ಬಜೆಟ್‌ನಲ್ಲಿ ರೂ 5 ಕೋಟಿ ಮೀಸಲು!

7

ಬಜೆಟ್‌ನಲ್ಲಿ ರೂ 5 ಕೋಟಿ ಮೀಸಲು!

Published:
Updated:

ಬೆಂಗಳೂರು: ‘ರಾಜಕಾರಣಿಗಳ ಬೇನಾಮಿ ಆಸ್ತಿ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿ; ಕೋಟಿ ಕೋಟಿ ಬಹುಮಾನ ಗೆಲ್ಲಿ...’ ಎಂದು ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರು ಘೋಷಿಸಿದರು.ನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ಅನೇಕ ರಾಜಕಾರಣಿಗಳು ಬೆಂಗಳೂರು ಸುತ್ತಮುತ್ತ ಸಾವಿರಾರು ಎಕರೆ ಬೇನಾಮಿ ಜಮೀನನ್ನು ಹೊಂದಿದ್ದು, ಅದೆಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಲು ನೆರವಾಗಿ ಎಂದು ಸಾರ್ವಜನಿಕರನ್ನು ಕೋರಿದ್ದಾರೆ.ಈ ಸಂಬಂಧ ಒಂದೆರಡು ದಿನಗಳಲ್ಲಿ ಮಾಧ್ಯಮಗಳಲ್ಲೂ ಜಾಹೀರಾತು ನೀಡಲಾಗುವುದು. ಬೇನಾಮಿ ಆಸ್ತಿ ವಿವರಗಳನ್ನು ನೀಡುವ ವ್ಯಕ್ತಿಗಳ ಹೆಸರುಗಳನ್ನು ಗೋಪ್ಯವಾಗಿ ಇಡಲಾಗುವುದು. ಭೂಮಿಯ ಬೆಲೆ ಆಧರಿಸಿ ನಗದು ಬಹುಮಾನ ನೀಡಲಾಗುವುದು. ಈ ಸಲುವಾಗಿಯೇ ಈ ಬಾರಿ ಬಜೆಟ್‌ನಲ್ಲಿ ಐದು ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಹೇಳಿದರು.‘ಅಂದಾಜಿನ ಪ್ರಕಾರ ರಾಜಕಾರಣಿಗಳು ಸೇರಿದಂತೆ ಪ್ರಮುಖರ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬೇನಾಮಿ ಆಸ್ತಿಗಳು ಬೆಂಗಳೂರು ಸುತ್ತಮುತ್ತಲೇ ಇದ್ದು ಅವೆಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಮೊದಲು ಬೆಂಗಳೂರು ಸುತ್ತಮುತ್ತಲಿನ ಆಸ್ತಿ ವಿವರಗಳನ್ನು ಸಲ್ಲಿಸಿ, ನಂತರ ಇತರ ನಗರಗಳ ಬಗ್ಗೆ ಯೋಚಿಸೋಣ’ ಎಂದು ನುಡಿದರು.‘ನನ್ನ ಉದ್ದೇಶ ಇರುವುದು ನನ್ನ ಅಧಿಕಾರಾವಧಿಯ ಕೊನೆ ವರ್ಷದ ಬಜೆಟ್ ಒಂದು ಲಕ್ಷ ಕೋಟಿ ರೂಪಾಯಿಯದ್ದಾಗಬೇಕು. ಈ ನನ್ನ ಗುರಿಗೆ ಬೇನಾಮಿ ಆಸ್ತಿಯ ಒಂದು ಲಕ್ಷ ಕೋಟಿ ನೆರವಾಗಲಿದೆ. ಇದರಿಂದ ಬೆಂಗಳೂರು ಮತ್ತು ಈ ರಾಜ್ಯವನ್ನು ನಂದನವನ ಮಾಡಲಾಗುವುದು’ ಎಂದು ಹೇಳಿದರು.ಬೇನಾಮಿ ಆಸ್ತಿ ವಿವರಗಳನ್ನು ಶಾಸಕರು ಕೂಡ ನೀಡಬಹುದು. ಎಲ್ಲವನ್ನೂ ಗೋಪ್ಯವಾಗಿ ಇಡಲಾಗುವುದು ಎಂದು ಹೇಳಿದರು.ಮಾತು ಬಂದ್: ‘ಇನ್ನು ಮುಂದೆ ಲೋಕಾಯುಕ್ತ, ಕಾಂಗ್ರೆಸ್ ಮತ್ತು ಜೆಡಿಎಸ್ ಬಗ್ಗೆ ಮಾತನಾಡಬೇಡಿ ಎನ್ನುವ ಸಲಹೆಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. ಆ ಪ್ರಕಾರ ನಾನು ನಡೆದುಕೊಳ್ಳುತ್ತೇನೆ. ಇನ್ನೇನಿದ್ದರೂ ಬಜೆಟ್ ಸಿದ್ಧತೆ ಕಡೆಗೆ ಗಮನ ನೀಡುತ್ತೇನೆ. ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ.  ಫೆಬ್ರುವರಿ 3ನೇ ವಾರದಲ್ಲಿ ಬಜೆಟ್ ಮಂಡಿಸುತ್ತೇನೆ. ಹೊಸ ಯೋಜನೆಗಳು ಏನೇ ಇದ್ದರೂ ಆ ಬಗ್ಗೆ ಫೆ.1ರೊಳಗೆ ಮಾಹಿತಿ ನೀಡಿ’ ಎನ್ನುವ ಸಲಹೆಯನ್ನೂ ಶಾಸಕರಿಗೆ ನೀಡಿದರು.ಆರೋಪಪಟ್ಟಿ: ಎಸ್.ಎಂ.ಕೃಷ್ಣ ಅವಧಿಯಿಂದ ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿನ ಎಲ್ಲ ಭೂಹಗರಣಗಳ ಬಗ್ಗೆ ಆರೋಪಪಟ್ಟಿ ಸಿದ್ಧಪಡಿಸಿ, ಅದನ್ನು ಹಿಂದಿ, ಇಂಗ್ಲಿಷ್‌ನಲ್ಲಿ ಮುದ್ರಿಸಿ, ದೆಹಲಿಯಲ್ಲಿ ಎಲ್ಲ ಸಂಸದರಿಗೆ ಹಂಚಲಾಗುವುದು. ಎಚ್.ಡಿ. ದೇವೇಗೌಡರ ಅಕ್ರಮಗಳ ಬಗ್ಗೆ ಬರೆದರೆ ದೊಡ್ಡ ಪುಸ್ತಕವೇ ಆಗುತ್ತದೆ ಎಂದು ಹೇಳಿದರು.ಪ್ರಾಮಾಣಿಕರೇ ಇದ್ದರೆ ವಿಧಾನಸೌಧದ ಮುಂದೆ ಬಹಿರಂಗ ಚರ್ಚೆಗೆ ಬನ್ನಿ. ಕಾಂಗ್ರೆಸ್, ಜೆಡಿಎಸ್ ಕಡೆಯಿಂದಲೂ ಇಬ್ಬರು ನ್ಯಾಯಾಧೀಶರನ್ನು ನೇಮಿಸಲಿ. ಸಾಹಿತಿಗಳು, ನಾಡಿನ ಗಣ್ಯರ ಸಮ್ಮುಖದಲ್ಲಿ ಈ ಚರ್ಚೆ ನಡೆಯಲಿ. ಸತ್ಯ ಏನು ಎನ್ನುವುದು ಜನರಿಗೂ ತಿಳಿಯಲಿ ಎಂದು ನುಡಿದರು.ಜೆಡಿಎಸ್ ಮತ್ತು ಕಾಂಗ್ರೆಸ್ ‘ಹಿಟ್ ಆಂಡ್ ರನ್ ಕೇಸ್’ ಮಾಡುತ್ತಿದ್ದು, ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ. ಆ ಪಕ್ಷಗಳ ಅಕ್ರಮಗಳ ಬಗ್ಗೆಯೂ ಕಿರುಹೊತ್ತಿಗೆ ರೂಪದಲ್ಲಿ ಮುದ್ರಿಸಿ ಎಲ್ಲರಿಗೂ ಹಂಚಲಾಗುವುದು ಎಂದು ಅವರು ಹೇಳಿದರು.ಸಭೆಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ವೆಂಕಯ್ಯನಾಯ್ಡು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಆರ್.ವಿ. ದೇಶಪಾಂಡೆ, ಡಿ.ಕೆ.ಶಿವಕುಮಾರ್... ಹೀಗೆ ಎಲ್ಲರೂ ವಿಫಲರಾದರು. ಈಗ ಮತ್ತೊಬ್ಬ ಮೇಟಿ ಡಾ.ಜಿ.ಪರಮೇಶ್ವರ್ ಬಂದಿದ್ದು ಅವರಿಂದಲೂ ಅದನ್ನು ಅಧಿಕಾರಕ್ಕೆ ತರಲು ಸಾಧ್ಯ ಇಲ್ಲ. ಇವರ ಜತೆಗೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನೇ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.ಈ ಸಲುವಾಗಿ ರಾಜ್ಯದ ವಿವಿಧ ಕಡೆ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಫೆ.5ರಂದು ಹುಬ್ಬಳ್ಳಿಯಲ್ಲಿ, ಫೆ.6ರಂದು ಬೆಳಗಾವಿ ಮತ್ತು 7ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ರ್ಯಾಲಿಗಳನ್ನು ಆಯೋಜಿಸಲಾಗುವುದು. ಇದಲ್ಲದೆ, ಫೆ.8ರಿಂದ 10ರವರೆಗೆ ಬಿಜೆಪಿ ಶಾಸಕರಿಗೆ ನಾಗಪುರದಲ್ಲಿ ವಿಶೇಷ ತರಬೇತಿ ಶಿಬಿರ ಆಯೋಜಿಸಿದ್ದು, ಅದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ. ವಿಶೇಷ ವಿಮಾನದಲ್ಲಿ ರಾಜ್ಯದ ಎಲ್ಲ ಶಾಸಕರೂ ಅಲ್ಲಿಗೆ ತೆರಳಲಿದ್ದಾರೆ ಎಂದರು.ಸಚಿವ ಜನಾರ್ದನ ರೆಡ್ಡಿ ಮಾತನಾಡಿ, ಎಲ್ಲ ಶಾಸಕರೂ ಇದೇ 27ರಿಂದ 29ರವರೆಗೆ ನಡೆಯುವ ಹಂಪಿ ಉತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದರು. ಹಂಪಿ ಉತ್ಸವದಲ್ಲಿ ಈ ವರ್ಷವೂ ಮುಖ್ಯಮಂತ್ರಿಯವರಿಗೆ ವಿಜಯದ ಖಡ್ಗ ಕೊಟ್ಟು, ಅವರ ಶಕ್ತಿಯನ್ನು ಹೆಚ್ಚಿಸಲಾಗುವುದು ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry