ಬುಧವಾರ, ಜೂನ್ 16, 2021
23 °C

ಬಜೆಟ್: ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಜಾರಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಯಾವುದೇ ನಿಗದಿತ ಸಮಯ ನಿಗದಿಪಡಿಸಿಲ್ಲ. ಇದು ಆರ್ಥಿಕ `ಅಸ್ಥಿರತೆ~ ಮುಂದುವರೆಯುವಂತೆ ಮಾಡಿದೆ ಎಂದು ಜಾಗತಿಕ ರೇಟಿಂಗ್ಸ್ ಸಂಸ್ಥೆ ಸ್ಟಾಂಡರ್ಡ್ ಅಂಡ್ ಪೂರ್ಸ್‌ ಹೇಳಿದೆ.`ಜಿಎಸ್‌ಟಿ~ ಮತ್ತು `ಡಿಟಿಸಿ~ಯನ್ನು ಆಧಾರವಾಗಿಟ್ಟುಕೊಂಡು ಹಲವು ಆರ್ಥಿಕ ಸುಧಾರಣಾ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಚಾಲನೆ ನೀಡಲಾಗಿದೆ. ಆದರೆ, `ಜಿಎಸ್‌ಟಿ~ ಮತ್ತು ಡಿಟಿಸಿ ಜಾರಿಗೆ ಸಮಯ ನಿಗದಿಪಡಿಸಲು ಪ್ರಣವ್ ವಿಫಲರಾಗಿದ್ದಾರೆ. ದೇಶದ ಸಾರ್ವಜನಿಕ ಹಣಕಾಸು ವ್ಯವಸ್ಥೆಯು ತೀರಾ ದುರ್ಬಲವಾಗಿದ್ದು, ಇದರಿಂದ ಇನ್ನಷ್ಟು ಒತ್ತಡ ಬಿದ್ದಿದೆ  ಎಂದು ಮತ್ತೊಂದು  ಜಾಗತಿಕ ಸಾಲ ಮೌಲ್ಯ ಮಾಪನ ಸಂಸ್ಥೆ `ಫಿಟ್ಚ್~ ಹೇಳಿದೆ.ವಿತ್ತೀಯ ಕೊರತೆ ಅಂತರ ತಗ್ಗಿಸಲು ಸರ್ಕಾರಕ್ಕೆ ಇರುವ ಸಾಮರ್ಥ್ಯ ಮತ್ತು ಆ ನಿಟ್ಟಿನಲ್ಲಿ ಕೈಗೊಳ್ಳುವ ಪರಿಣಾಮಕಾರಿ ಕ್ರಮಗಳನ್ನು ಆಧರಿಸಿ ದೇಶವೊಂದರ ಸಾಲ ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ, ಪ್ರಸಕ್ತ ಬಜೆಟ್‌ನಲ್ಲಿ ವಿತ್ತೀಯ ಕೊರತೆ ತಗ್ಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಕಡಿಮೆ ಪ್ರಮಾಣದಲ್ಲಿವೆ. ಆದಾಗ್ಯೂ,  ಭಾರತಕ್ಕೆ ನೀಡಿರುವ ರೇಟಿಂಗ್ ಸ್ಥಿರವಾಗಿದೆ ಎಂದು ಸಂಸ್ಥೆ ಹೇಳಿದೆ.ಬಜೆಟ್ ಪ್ರಕಾರ 2012-13ನೇ ಸಾಲಿನಲ್ಲಿ ದೇಶದ ವಿತ್ತೀಯ ಕೊರತೆಯು ಆರ್ಥಿಕ ವೃದ್ಧಿ ದರದ (ಜಿಡಿಪಿ) ಶೇ 5.1ರಷ್ಟು ಇರಲಿದೆ. ಪ್ರಸಕ್ತ  ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಶೇ 5.9ರಷ್ಟಿದೆ. ಮುಂದಿನ ಹಣಕಾಸು ವರ್ಷದಲ್ಲೂ ಗರಿಷ್ಠ ಮಟ್ಟದ ವಿತ್ತೀಯ ಕೊರತೆ ಅಂತರ ಮುಂದುವರೆಯಲಿದೆ ಎಂದು ಮೌಲ್ಯಮಾಪನ ಸಂಸ್ಥೆ ಎಸ್ ಅಂಡ್ ಪಿ ಹೇಳಿದೆ.ಬಜೆಟ್‌ನಲ್ಲಿ `ಜಿಡಿಪಿ~ಯ ಶೇ 2ರಷ್ಟನ್ನು ಸಬ್ಸಿಡಿಗಾಗಿ ನಿಗದಿಪಡಿಸಲಾಗಿದೆ.  ಸಬ್ಸಿಡಿ ತಗ್ಗಿಸಲು ಕೈಗೊಂಡಿರುವ ಕ್ರಮಗಳಿಂದ ಮುಂದಿನ ಮೂರು ವರ್ಷಗಳಲ್ಲಿ ಇದು ಶೇ 1.75ಕ್ಕೆ ಇಳಿಯುವ ಸೂಚನೆ ಇದೆ ಎಂದು ಪ್ರಣವ್ ಹೇಳಿದ್ದಾರೆ.2003ರ ಹಣಕಾಸು ನಿರ್ವಹಣೆ ಮತ್ತು ಬಜೆಟ್ ಹೊಣೆಗಾರಿಕೆ ನೀತಿಗೆ (ಎಫ್‌ಆರ್‌ಬಿಎಂ) ತಿದ್ದುಪಡಿ ತರುವ ಕುರಿತೂ ಪ್ರಣವ್ ಮುಖರ್ಜಿ ಬಜೆಟ್‌ನಲ್ಲಿ ಗಮನ ಸೆಳೆದಿದ್ದಾರೆ. ಈ ತಿದ್ದುಪಡಿಯಿಂದ ಹೂಡಿಕೆದಾರರ ಆತ್ಮವಿಶ್ವಾಸ ಮರಳಲಿದೆ ಮತ್ತು ವಿತ್ತೀಯ ಸೇರ್ಪಡೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಇರುವ ಬದ್ಧತೆ ವ್ಯಕ್ತವಾಗುತ್ತದೆ ಎಂದು  `ಎಸ್‌ಅಂಡ್‌ಪಿ~ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.