ಬಜೆಟ್ ಮಂಡನೆ ಅನುಮಾನ

7

ಬಜೆಟ್ ಮಂಡನೆ ಅನುಮಾನ

Published:
Updated:

ಬೆಂಗಳೂರು:  ಆಡಳಿತಾರೂಢ ಬಿಜೆಪಿ ಮತ್ತು ಕೆಜೆಪಿ ನಡುವಿನ ಮುಸುಕಿನ ಗುದ್ದಾಟ ಬಜೆಟ್ ಮಂಡನೆ ಆಗುವುದೊ ಇಲ್ಲವೊ ಎಂಬ ಅನುಮಾನ ಮೂಡಿಸಿದೆ.`ಫೆಬ್ರುವರಿಯಲ್ಲಿ ಬಜೆಟ್ ಮಂಡಿಸುತ್ತೇನೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಿಸಿದ್ದಾರೆ. ಆದರೆ, ರಾಜಕೀಯ ಅಸ್ಥಿರತೆ ಅದಕ್ಕೆ ಅವಕಾಶ ನೀಡುವುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.ಚುನಾವಣಾ ವರ್ಷ. ಮುಂಗಡ ಪತ್ರದಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ಕಿಂಚಿತ್ತು ವರ್ಚಸ್ಸು ವೃದ್ಧಿಗೆ ಬಿಜೆಪಿ ಮುಂದಾಗಲಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟರೆ ಆಗುವ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಕರ್ನಾಟಕ ಜನತಾ ಪಕ್ಷದ ಮುಖಂಡರು ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ವಿಧಾನಸಭೆ ವಿಸರ್ಜಿಸುವಂತೆ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪದೇ ಪದೇ ಸವಾಲು ಎಸೆದಿದ್ದಾರೆ. ಇದರ ಬೆನ್ನಿಗೇ, `ನಾವಾಗಿಯೇ ಸರ್ಕಾರ ಉರುಳಿಸುವುದಿಲ್ಲ' ಎಂದೂ ಹೇಳುತ್ತಿದ್ದಾರೆ. ಆದರೆ, ಆಂತರಿಕವಾಗಿ ಬೇರೆ ಬಗೆಯ ಲೆಕ್ಕಾಚಾರಗಳು ನಡೆದಿವೆ.ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಶಾಸಕರ ಮನವೊಲಿಸುವ ಯತ್ನಕ್ಕೆ ಬಿಜೆಪಿ ಮುಂದಾಗಿದೆ. ಸರ್ಕಾರ ಹೆಚ್ಚು ದಿನ ಮುಂದುವರಿದರೆ ಶಾಸಕರು ನಿಲುವು ಬದಲಿಸಬಹುದು. ಇದಕ್ಕೆ ಅವಕಾಶ ನೀಡಬಾರದು ಎಂದು ಕೆಜೆಪಿಯ ಕೆಲವು ಮುಖಂಡರು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.ಸಂಕ್ರಾಂತಿ ಬಳಿಕ ಖಚಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ತೀರ್ಮಾನದ ಮೇಲೆ ಬಜೆಟ್ ಹಣೆಬರಹ ನಿರ್ಧಾರವಾಗಲಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕೆಜೆಪಿ ಮುಖಂಡರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.ಶಿವಪ್ಪ ಮನೆಗೆ ಬಿಎಸ್‌ವೈ

ಬೆಂಗಳೂರು: ಬಿಜೆಪಿ ಹಿರಿಯರ ವೇದಿಕೆ ಅಧ್ಯಕ್ಷ ಬಿ.ಬಿ.ಶಿವಪ್ಪ ಅವರನ್ನು ಅವರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಮಂಗಳವಾರ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು. ಶಿವಪ್ಪ ಅವರು ಜ್ವರದಿಂದ ಬಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry