ಬಜೆಟ್ ಬಳಿಕ ಸಂತ್ರಸ್ತರ ಸಮಸ್ಯೆ ಇತ್ಯರ್ಥ: ಸಚಿವ ಪಾಟೀಲ

ಬಾಗಲಕೋಟೆ: ರಾಜ್ಯ ಬಜೆಟ್ ಬಳಿಕ ನಗರದ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂತ್ರಸ್ತರು ಹಾಗೂ ರೈತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಅವರು ಮಾತನಾಡಿದರು.
ಬಿಟಿಡಿಎ ನಿಯಮಗಳನ್ನು ಮೀರಿ ಯಾವುದೇ ಕೆಲಸವನ್ನು ಮಾಡುವುದಿಲ್ಲ, ಕೆಲವೊಂದು ಕಾನೂನು ತೊಡಕುಗಳಿರುತ್ತವೆ, ಹೀಗಾಗಿ ವಿಳಂಬವಾಗುತ್ತಿದೆ. ಸಂತ್ರಸ್ತರಿಗೆ ತಾರತಮ್ಯ ಆಗದಂತಹ ರೀತಿಯಲ್ಲಿ ಸರ್ಕಾರ ಕೆಲಸ ಮಾಡಲಿದೆ ಎಂದರು.
ಮುಳುಗಡೆ ಸಂತ್ರಸ್ತರು, ರೈತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಗ್ಯ ತೀರ್ಮಾನ ಕೈಗೊಂಡು ನವನಗರ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಯೂನಿಟ್-3 ರಲ್ಲಿ ಸಂತ್ರಸ್ತರಿಗೆ ನಿವೇಶನ ನಿರ್ಮಿಸಲು ಅಗತ್ಯವಿರುವಷ್ಟು ಮಾತ್ರ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುವುದು, ಅನವಶ್ಯಕವಾಗಿ ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ಕಿತ್ತುಕೊಳ್ಳುವುದಿಲ್ಲ, ಈ ಬಗ್ಗೆ ಲೆಕ್ಕಾಚಾರ ಹಾಕಿ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ ಎಂದರು.
ನವನಗರದಲ್ಲಿ ಈ ಹಿಂದೆ ಬೇಕಾಬಿಟ್ಟಿ ನಿವೇಶನ ಹಂಚಿಕೆಯಾಗಿರುವ ಬಗ್ಗೆ ಸಂತ್ರಸ್ತರು ತನಿಖೆ ನಡೆಸಲು ತಿಳಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಬಿಟಿಡಿಎಗೆ ನೂತನ ಮಂಡಳಿ ರಚನೆಯಾಗುವವರಿಗೆ ಸಂತ್ರಸ್ತರ ಬೇಡಿಕೆ ಈಡೇರುವುದಿಲ್ಲ ಎಂಬ ಸಂಶಯ ಬೇಡ, ಮಂಡಳಿ ಇಲ್ಲದಿದ್ದರೂ ಪುನರ್ವಸತಿ ಕೆಲಸ ನಿರಂತರವಾಗಿ ನಡೆಯಲಿದೆ, ಸರ್ಕಾರದ ಸೂಚನೆಯಂತೆ ಅಧಿಕಾರಿಗಳು ಕೆಲಸ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಬಾಗಲಕೋಟೆಯಲ್ಲಿ ಈಗಾಗಲೇ ಮುಳುಗಡೆಯಾಗಿರುವ ಕೆಲವೊಂದು ಕಟ್ಟಡಗಳು ಹಾಗೂ ಅಂಗಡಿಗಳ ಸರ್ವೇ ಮಾಡುವ ಸಂದರ್ಭದಲ್ಲಿ ಬಿಟ್ಟು ಹೋಗಿದ್ದ ಪ್ರಕರಣಗಳಿದ್ದರೇ ಅಂತಹವುಗಳನ್ನು ಪರಿಶೀಲಿಸಿ ಸಂತ್ರಸ್ತರಿಗೆ ನಿವೇಶನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಎಚ್.ವೈ.ಮೇಟಿ, ಜಿಲ್ಲಾಧಿಕಾರಿ ಮನೋಜ್ ಜೈನ್, ನಗರ ಯೋಜನಾ ನಿರ್ದೇಶಕ ಶಂಕರಗೌಡ ಸೋಮನಾಳ, ಬಿಟಿಡಿಎ ಮುಖ್ಯ ಎಂಜಿನಿಯರ್ ಕ್ಷೇತ್ರಪಾಲ್, ಬಿಟಿಡಿಎ ಮಾಜಿ ಸಭಾಪತಿ ಜಿ.ಎನ್.ಪಾಟೀಲ, ಅಶೋಕ ಲಾಗಲೋಟಿ, ಮಲ್ಲಿಕಾರ್ಜುನ ಶಿರೂರ, ಲಕ್ಷ್ಮೀನಾರಾಯಣ ಕಾಸಟ್, ಶ್ರೀನಿವಾಸ ಛಬ್ಬಿ, ಮಳಿಯಪ್ಪ ಮಜ್ಜಗಿ, ಬಸವರಾಜ ಪರ್ವತಿಮಠ, ಮಂಜು ಏಳೆಮ್ಮಿ, ಶಂಕರ ತಪಶೆಟ್ಟಿ, ಶಿವಕುಮಾರ ನಂದಿಕೋಲಮಠ, ಎಚ್. ಎಲ್. ರೇಶ್ಮಿ, ಪರಶುರಾಮ ಛಬ್ಬಿ, ಕೃಷ್ಣಾ ನಾಯಕ, ಪ್ರಭು ಹಡಗಲಿ ಮತ್ತಿತರರು ಸಭೆಯಲ್ಲಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.