ಬಜೆಟ್: ಜಿಲ್ಲೆಗೆ ಸಿಹಿಕಹಿ ಅನುಭವ

ಶುಕ್ರವಾರ, ಜೂಲೈ 19, 2019
22 °C

ಬಜೆಟ್: ಜಿಲ್ಲೆಗೆ ಸಿಹಿಕಹಿ ಅನುಭವ

Published:
Updated:

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ಬಜೆಟ್  ಬಳ್ಳಾರಿ ಜಿಲ್ಲೆಗೆ ಸಿಹಿ- ಕಹಿ ಅನುಭವ ನೀಡಿದೆ.ಕೈಗಾರಿಕೆ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಬಳ್ಳಾರಿಯಲ್ಲಿ ಬಹು ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ, ಹೊಸಪೇಟೆಯಲ್ಲಿ ಲಾರಿ ಟರ್ಮಿನಲ್ ನಿರ್ಮಾಣ, ಇತಿಹಾಸ ಪ್ರಸಿದ್ಧ ಹಂಪಿಗೆ ಆಗಮಿಸುವ ಪ್ರವಾಸಿಗರಿಗಾಗಿ `ಪ್ರವಾಸಿ ಪ್ಲಾಜಾ' ನಿರ್ಮಾಣ ಹಾಗೂ ಹೂವಿನ ಹಡಗಲಿಯಲ್ಲಿ ರಂಗಭಾರತಿ ಸಂಸ್ಥೆಯ ರಂಗಸಮುಚ್ಚಯ ನಿರ್ಮಾಣಕ್ಕೆ ರೂ 1 ಕೋಟಿ ಅನುದಾನ ನಿಡಿರುವುದು ಜಿಲ್ಲೆಗೆ ದೊರೆತ ಆದ್ಯತೆ.ತುಂಗಭದ್ರಾ ಜಲಾಶಯದ ಹೂಳು ತೆಗೆಯುವ  ಅಥವಾ ಪರ್ಯಾಯ ಜಲ ಸಂಗ್ರಹಾಲಯ ನಿರ್ಮಿಸುವ ನಿಟ್ಟಿನಲ್ಲಿ ಪ್ರಸ್ತಾಪಿಸದಿರುವುದು, ಗಣಿಗಾರಿಕೆ ಸ್ಥಗಿತದ ಬಳಿಕ ಸಮಸ್ಯೆ ಎದುರಿಸುತ್ತಿರುವ ಕಾರ್ಮಿಕ ವರ್ಗದ ಅಭ್ಯುದಯಕ್ಕೆ ಬಜೆಟ್‌ನಲ್ಲಿ ಚಕಾರ ಎತ್ತದಿರುವುದು ನಿರಾಸೆ ಮೂಡಿಸಿದೆ.ಅತಿಸಣ್ಣ, ಸಣ್ಣ ಮತ್ತು ಗುಡಿ ಕೈಗಾರಿಕೆ ಸ್ಥಾಪನೆ ಮತ್ತು ಪುನಶ್ಚೇತನಕ್ಕೆ ನಿರ್ದಿಷ್ಟ ಯೋಜನೆ ಜಾರಿಗೊಳಿಸದಿರುವ ನೂತನ ಸರ್ಕಾರ ಜನರ ನಿರೀಕ್ಷೆಯನ್ನು ಹುಸಿಯಾಗಿಸಿದೆ.ಪೌರ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವುದು ಕಾರ್ಮಿಕರ ಕೊರತೆಯಿಂದ ಬಳಲುತ್ತಿರುವ ಮಹಾನಗರ ಪಾಲಿಕೆಗೆ ಅನುಕೂಲ ಕಲ್ಪಿಸಲಿದ್ದು, ಪೌರ ಕಾರ್ಮಿಕರಲ್ಲಿ ನಿರಾಳ ಭಾವ ಮೂಡುವಂತೆ ಮಾಡಿದೆ.ಪೊಲೀಸ್ ವಸತಿ ಗೃಹಗಳ ನಿರ್ಮಾಣ ಯೋಜನೆ ಜಾರಿಗೊಳಿಸುವುದಾಗಿ ಪ್ರಕಟಿಸಿರುವುದೂ ಪೊಲೀಸ್ ಕುಟುಂಬಗಳಿಗೆ ನೆಮ್ಮದಿ ತಂದಿದ್ದರೆ, ಕೃಷಿ ವಲಯಕ್ಕೆ ಆದ್ಯತೆ ನೀಡಿ, ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ರೂ 2 ಲಕ್ಷದವರೆಗಿನ ಸಾಲಕ್ಕೆ ಬಡ್ಡಿಯನ್ನೇ ವಿಧಿಸದಿರುವ ನಿರ್ಧಾರ ಕೃಷಿಕ ಸಮುದಾಯದಲ್ಲಿ ಹರ್ಷ ಮೂಡಿಸಿದೆ.

ಅತಿ ಕೆಟ್ಟ ಬಜೆಟ್

ಈ ಹಿಂದೆ ಏಳು ಬಜೆಟ್ ನೀಡಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ  ಕೆಟ್ಟ ಬಜೆಟ್ ನೀಡಿದ್ದಾರೆ. ಬಜೆಟ್ ಜನಪರವಾಗಿಲ್ಲ. ಕೆಲವೇ ಕೆಲ ಸಮುದಾಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಜೆಟ್ ರೂಪಿಸಿದಂತಿದೆ. ಇರುವ ಎಲ್ಲ ಅನುಕೂಲಗಳನ್ನು ಮೈಸೂರು ಭಾಗಕ್ಕೆ ನೀಡಿದ್ದು, ಉತ್ತರ ಕರ್ನಾಟಕಕ್ಕೆ ಏನೂ ದೊರೆತಿಲ್ಲ.

ಚಂದ್ರಶೇಖರ್ ಸೊನ್ನದ, ವಕೀಲರುದೂರದೃಷ್ಟಿಯ ಬಜೆಟ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯ ತತ್ವದ ಚೌಕಟ್ಟಿನಲ್ಲೇ ಬಜೆಟ್ ಮಂಡಿಸಿದ್ದಾರೆ. ಹೊಸ ಸರ್ಕಾರದ ಮೊದಲ ಬಜೆಟ್‌ನಲ್ಲಿ ಅತಿಯಾದ ನಿರೀಕ್ಷೆ ಇರಿಸಿಕೊಳ್ಳುವುದೂ ಸರಿಯಲ್ಲ. ದೂರದೃಷ್ಟಿಯನ್ನು ಒಳಗೊಂಡ, ಕೃಷಿ ಬೆಲೆ ಆಯೋಗ, ಕೆರೆ ನೀರು ಸಂಗ್ರಹಣೆ, ಉದ್ಯೋಗದಲ್ಲಿ ಕೌಶಲ ಅಳವಡಿಕೆಗೆ ಆದ್ಯತೆ ನೀಡಿರುವ ಆರ್ಥಿಕ ಸ್ಥಿರತೆಯ ಬಜೆಟ್ ಇದಾಗಿದೆ.ಸಾಲದ ಹೊರೆಯಲ್ಲಿ ಮೌಲ್ಯವರ್ದಿತ ತೆರಿಗೆಯ ಮೂಲಕ ಅಪಾರ ಹಣ ಸೋರಿಕೆಯನ್ನು ತಡೆಗಟ್ಟುವ ಕ್ರಮಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಸ್ಥಾನಮಾನ ನೀಡುವಲ್ಲಿ ಈ ಬಜೆಟ್ ಯಶಸ್ವಿಯಾಗಿದೆ. 371ನೇ `ಜೆ' ಕಲಂ ಅನುಷ್ಠಾನಕ್ಕೆ ಒಂದಷ್ಟು ಅಂಶದ ಅನುದಾನ ನೀಡಬೇಕಿತ್ತು. ಬಳ್ಳಾರಿಯ ಒಣಭೂಮಿ ಬೇಸಾಯದ ಮೂಲವಾದ ಹಗರಿ ಸಂಶೋಧನಾ ಕೇಂದ್ರದ ಅಭಿವೃದ್ಧಿಗೆ, ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆಗೆ ಮುಂದಾಗದೆ ಇರುವುದು ಬೇಸರ ತಂದಿದೆ.

ಸಿರಿಗೇರಿ ಪನ್ನರಾಜ್, ಚಾರ್ಟ್‌ಟ್ ಅಕೌಂಟೆಂಟ್ಸಿಹಿ- ಕಹಿ ಬಜೆಟ್

ಸಿದ್ದರಾಮಯ್ಯ ಅವರು ಮಂಡಿಸಿರುವ ಈ ಬಜೆಟ್ ಸಿಹಿ ಮತ್ತು ಕಹಿಯನ್ನು ಒಳಗೊಂಡಿದೆ. ವ್ಯಾಪಾರೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ನೆರವನ್ನೇ ನೀಡದ ಬಜೆಟ್ ತೀವ್ರ ನಿರಾಶಾದಾಯಕವಾಗಿದೆ. ಔದ್ಯೋಗಿಕ ಕ್ಷೇತ್ರಕ್ಕೆ ಪ್ರತ್ಯೇಕ ಒತ್ತು ನೀಡಿರುವುದು ಅಭಿನಂದನೀಯ. ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಹೆಚ್ಚಿಸಿರುವುದು ಬೇಸರದ ಸಂಗತಿ. ಡೀಸೆಲ್ ಮಾರಾಟ ತೆರಿಗೆ ಕಡಿಮೆ ಮಾಡಿರುವುದು ಸಂತಸಕರ. ಯಾದಗಿರಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಮುಂದಾಗಿರುವುದು ಅಭಿನಂದನೀಯ.

ವಿ.ರವಿಕುಮಾರ್, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಗೌ.ಕಾರ್ಯದರ್ಶಿಚುನಾವಣಾ ಬಜೆಟ್

ಬಿಜೆಪಿ ಸರ್ಕಾರ ಬಡಜನ ನೆರವಿಗೆ ಘೋಷಿಸಿದ್ದ ಕೆಲವು ಅಂಶಗಳು ಅನುಕೂಲಕರವಾಗಿದ್ದವು. ಭಾಗ್ಯಲಕ್ಷ್ಮಿ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಯಶಸ್ವಿನಿ ಯೋಜನೆಗಳನ್ನು ಮುಂದುವರೆಸಿಲ್ಲ. ರಾಜ್ಯದಲ್ಲಿ ಹೊಸದಾಗಿ 43 ತಾಲ್ಲೂಕುಗಳ ಘೋಷಣೆ ಕುರಿತೂ ಪ್ರಸ್ತಾಪಿಸಿಲ್ಲ. ಕೃಷಿ ಉತ್ಪನ್ನಗಳ ಮೇಲಿನ ಸಬ್ಸಿಡಿ ಬಗ್ಗೆ ಚಕಾರ ಎತ್ತಿಲ್ಲ. ಮೇಲ್ನೋಟಕ್ಕೆ ಇದು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡ ಬಜೆಟ್ ಎನ್ನುವುದು ಗೊತ್ತಾಗುತ್ತದೆ.

ಗೋನಾಳ್ ಮುರಾರಿಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿರೈತರಿಗೆ ನಿರಾಶಾದಾಯಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ಬಜೆಟ್ ಈ ಭಗದ ರೈತ ಸಮುದಾಯಕ್ಕೆ ನಿರಾಶಾದಾಯಕವಾಗಿದೆ. ತುಂಗಭದ್ರಾ ಜಲಾಶಯದ ಸಮಸ್ಯೆಗಳ ಕುರಿತು ಹೋರಾಟಕ್ಕೆ ಇಳಿದಾಗ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದ ಸಿದ್ದರಾಮಯ್ಯ, ಬಜೆಟ್‌ನಲ್ಲಿ ತುಂಗಭದ್ರಾ ಜಲಾಶಯದ ಹೂಳನ್ನು ಎತ್ತುವ ಕುರಿತು ಪ್ರಸ್ತಾಪಿಸದೆ ಇರುವುದು  ನಿರಾಸೆ ಮೂಡಿಸಿದೆ. ಸಮಾನಾಂತರ ಜಲಾಶಯ ಕುರಿತು ಪ್ರಸ್ತಾಪವೇ ಇಲ್ಲದಿರುವುದು ಬೇಸರ ತಂದಿದೆ.

ದರೂರು ಪುರುಷೋತ್ತಮಗೌಡ, ರೈತ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry