ಶುಕ್ರವಾರ, ಮೇ 27, 2022
31 °C

ಬಜೆಟ್ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಜೆಟ್ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಿಸಿ, ಸಚಿವರ ಖಾತೆಗಳಲ್ಲಿ ಮಹತ್ವದ ಬದಲಾವಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಈಗಾಗಲೇ  ವರಿಷ್ಠರ ಜತೆ ಸಂಪುಟ ವಿಸ್ತರಣೆ ಕುರಿತು ಮಾತುಕತೆ ಆರಂಭವಾಗಿದೆ. ಪ್ರಾತಿನಿಧ್ಯ  ದೊರೆಯದ ಜಾತಿ ಹಾಗೂ ಜಿಲ್ಲೆಗಳನ್ನು ಗಮನದಲ್ಲಿ ಇಟ್ಟುಕೊಂಡು ವಿಸ್ತರಣೆ ನಡೆಯಲಿದೆ ಎಂದು  ಗುರುವಾರ ರಾತ್ರಿ ಪತ್ರಕರ್ತರಿಗೆ ತಿಳಿಸಿದರು.ಸಂಪುಟದಿಂದ ಯಾರನ್ನು ಕೈಬಿಡುವ ಪ್ರಶ್ನೆ ಇಲ್ಲ. ಎಲ್ಲರೂ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದಾರೆ. ಖಾಲಿ ಇರುವ ಸ್ಥಾನಗಳಿಗೆ ಮಾತ್ರ ಹೊಸಬರನ್ನು ನೇಮಕ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಶಾಸಕಾಂಗ ಪಕ್ಷ (ಮುಖ್ಯಮಂತ್ರಿ) ದ ನಾಯಕನ ಬದಲಾವಣೆ ಪ್ರಶ್ನೆ ಇಲ್ಲ. ಬದಲಾವಣೆ ಸಂದರ್ಭ ಏನಿದೆ? ಬದಲಾವಣೆ ಮಾಡಿ ಎಂದು ಯಾರು ಕೇಳಿದ್ದಾರೆ. ಇವೆಲ್ಲ ವಿರೋಧ ಪಕ್ಷಗಳು ಹಬ್ಬಿಸುತ್ತಿರುವ ಗುಲ್ಲು. ಇಂಥ ವದಂತಿ ಹರಡಿ ಅವರು ತೃಪ್ತಿ ಪಟ್ಟುಕೊಳ್ಳಲಿ ಎಂದು ಕುಟುಕಿದರು.ವಿರೋಧ ಪಕ್ಷಗಳಿಗೆ ಜನ ಪಾಠ ಕಲಿಸಿದ್ದಾರೆ. ಸಾಲದೆಂಬುದಕ್ಕೆ. ಪರಮೇಶ್ವರ್, ಆಸ್ಕರ್, ಪೂಜಾರಿ, ಜಯಚಂದ್ರ ಅವರಿಗೆ ಮಣ್ಣು ಮುಕ್ಕಿಸಿದ್ದಾರೆ. ಇನ್ನಾದರೂ ಅವರು ಪಾಠ ಕಲಿತುಕೊಳ್ಳದಿದ್ದರೆ ಹೇಗೆ ಎಂದು ಛೇಡಿಸಿದರು. ‘ನನ್ನ ದೆಹಲಿ ಭೇಟಿಗೆ ವಿಶೇಷ ಅರ್ಥವಿಲ್ಲ. ಕಳೆದ ವಾರವೇ ಬರಬೇಕಿತ್ತು. ಆದರೆ, ಆಗಲಿಲ್ಲ. ಶುಕ್ರವಾರ ಅಡ್ವಾಣಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡುತ್ತೇನೆ. ಅಧ್ಯಕ್ಷ  ಗಡ್ಕರಿ 20ರಂದು ಪಕ್ಷದ ಸಮಾವೇಶಕ್ಕೆ ಬೆಂಗಳೂರಿಗೆ ಧಾವಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.