ಬಜೆಟ್ ಪ್ರತಿಕ್ರಿಯೆ...

7

ಬಜೆಟ್ ಪ್ರತಿಕ್ರಿಯೆ...

Published:
Updated:

ಹಣದುಬ್ಬರ, ಹಣಕಾಸು ನಿರ್ವಹಣೆ ಮತ್ತಿತರ ಗಂಭೀರ ವಿಚಾರಗಳ ಬಗ್ಗೆ ಪ್ರಣವ್ ಮುಖರ್ಜಿ ಅವರು ಬಜೆಟ್‌ನಲ್ಲಿ ಯಾವುದೇ ಕಾರ್ಯಯೋಜನೆ ಪ್ರಕಟಿಸಿಲ್ಲ. ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುವ ಬಗ್ಗೆ ಯಾವುದೇ ಪ್ರಸ್ತಾವ ಬಜೆಟ್‌ನಲ್ಲಿ ಇಲ್ಲ. ಇದು ಕಪ್ಪು ಹಣದ ವಿಷಯದಲ್ಲಿ ಯುಪಿಎ ಸರ್ಕಾರ  ಇಚ್ಛಾಶಕ್ತಿಯ ಕೊರತೆ ಹೊಂದಿರುವುದನ್ನು ಎತ್ತಿ ತೋರುತ್ತದೆ. ರಾಜ್ಯ ಸರ್ಕಾರ ಕೃಷಿ ಸಾಲದ ಬಡ್ಡಿ ದರವನ್ನು ಶೇಕಡ 1ಕ್ಕೆ ಇಳಿಸಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವೂ ಪ್ರಕಟಿಸಬೇಕಿತ್ತು. ಸಾವಯವ ಕೃಷಿಗೆ ಉತ್ತೇಜನ ಮತ್ತು ಕೃಷಿ ಸಾಲದ ಮೊತ್ತವನ್ನು 4.75 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ ಕ್ರಮ. ಆದರೂ ಈ ಬಜೆಟ್ ದೀರ್ಘಕಾಲೀನ ಯೋಜನೆಗಳ ಕೊರತೆಯನ್ನು ಹೊಂದಿದೆ.

- ಕೆ.ಎಸ್.ಈಶ್ವರಪ್ಪ,

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಕೇಂದ್ರ ಸರ್ಕಾರ ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ವಲಯಗಳ ಸಮಗ್ರ ಪ್ರಗತಿಗೆ ಪೂರಕವಾದ ಬಜೆಟ್ ಮಂಡಿಸಿದೆ. ದೇಶದ ಸರ್ವತೋಮುಖ ಪ್ರಗತಿಯ ಆಶಯ ಹೊಂದಿರುವ ಬಜೆಟ್ ಮಂಡಿಸಿರುವುದಕ್ಕಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ನಾನು ಅಭಿನಂದಿಸುತ್ತೇನೆ. ಶ್ರೀಸಾಮಾನ್ಯನ ಮೇಲೆ ಯಾವುದೇ ಹೊರೆ ಹೇರದೇ ಉತ್ತಮ ಬಜೆಟ್ ನೀಡಲಾಗಿದೆ. ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಒತ್ತು ನೀಡಿದ್ದ ಕ್ಷೇತ್ರಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಹಣಕಾಸು ನಿರ್ವಹಣೆಯಲ್ಲಿ ಸಮತೋಲನ ಸಾಧಿಸುವ ಗುರಿ ಈ ಬಜೆಟ್‌ನ ಹಿಂದಿದೆ. ಕೊರತೆಯನ್ನು ನೀಗಿಸಿ, ದೇಶದ ನಿವ್ವಳ ಆಂತರಿಕ ಉತ್ಪನ್ನದ ದರ ಹೆಚ್ಚಿಸುವುದು ಪ್ರಣವ್ ಉದ್ದೇಶ. ಎಲ್ಲರ ದೃಷ್ಟಿಯಿಂದಲೂ ಇದು ಒಂದು ಒಳ್ಳೆಯ ಬಜೆಟ್.

- ಡಾ.ಜಿ.ಪರಮೇಶ್ವರ್,

ಕೆಪಿಸಿಸಿ ಅಧ್ಯಕ್ಷ

ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸೋಮವಾರ ಮಂಡಿಸಿರುವ ಬಜೆಟ್‌ಗೆ ಯಾವುದೇ ಗುತ್ತುಗುರಿ ಇಲ್ಲ. ಹಿಂದಿನಂತೆಯೇ ಇದೂ ನಿರಾಶಾದಾಯಕ ಬಜೆಟ್. ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಯಾವುದೇ ಕಾರ್ಯಕ್ರಮವನ್ನೂ ಬಜೆಟ್‌ನಲ್ಲಿ ಪ್ರಕಟಿಸಿಲ್ಲ. ಬಜೆಟ್‌ನಲ್ಲಿ ಸ್ಪಷ್ಟತೆ ಇಲ್ಲ. ಶಿಕ್ಷಣ ಹೊರತುಪಡಿಸಿ ಯಾವುದೇ ಕ್ಷೇತ್ರಕ್ಕೂ ಪೂರಕವಾದ ಅಂಶಗಳಿಲ್ಲ. ಬಜೆಟ್ ಮಂಡಿಸಿದ ಮುಖರ್ಜಿ ಅವರಲ್ಲಿ ಆತ್ಮವಿಶ್ವಾಸ ಇರಲಿಲ್ಲ, ಬಜೆಟ್‌ನಲ್ಲೂ ಅದು ಇಲ್ಲ.

- ಎಚ್.ಡಿ.ಕುಮಾರಸ್ವಾಮಿ,

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ.

ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿರುವುದು ಆಶಾದಾಯಕ ವಿಚಾರ. ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತನ್ನಿಂದಲೇ ಕೃಷಿ ಬಜೆಟ್ ಎಂದು ಬೀಗುವಂತಿಲ್ಲ. ಕೃಷಿಗೆ ಆದ್ಯತೆ ನೀಡುವುದರ ಮೂಲಕ ದೇಶದಲ್ಲಿ ಮತ್ತೊಂದು ಹಸಿರು ಕ್ರಾಂತಿಗೆ ಕರೆ ನೀಡಿದಂತಾಗಿದೆ. ದೇಶದಲ್ಲಿ ಯಾರೂ ಹಸಿವಿನಿಂದ ಸಾಯಬಾರದು, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿಕೊಳ್ಳಬೇಕು ಎಂಬ ಸಂದೇಶ ಇಲ್ಲಿದೆ.

- ಎಂ.ಸಿ.ನಾಣಯ್ಯ

ವಿಧಾನ ಪರಿಷತ್ತಿನ ಜೆಡಿಎಸ್ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry