ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಿ

7

ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಿ

Published:
Updated:

ಬೆಳಗಾವಿ: ‘ಮುಂಬರುವ ರಾಜ್ಯ ಬಜೆಟ್‌ನಲ್ಲಿ ಜವಳಿ ಉದ್ಯಮದ ಅಭಿವೃದ್ಧಿಗೆ ಹೆಚ್ಚಿನ ಹಣ ನಿಗದಿ ಮಾಡಬೇಕು. ನೇಕಾರರ ಬೇಡಿಕೆ ಈಡೇರಿಕೆಗೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ನೇಕಾರರ ವೇದಿಕೆಯ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.‘ದೇಶೀಯ ಕಲೆಗಾರಿಕೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಲ್ಲಿ ಸಾಕಷ್ಟು ಕೊಡುಗೆ ನೀಡಿರುವ ನೇಕಾರರ ಬದುಕು ಜಾಗತೀಕರಣದ ಪ್ರಭಾವದಿಂದ ಬೀದಿಪಾಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಜವಳಿ ಉಳಿಯಬೇಕಿದ್ದರೆ ಸರ್ಕಾರ ಆರ್ಥಿಕ ಧನಸಹಾಯ ಘೋಷಿಸಬೇಕು. ಶೇ 1ರ ಬಡ್ಡಿದರದ ಸಾಲ ಯೋಜನೆಯನ್ನು ಸರಳೀಕರಣ ಮಾಡಬೇಕು.ನೇಕಾರರಿಗೆ ವಿದ್ಯುತ್ ರಿಯಾಯಿತಿ ಬಡ್ಡಿ ವ್ಯತ್ಯಾಸದ ಹಣ ಬಿಡುಗಡೆ ಮಾಡಬೇಕು. ರೈತರಿಗೆ ಕೃಷಿ ಅಧ್ಯಯನ ಉದ್ದೇಶದಿಂದ ಹಮ್ಮಿಕೊಳ್ಳಲಾಗುವ ವಿದೇಶಿ ಪ್ರವಾಸ ವ್ಯವಸ್ಥೆಯನ್ನು ನೇಕಾರರಿಗೂ ವಿಸ್ತರಿಸಬೇಕು. ಇತರೇ ರಾಜ್ಯಗಳಲ್ಲಿ ಇರುವಂತೆ ನೇಕಾರರಿಗೆ ಉಚಿತ ವಿದ್ಯುತ್, ಪಡಿತರ ಅಕ್ಕಿ ಯೋಜನೆಯನ್ನು ಜಾರಿಗೆ ತರಬೇಕು’ ಎಂದು ಮನವಿಯಲ್ಲಿ ಕೋರಲಾಗಿದೆ.ಬೆಳಗಾವಿ ನಗರದ ಅನಗೋಳ ಭಾಗದಲ್ಲಿ ನೇಕಾರರ ಪ್ರತೇಕ ಬಡಾವಣೆ ನಿರ್ಮಿಸಿಕೊಡಬೇಕು. ಬೆಡ್‌ಶೀಟ್, ಟವೆಲ್, ವಿದ್ಯಾವಿಕಾಸ ಯೋಜನೆ, ಮಡಿಲು ಯೋಜನೆ, ಸಾರಿಗೆ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮವಸ್ತ್ರ ಸರಬರಾಜು ಯೋಜನೆಯನ್ನು ನೇರವಾಗಿ ನೇಕಾರರಿಗೆ ವಹಿಸಿಕೊಡಬೇಕು. ನೇಕಾರಿಕೆಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಿ ವಿವಿಧ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಮನವಿ ಆಗ್ರಹಿಸಲಾಗಿದೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ಏಕರೂಪ್ ಕೌರ್ ಅವರು ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.ಮನವಿ ಸಲ್ಲಿಕೆ ಸಂದರ್ಭದಲ್ಲಿ ನೇಕಾರರ ವೇದಿಕೆಯ ಮಖಂಡರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry