ಸೋಮವಾರ, ಮೇ 23, 2022
30 °C
ಮೇಯರ್ ತರಾತುರಿಗೆ ಬಿಜೆಪಿ ಸದಸ್ಯರ ವಿರೋಧ: ಕಾಂಗ್ರೆಸ್ ಆತುರ

ಬಜೆಟ್ ಮಂಡನೆ 26ಕ್ಕೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬಿಜೆಪಿ ಸದಸ್ಯರಿಂದ ವ್ಯಕ್ತವಾದ ತೀವ್ರ ಪ್ರತಿರೋಧದ ಪರಿಣಾಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಬಜೆಟ್ ಮಂಡನೆ ಸಭೆಯನ್ನು ಇದೇ 26ಕ್ಕೆ ಮುಂದೂಡಲಾಗಿದೆ.`ಅಧಿಕಾರಿಗಳು ತಯಾರಿಸಿದ ಆಯ-ವ್ಯಯವನ್ನು ತರಾತುರಿಯಲ್ಲಿ ಮಂಡಿಸಿ ಅದರ ಲೋಪಗಳಿಂದ ಪಕ್ಷ ಕೆಟ್ಟ ಹೆಸರು ಪಡೆಯುವುದು ಬೇಡ ಎನ್ನುವ ಕಾಳಜಿಯೇ ನಮ್ಮ ವಿರೋಧಕ್ಕೆ ಕಾರಣ' ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ.ಮೇಯರ್ ಡಿ.ವೆಂಕಟೇಶಮೂರ್ತಿ ಅವರಿಗೆ ಎರಡು ಬಜೆಟ್ ಮಂಡಿಸಿದ ದಾಖಲೆ ಮಾಡುವ ತವಕ. ಆದರೆ, `ಕಾಂಗ್ರೆಸ್ ಪಕ್ಷದ ಆಟಕ್ಕೆ  ವೆಂಕಟೇಶಮೂರ್ತಿ ಕೈಗೊಂಬೆ ಆಗಬಾರದು' ಎನ್ನುವುದು ಬಿಜೆಪಿ ಮುಖಂಡರ ಆಗ್ರಹವಾಗಿದೆ. `ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮುದಾಯಕ್ಕೆ ಸೇರಿದ ವೆಂಕಟೇಶಮೂರ್ತಿ, ರಾಜ್ಯ ಸರ್ಕಾರದ ಆತುರಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ' ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸುತ್ತಾರೆ.ಏಪ್ರಿಲ್ 27ರಂದೇ ಮೇಯರ್ ಅವಧಿ ಪೂರ್ಣಗೊಂಡಿದ್ದರೂ ಮೀಸಲಾತಿ ವಿವಾದದ ಪರಿಣಾಮ ಹೊಸ ಮೇಯರ್ ಆಯ್ಕೆಯಾಗದೆ ವೆಂಕಟೇಶಮೂರ್ತಿ ಅವರೇ ಮುಂದುವರಿದಿದ್ದಾರೆ. ನೂತನ ಮೇಯರ್ ಆಯ್ಕೆ ಆಗದ ಕಾರಣ ಬಜೆಟ್ ಮಂಡನೆ ಕೂಡ ಆಗಿರಲಿಲ್ಲ. ಹೆಚ್ಚು-ಕಡಿಮೆ ಮೂರು ತಿಂಗಳ ವಿಳಂಬದ ಬಳಿಕ ಬಜೆಟ್ ಮಂಡನೆಗೆ ಅವಕಾಶ ದೊರೆತಿದೆ.ಸರ್ಕಾರ ಬಜೆಟ್ ಮಂಡನೆಗೆ ಒಪ್ಪಿಗೆ ಕೊಟ್ಟ ಬೆನ್ನಹಿಂದೆಯೇ ಮೇಯರ್ ಸಭೆಗೆ ದಿನವನ್ನೂ ನಿಗದಿಮಾಡಿದ್ದರು. ಮೇಯರ್ ಸೂಚನೆಯಂತೆ 20ರಂದು ಸಭೆ ನಡೆಸಲು ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿಗಳು ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ, ಏಕಾಏಕಿ ಈಗ ಸಭೆಯನ್ನು ಮುಂದೂಡಲಾಗಿದೆ.ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್. ಅಶೋಕ ಅವರ ನೇತೃತ್ವದಲ್ಲಿ ಸಭೆ ಸೇರಿದ ಬಿಜೆಪಿ ಸದಸ್ಯರು ತರಾತುರಿಯಲ್ಲಿ ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸಿದ್ದು, ವೆಂಕಟೇಶಮೂರ್ತಿ ಅವರಿಗೂ ಸದಸ್ಯರ ಅಭಿಪ್ರಾಯವನ್ನು ತಿಳಿಸಲಾಗಿದೆ. ಶುಕ್ರವಾರ ಮತ್ತೆ ಸದಸ್ಯರ ಸಭೆ ನಡೆಸಿದ ಮೇಯರ್, ಬಜೆಟ್ ಮಂಡನೆ ಸಭೆಯನ್ನು ಮುಂದೂಡಿದ ನಿರ್ಧಾರ ಪ್ರಕಟಿಸಿದ್ದಾರೆ.`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ವೆಂಕಟೇಶಮೂರ್ತಿ, `ಬಜೆಟ್ ಭಾಷಣದ ಕರಡು ಪ್ರತಿ ಶುಕ್ರವಾರ ಸಂಜೆಯಷ್ಟೇ ನನ್ನ ಕೈಸೇರಿದೆ. ನಾನು ಅದನ್ನು ವಿವರವಾಗಿ ಪರಿಶೀಲಿಸಬೇಕಿದೆ. ಅದರಲ್ಲಿ ಬದಲಾವಣೆ ಅಗತ್ಯವಾದರೆ, ಮಾಡಿ, ಪ್ರತಿಗಳನ್ನು ಮುದ್ರಿಸಲು ಕಾಲಾವಕಾಶದ ಅಗತ್ಯವಿದೆ. ಹೀಗಾಗಿ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ' ಎಂದು ಹೇಳಿದರು.`ಬಜೆಟ್ ಅಂತಿಮಗೊಳಿಸುವ ಮುನ್ನ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು, ಶಾಸಕರು ಮತ್ತು ಪಕ್ಷದ ಹಿರಿಯರ ಅಭಿಪ್ರಾಯ ಪಡೆಯಲಿದ್ದೇನೆ. ಸರ್ಕಾರದ ನಿರ್ದೇಶನಗಳನ್ನೂ ಪಾಲನೆ ಮಾಡಲಿದ್ದೇನೆ' ಎಂದು ತಿಳಿಸಿದರು. `ಈ ಸಲ ಮಂಡನೆ ಆಗಲಿರುವ ಬಜೆಟ್ ಅವಧಿ ಕೇವಲ 7 ತಿಂಗಳು ಮಾತ್ರ. ಅಲ್ಲದೆ ಸರ್ಕಾರ ವಾಸ್ತವಿಕ ಅಂಶಗಳ ಆಧಾರದ ಮೇಲೆ ಬಜೆಟ್ ಸಿದ್ಧಪಡಿಸಲು ಸೂಚನೆ ನೀಡಿದೆ. ಹೀಗಾಗಿ ಅದರ ಗಾತ್ರ ತಗ್ಗಲಿದೆ' ಎಂದು ವಿವರಿಸಿದರು.`ಬಜೆಟ್ ಮಂಡನೆಯಲ್ಲಿ ತರಾತುರಿ ಬೇಡ ಎನ್ನುವುದು ನಮ್ಮ ಸದಸ್ಯರ ಅಭಿಪ್ರಾಯವಾಗಿತ್ತು. ಅವರ ಕಳಕಳಿಗೂ ಅರ್ಥ ಇದೆ. ಬಜೆಟ್‌ನಲ್ಲಿ ಯಾವ, ಯಾವ ಅಂಶಗಳು ಸೇರ್ಪಡೆ ಆಗಬೇಕು ಎನ್ನುವುದು ಚರ್ಚೆಗೆ ಒಳಗಾಗಬೇಕಾದ ವಿಷಯವಾಗಿದೆ' ಎಂದು ಮೇಯರ್ ಹೇಳಿದರು.`ಆಡಳಿತ ಪಕ್ಷವನ್ನೇ ಕತ್ತಲಲ್ಲಿ ಇಟ್ಟು ಬಜೆಟ್ ಸಿದ್ಧಪಡಿಸಲಾಗುತ್ತಿದೆ. ತರಾತುರಿಯಲ್ಲಿ ಬಜೆಟ್ ಮಂಡನೆ ಮಾಡುವುದು ಬೇಡ ಎನ್ನುವುದಷ್ಟೇ ನಮ್ಮ ಅನಿಸಿಕೆಯಾಗಿದೆ' ಎಂದು ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್ ತಿಳಿಸಿದರು. `ಮೇಯರ್ ಈಗಾಗಲೇ ಸಭೆಯನ್ನು ಮುಂದೂಡಲು ನಿರ್ಧರಿಸಿದ್ದು, ಸರ್ಕಾರವೂ ಅನುಮತಿ ನೀಡಿದೆ. ಕಾಲಾವಕಾಶ ದೊರೆತಿದ್ದರಿಂದ ಚರ್ಚೆ ನಡೆಸಲು ಆಸ್ಪದವಾಗಿದೆ' ಎಂದು ಅಭಿಪ್ರಾಯಪಟ್ಟರು.ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್ ಸಭೆಯನ್ನು ಮುಂದೂಡಿದ ಮೇಯರ್ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. `ಈಗಾಗಲೇ ನಾಲ್ಕು ತಿಂಗಳದಷ್ಟು ವಿಳಂಬವಾಗಿದೆ. ಸರ್ಕಾರ ಅವಕಾಶ ನೀಡಿದ ಮೇಲೂ ಸಭೆ ಮುಂದೂಡುವ ಅಗತ್ಯವೇನಿತ್ತು' ಎಂದು ಅವರು ಪ್ರಶ್ನಿಸಿದರು.`ಮಳೆ ನಿತ್ಯ ಸುರಿಯುತ್ತಿದ್ದು, ತುರ್ತು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಬಜೆಟ್ ಮಂಡನೆ ಸಭೆ ಮುಂದೆ ಹಾಕುವಲ್ಲಿ ಯಾವುದೇ ಅರ್ಥವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.