದ್ದು,  ಈಗಾಗಲೇ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.ಬೆಳಗಾವಿ ಅಧಿವೇಶನದಲ್ಲಿ 194ಸಿ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಸಕ್ರಮಗೊಳಿಸಲು ಕ್ರಮವಹಿಸಲಾಗಿದೆ. ಜಮ್ಮೋಬಾಣೆ ಸಮಸ್ಯೆ ಇತ್ಯಥ್ಯವಾಗಲಿದೆ. ಎಲ್ಲಾ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗುವುದು.ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ರಾಜಾರಾವ್ ಮಾತನಾಡಿ, ಭಾರತೀಯ ಜನತಾ ಪಕ್ಷದ ಸರ್ಕಾರ ಎಲ್ಲಾ ಸಮುದಾಯದ ಬಡಜನರ ಕಣ್ಣೀರು ಒರೆಸುವ ಕೆಲಸ ಮಾಡಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಿ.ಶಿವಪ್ಪ, ಸದಸ್ಯ ಚಿತ್ರ ರಾಜೇಶ್, ಬಿ.ಬಿ.ಭಾರತೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರೆಯೂರು ಜಯಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ, ಉಪ ವಿಭಾಗಾಧಿಕಾರಿ ಜಿ.ಪ್ರಭು, ಮತ್ತಿತರರು ಇದ್ದರು.ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಸ್ವಾಗತಿಸಿದರು, ಭಾವನ ಪ್ರಾರ್ಥಿಸಿದರು, ತಿಲಗಾರ್  ನಿರೂಪಿಸಿದರು, ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಜೆ ಗಂಟಿ ವಂದಿಸಿದರು.`2 ಸಾವಿರ ತಕರಾರು ಅರ್ಜಿ'

ಮಡಿಕೇರಿ: 
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಿಗದಿ ಮಾಡಿರುವ ವಾರ್ಡ್ ಮೀಸಲಾತಿ ಕುರಿತಂತೆ ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ತಕರಾರು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಿಳಿಸಿದರು.ನಗರದ ಹೊರವಲಯದ ಗಾಲ್ಪ್ ಮೈದಾನದ ಹೆಲಿಪ್ಯಾಡ್‌ನಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.ತಕರಾರು ಅರ್ಜಿಗಳ ಕುರಿತಂತೆ ಪರಿಶೀಲನೆ ನಡೆಯುತ್ತಿದೆ. ಇದನ್ನು ಸರಿಪಡಿಸಲು ಹೈಕೋರ್ಟ್‌ನಲ್ಲಿ ಕಾಲಾವಕಾಶ ಕೇಳಲಾಗಿದೆ ಎಂದು ಹೇಳಿದರು.ಸರ್ಕಾರ ಪರ ವಕೀಲರು ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ವಾರ್ಡ್ ಮೀಸಲಾತಿ ಪಟ್ಟಿ ತಯಾರಿಸಲು ಹೈಕೋರ್ಟ್‌ನಲ್ಲಿ 15 ದಿನಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಮುಂದಿನ ಆದೇಶ ಆಧರಿಸಿ ಸರ್ಕಾರ ಕ್ರಮಕೈಗೊಳ್ಳಲಿದೆ  ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry