ಭಾನುವಾರ, ಜೂನ್ 20, 2021
28 °C

ಬಜೆಟ್ ಅಧಿವೇಶನದಲ್ಲಿ ಕಂಪೆನಿ ಮಸೂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಹು ನಿರೀಕ್ಷಿತ ಕಂಪೆನಿ ಮಸೂದೆಯು ಮುಂಬರುವ ಬಜೆಟ್ ಅಧಿವೇಶನದಲ್ಲಿ  ಅನುಮೋದನೆ ಪಡೆಯುವ ಸಾಧ್ಯತೆ ಇದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ,  ಪ್ರತಿಪಕ್ಷ ಮುಖಂಡರಾದ ಎಲ್.ಕೆ ಅಡ್ವಾಣಿ, ಸುಷ್ಮಾ ಸ್ವರಾಜ್ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದ್ದು, ಮಸೂದೆಯನ್ನು ಮರಳಿ ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ ಎಂದಿದ್ದಾರೆ.`ಸ್ಥಾಯಿ ಸಮಿತಿ ಕೂಡ ಮಸೂದೆಗೆ ಸಂಬಂಧಿಸಿದಂತೆ ಧನಾತ್ಮಕ ಪ್ರತಿಕ್ರಿಯೆ ನೀಡಿದೆ. ಬಜೆಟ್ ಅಧಿವೇಶನದಲ್ಲೇ ಮಸೂದೆ ಅನುಮೋದನೆಗೊಳ್ಳುವ ಭರವಸೆ ಇದೆ~ ಎಂದು  ಅವರು ಇಲ್ಲಿ ನಡೆದ ಕಾರ್ಯ್ರಮವೊಂದರಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಚಳಿಗಾಲದ ಅಧಿವೇಶನದಲ್ಲೇ `ಕಂಪೆನಿ ಮಸೂದೆಯನ್ನು ಮಂಡಿಸಬೇಕಾಗಿತ್ತು. ಆದರೆ,  ವಿರೋಧ ಪಕ್ಷಗಳ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ಮುಂದಕ್ಕೆ ಹಾಕಲಾಗಿತ್ತು.ಕಾರ್ಪೋರೇಟ್ ಸಾಮಾಜಿಕ ಬದ್ಧತೆಗೆ (ಸಿಎಸ್‌ಆರ್) ಸಂಬಂಧಿಸಿದ ನಿಯಮಗಳು ಕೂಡ ಹೊಸ  ಕಂಪೆನಿ ಮಸೂದೆ -2011ರಲ್ಲಿ ಅಡಕವಾಗಿವೆ. ಸ್ವತಂತ್ರ ನಿರ್ದೇಶಕರ ನೇಮಕಾತಿ, ಸಾರ್ವಜನಿಕ ಕೊಡುಗೆಗಳ ಮೂಲಕ (ಐಪಿಒ) ಬಂಡವಾಳ ಸಂಗ್ರಹಿಸುವುದು ಸೇರಿದಂತೆ ಹಲವು ಸಂಗತಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲಾಗಿದೆ.ಕಂಪೆನಿಗಳು ತಮ್ಮ ಸರಾಸರಿ ಲಾಭಾಂಶದ ಶೇ 2ರಷ್ಟನ್ನು 3 ವರ್ಷಗಳ ಅವಧಿಗೆ `ಸಿಎಸ್‌ಆರ್~ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದೂ ಹೊಸ ನಿಯಮದಲ್ಲಿ ಹೇಳಲಾಗಿದೆ. ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಹಳೆಯದಾದ 1956ರ ಕಂಪೆನಿ ಮಸೂದೆ ಹೊಸ ಕಾಯ್ದೆಯ ಮೂಲಕ ಪರಿಷ್ಕೃತಗೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.